ಶಿವಮೊಗ್ಗ: ಅವರಿಬ್ಬರು ಎರಡೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಜಾತಿ ಅಡ್ಡಬಂದ ಕಾರಣ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ ಯುವಕ, ಕೊನೆಗೆ ಆಕೆಯನ್ನು ಕೊಂದು ಶವವನ್ನು ಕಾಡಿನಲ್ಲಿ ಹೂತು ಹಾಕಿದ್ದ. ಕಾಡಿನಲ್ಲೇ ಕೊಳೆತು ಹೋಗಬೇಕಿದ್ದ ಯುವತಿಯ ಮೃತದೇಹ ಇದೀಗ 'ನಾಪತ್ತೆ ಪ್ರಕರಣ'ದಿಂದ ಪತ್ತೆಯಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಈ ಪ್ರಕರಣದ ಕುರಿತು ವಿವರವಾಗಿ ಮಾಹಿತಿ ನೀಡಿ, "ಜುಲೈ 2ರಂದು ಕೊಪ್ಪದ ನಿವಾಸಿ ಸೌಮ್ಯ (27) ಎಂಬವರ ಕೊಲೆ ನಡೆದಿತ್ತು. ಸುಜನ್ (25) ಪ್ರಕರಣದ ಆರೋಪಿ. ಈತ ಭಾರತ್ ಫೈನಾನ್ಸ್‌ನಲ್ಲಿ ಹಣ ಸಂಗ್ರಹಿಸುವ ಕೆಲಸ ಮಾಡಿಕೊಂಡಿದ್ದ. ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಈತನಿಗೆ ಸೌಮ್ಯ ಎಂಬ ಯುವತಿಯ ಪರಿಚಯವಾಗಿತ್ತು. ಇಬ್ಬರ ಸ್ನೇಹ ಪರಸ್ಪರ ಪ್ರೀತಿಯಾಗಿ ಬದಲಾಗಿತ್ತು. ಮದುವೆಯ ವಿಚಾರವಾಗಿ ಆಗಾಗ್ಗೆ ಭಿನ್ನಾಭಿಪ್ರಾಯಗಳೂ ಬರುತ್ತಿದ್ದವು. ಮುಂದೊಂದು ದಿನ ಸುಜನ್ ತೀರ್ಥಹಳ್ಳಿಯಿಂದ ಹೊನ್ನಾಳಿಗೆ ವರ್ಗಾವಣೆ ಆಗುತ್ತಾನೆ."
"ಕಳೆದ 8 ತಿಂಗಳ ಹಿಂದೆ ಸುಜನ್ ಸಾಗರ ಶಾಖೆಗೆ ವರ್ಗಾವಣೆಯಾಗಿದ್ದ. ಇಬ್ಬರ ಪ್ರೇಮ ಸಂಬಂಧ ಹಾಗೆಯೇ ಮುಂದುವರೆದಿತ್ತು. ಯುವತಿ ಸೌಮ್ಯ ತೀರ್ಥಹಳ್ಳಿ, ಹೊನ್ನಾಳಿ, ಸಾಗರಕ್ಕೆ ಬಂದು ಸುಜನ್‌ನನ್ನು ಭೇಟಿ ಮಾಡಿ ಹೋಗುತ್ತಿದ್ದಳು. ಜೂನ್ 30ರಂದು ಕೊಪ್ಪದಿಂದ ಸಾಗರಕ್ಕೆ ಬಂದು ಹೋಗಿದ್ದಾಳೆ. ಅಂದೂ ಸಹ ತನ್ನನ್ನು ಮದುವೆ ಆಗು ಎಂದು ಸುಮನ್‌ಗೆ ಮನವಿ ಮಾಡಿದ್ದಾಳೆ. ಅಷ್ಟರಲ್ಲಿ ಸುಜನ್ಗೆ ಬೇರೆ ಹುಡುಗಿ ಜೊತೆ ಸಲುಗೆ ಬೆಳೆದಿತ್ತು. ಅದು ಸೌಮ್ಯಗೆ ಗೂತ್ತಾಗಿದೆ. ಸುಜನ್ ಜೊತೆ ಜಗಳ ಮಾಡಿ ಮದುವೆಗೆ ಒತ್ತಾಯಿಸುತ್ತಾಳೆ. ಇದರಿಂದ ಸುಜನ್ಗೆ ಒತ್ತಡಕ್ಕೊಳಗಾಗಿದ್ದ" ಎಂದು ಅವರು ಮಾಹಿತಿ ನೀಡಿದರು.
ಜುಲೈ 2ರಂದು ಸೌಮ್ಯ ಸಾಗರಕ್ಕೆ ಬಂದು ಸುಜನ್‌ನನ್ನು ಭೇಟಿ ಮಾಡಲು ಪ್ರಯತ್ನಿಸುತ್ತಾಳೆ. ಆಗ ಆತ, ನಾನು ಕೆಲಸದಲ್ಲಿದ್ದೇನೆ. ಆಮೇಲೆ ಸಿಗುತ್ತೇನೆ ಎನ್ನುತ್ತಾನೆ. ಆದರೆ ಸೌಮ್ಯ ವಾಪಸ್ ಹೋಗಲಿಲ್ಲ. ಇದರ ಬದಲಿಗೆ, ಕೆಲಸದ ಬಳಿ ಬಂದು ಗಲಾಟೆ ಮಾಡುವುದಾಗಿ ಹೇಳಿದ್ದಾಳೆ. ಮಧ್ಯಾಹ್ನ 3:30ಕ್ಕೆ ಸುಜನ್ ಆಕೆಯನ್ನು ತನ್ನ ಬೈಕ್ನಲ್ಲಿ ಸಾಗರದಿಂದ ರಿಪ್ಪನ್‌ಪೇಟೆಗೆ ಕರೆದುಕೊಂಡು ಹೋಗುತ್ತಾನೆ. ನೀನು ಬಸ್‌ನಲ್ಲಿ ಹೋಗು ಎಂದಾಗ ಆಕೆ ಮತ್ತೆ ಜಗಳವಾಡುತ್ತಾಳೆ. ತೀರ್ಥಹಳ್ಳಿ ಹೆದ್ದಾರಿಪುರದಲ್ಲಿ ಬೈಕ್ನಲ್ಲಿ ಇಳಿಸಿ, ವಾಪಸ್ ಹೋಗು, ಮದುವೆಗೆ ನನಗೆ ಸಮಯ ಕೊಡು ಎಂದು ಹೇಳುತ್ತಾನೆ. ನಂತರ ನಿರ್ಜನ ಪ್ರದೇಶದಲ್ಲಿ ಇಬ್ಬರ ಮಧ್ಯೆ ಈ ವಿಷಯವಾಗಿ ಜಗಳ ನಡೆಯುತ್ತದೆ.
ಇದರಿಂದ ಕೋಪಗೊಂಡ ಸುಜನ್, ಆಕೆಯನ್ನು ನಿರ್ಜನ ಪ್ರದೇಶದ ರಸ್ತೆಯಿಂದ ಸ್ವಲ್ಪ ದೂರ ಕರೆದುಕೊಂಡ ಹೋಗಿ ಹಲ್ಲೆ ಮಾಡುತ್ತಾನೆ. ಇದರಿಂದ ಸೌಮ್ಯ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ನಂತರ ಪೊದೆಯ ಬಳಿ ಕರೆದುಕೊಂಡು ಹೋದಾಗ ಆಕೆಗೆ ಪ್ರಜ್ಞೆ ಬಂದಿದೆ. ಈ ವೇಳೆ ಆಕೆಯನ್ನು ದಾರುಣವಾಗಿ ಹತ್ಯೆ ಮಾಡಿದ್ದಾನೆ. ನಂತರ ಶವವನ್ನು ಅಲ್ಲಿಯೇ ಬಿಟ್ಟು ಸಾಗರಕ್ಕೆ ತೆರಳಿ ತನ್ನ ಬಳಿಯಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ಫೈನಾನ್ಸ್ಗೆ ಕಟ್ಟಿದ್ದಾನೆ. ಬಳಿಕ ತನ್ನ ಕಾರಿನಲ್ಲಿ ಶವ ಇದ್ದಲ್ಲಿಗೆ ಬಂದು, ಶವವನ್ನು ಕಾರಿನಲ್ಲಿ ಹಾಕಿಕೊಂಡು ಆನಂದಪುರಂನ ಮುಂಬಾಳು ಗ್ರಾಮದ ಸಮೀಪದ ರೈಲ್ವೆ ಹಳಿಯ ಸ್ವಲ್ಪ ದೂರದಲ್ಲಿ ಜೆಜೆಎಂ ಯೋಜನೆಗಾಗಿ ತೆಗೆದಿದ್ದ ಗುಂಡಿಯಲ್ಲಿ ಮುಚ್ಚಿ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನಾಪತ್ತೆ ಪ್ರಕರಣ ದಾಖಲಿಸಿದ ಸೌಮ್ಯ ಪೋಷಕರು: ಜುಲೈ 3ರಂದು ಸೌಮ್ಯ ಮನೆಗೆ ಬಾರದೇ ಇದ್ದಾಗ ಆಕೆಯ ಪೋಷಕರು ಕೊಪ್ಪ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಡ ಪೊಲೀಸರು ತನಿಖೆ ನಡೆಸಿದರೂ 20 ದಿನವಾದರೂ ಮಾಹಿತಿ ಸಿಗಲಿಲ್ಲ. ಆಕೆಯ ಮೊಬೈಲ್ನಿಂದ ಕೊನೆಯ ಫೋನ್ ಸುಜನ್ಗೆ ಹೋಗಿರುವುದು ಪತ್ತೆಯಾಗಿದೆ. ಇದರಿಂದ ಕೊಪ್ಪ ಪೊಲೀಸರು ಸುಜನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಗೈದ ಸಂಗತಿ ಬಾಯ್ಬಿಟ್ಟಿದ್ದಾನೆ.
ಇದಾದ ನಂತರ ಈ ಪ್ರಕರಣ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸರು ಸಾಗರದ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕೋರ್ಟ್ ಅನುಮತಿ ಪಡೆದು ಶವ ಹೊರತೆಗೆದು ಪರೀಕ್ಷೆ ನಡೆಸಿ, ಅವರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಸೌಮ್ಯ ಸಹೋದರಿಯ ಹೇಳಿಕೆ: ಸೌಮ್ಯ ಸಹೋದರಿ ಸುಮ ಮಾತನಾಡಿ, "ನಾವು ಫೈನಾನ್ಸ್‌ನಲ್ಲಿ ಸಾಲ ತೆಗೆದುಕೊಳ್ಳುವಾಗ ನಮ್ಮ ಫೋನ್ ನಂಬರ್ ತೆಗೆದುಕೊಂಡು ತಂಗಿಯನ್ನು ಸುಜನ್ ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆ ಆಗುವುದಾಗಿಯೂ ಹೇಳಿದ್ದ. ಕೊನೆಗೆ ನೀವು ಕೆಳಜಾತಿಯವರು, ನಾನು ನಿನ್ನನ್ನು ಮದುವೆ ಆಗುವುದಿಲ್ಲ ಎಂದಿದ್ದಾನೆ. ಇದರಿಂದ ಸೌಮ್ಯ ಆತ್ಮಹತ್ಯೆಗೂ ಯತ್ನಿಸಿದ್ದಳು. ಆಗ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಮೇಲೆ ಸುಜನ್ ಒಂದು ವರ್ಷದ ನಂತರ ಮದುವೆ ಆಗುವುದಾಗಿ ಹೇಳಿದ್ದ. ನಂತರ ಇಬ್ಬರು ಚೆನ್ನಾಗಿಯೇ ಇದ್ದರು."
"ಈ ನಡುವೆ ಆತ ಮತ್ತೊಂದು ಯುವತಿಯೊಂದಿಗೆ ಸಲುಗೆ ಬೆಳೆಸಿದ್ದ. ಆ ಯುವತಿ ಫೋನ್ ಮಾಡಿ ನಾನು ಸುಜನ್‌ನನ್ನು ಮದುವೆಯಾಗುವುದಾಗಿ ಹೇಳಿದ್ದಳು. ನಾವು ಮತ್ತೆ ಕೊಪ್ಪ ಪೊಲೀಸ್ ಠಾಣೆಗೆ ಹೋದಾಗ, ಸುಜನ್, ನಾನು ತಮಾಷೆ ಮಾಡಿದ್ದು ಎಂದಿದ್ದಾನೆ. ಸುಜನ್ ಹಾಗೂ ಆತನ ಅಮ್ಮ ಇಬ್ಬರೂ 6 ತಿಂಗಳ ನಂತರ ಮದುವೆ ಮಾಡಿಕೊಳ್ಳುವ ಕುರಿತು ಒಪ್ಪಂದ ಮಾಡಿಕೊಂಡಿದ್ದರು."
"ಸುಜನ್ಗಾಗಿ ಸೌಮ್ಯ ಸಾಲ ಮಾಡಿ ಹಣ ಕೊಟ್ಟಿದ್ದಳು. ಜುಲೈ 2ರಂದು ಆಕೆ ನರ್ಸಿಂಗ್ ಕಾಲೇಜಿಗೆ ಹೋಗುವುದಾಗಿ ಹೇಳಿ ಸಾಗರಕ್ಕೆ ಬಂದಿದ್ದಾಳೆ. ಅಂದು ಮನೆಗೆ ಫೋನ್ ಮಾಡಿ ಶಿಬಿರ ಇದೆ, ನಾನು ಬರುವುದು ತಡವಾಗುತ್ತದೆ ಎಂದಿದ್ದಳು. ರಾತ್ರಿಯಾದರೂ ಮನೆಗೆ ಬಾರದೆ ಹೋದಾಗ ಬೆಳಗ್ಗೆ ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಅಂದು ನಾವು ಸುಜನ್ಗೆ ಫೋನ್ ಮಾಡಿದಾಗ ಆಕೆಯನ್ನು ಬಸ್‌ನಲ್ಲಿ ಕಳುಹಿಸಿ ಕೊಟ್ಟಿದ್ದೇನೆ ಎಂದು ಹೇಳಿದ್ದ. ಈತನ ಮೇಲೆಯೇ ನಮಗೆ ಅನುಮಾನವಿದ್ದ ಕಾರಣ ಪೊಲೀಸರು ಸುಜನ್‌ನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ವಿಚಾರ ಹೊರಬಂದಿದೆ. ಈತನಿಗೆ ಕಠಿಣ ಶಿಕ್ಷೆ ಆಗಬೇಕು" ಎಂದು ಅವರು ಒತ್ತಾಯಿಸಿದರು.