ಹುಬ್ಬಳ್ಳಿ: ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ನವನಗರದ ವ್ಯಕ್ತಿಯೊಬ್ಬರಿಗೆ 22.33 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಮೊಹಮ್ಮದ್ ಇಬ್ರಾಹಿಂ ನದಾಫ ವಂಚನೆಗೊಳಗಾದವರು.
ವಂಚನೆ ನಡೆದಿದ್ದೇಗೆ?: ಮೊಹಮ್ಮದ್ ಇಬ್ರಾಹಿಂ ಗೂಗಲ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ವರ್ಕ್ ಫ್ರಮ್ ಹೋಮ್ ಎಂದು ಸರ್ಚ್ ಮಾಡಿದ್ದಾರೆ. ಅದನ್ನು ಆಧರಿಸಿ ಅಪರಿಚಿತರು ಇಬ್ರಾಹಿಂ ಅವರ ಟೆಲಿಗ್ರಾಂ ಖಾತೆಗೆ 'ಕ್ಲಚ್ ದ ಆರ್ಡರ್' ಎಂಬ ಪೇಜ್‌ನಿಂದ ಮೆಸೇಜ್ ಕಳಿಸಿದ್ದಾರೆ. ನಂತರ ಕಂಪನಿಯ ಏಜೆಂಟ್ ಎಂದು ಹೇಳಿಕೊಂಡು ಆ್ಯಪ್‌ಗೆ ರೇಟಿಂಗ್ ನೀಡಿದರೆ ಹಣ ಗಳಿಸಬಹುದು ಎಂದಿದ್ದಾರೆ. ಹೀಗೆ ರೇಟಿಂಗ್ ನೀಡಿದ ಇಬ್ರಾಹಿಂಗೆ ಆರಂಭದಲ್ಲಿ 900 ರೂಪಾಯಿ ನೀಡಿ ನಂಬಿಸಿದ್ದಾರೆ.
ಬಳಿಕ ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚು ಲಾಭ ಗಳಿಸಬಹುದು ಎಂದು ಪುಸಲಾಯಿಸಿ, ಇಬ್ರಾಹಿಂ ಮತ್ತವರ ಸಹೋದರ ಹಾಗೂ ಸ್ನೇಹಿತರ ಬ್ಯಾಂಕ್ ಖಾತೆಗಳಿಂದ 22.33 ಲಕ್ಷ ರೂ ವರ್ಗಾಯಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ವ್ಯಕ್ತಿಗೆ 28 ಲಕ್ಷ ರೂ ವಂಚನೆ: ಮತ್ತೊಂದೆಡೆ, ಪಾರ್ಟ್ ಟೈಂ ಜಾಬ್ ನೀಡುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 28 ಲಕ್ಷ ರೂ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. 2024 ಜುಲೈ 21ರಂದು ಈ ವ್ಯಕ್ತಿಗೆ ಪಾರ್ಟ್ ಟೈಂ ಜಾಬ್ ಬಗ್ಗೆ ವಾಟ್ಸ್‌ಆ್ಯಪ್ ಮೆಸೇಜ್ ಬಂದಿತ್ತು. ಅದರಲ್ಲಿ ಟೆಲಿಗ್ರಾಂ ಆ್ಯಪ್ ಓಪನ್ ಮಾಡಿ ಲಿಂಕ್ ಕ್ಲಿಕ್ ಮಾಡಲು ತಿಳಿಸಿದ್ದರು. ವ್ಯಕ್ತಿ 123 ಪಾವತಿಸಿ ಅದನ್ನು ಆರೋಪಿಗಳು ತಿಳಿಸಿದಂತೆ ವಿಡಿಯೋ ಸ್ಕ್ರೀನ್ ಶಾಟ್ ಕಳುಹಿಸಿದ್ದಕ್ಕೆ ಅವರಿಗೆ 130 ರೂ ಹಾಕಿದ್ದರು.
ಆ ಬಳಿಕ ಕಳುಹಿಸಿದ ವಿಡಿಯೋ ತಪ್ಪಾಗಿದೆ ಎಂದು ಮತ್ತೊಂದು ಲಿಂಕ್ ಕಳುಹಿಸಿದ್ದರು. ವ್ಯಕ್ತಿ ಹೆಚ್ಚಿನ ಲಾಭದ ಆಸೆಗೆ ಒಂದು ಸಾವಿರ ಹಾಕಿದ್ದರು. ಅವರಿಗೆ 1,300 ಹಣ ಪಾವತಿಯಾಗಿತ್ತು. ಆ ಬಳಿಕ ವ್ಯಕ್ತಿ ಆರೋಪಿಗಳ ಮಾತು ನಂಬಿ ಅವರು ನೀಡಿದ ಬೇರೆ ಬೇರೆ ಖಾತೆಗೆ ಒಟ್ಟು 28, 18,065 ರೂ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ. ಕೋಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದಾವಣಗೆರೆ ಸೈಬರ್ ಕ್ರೈಂ ಠಾಣೆಯಲ್ಲಿ 82 ಪ್ರಕರಣ ದಾಖಲು: 8 ತಿಂಗಳಲ್ಲಿ ₹ 19.69 ಕೋಟಿ ವಂಚನೆ! - Cyber Fraud Cases