ಶಿವಮೊಗ್ಗ: ಉಕ್ಕಿ ಹರಿಯುತ್ತಿದ್ದ ಹಳ್ಳ ದಾಟಲು ಹೋದ ವ್ಯಕ್ತಿಯೋರ್ವ ಕೊಚ್ಚಿ ಹೋದ ಘಟನೆ ತಾಲೂಕಿನ ಎಡವಾಲದ ಕೊಂಡಜ್ಜಿ ಹಳ್ಳದಲ್ಲಿ ಸಂಭವಿಸಿದೆ. ದಾವಣಗೆರೆ ಜಿಲ್ಲೆಯ ಚಿನ್ನಿಕಟ್ಟೆ ಗ್ರಾಮದ ನಿವಾಸಿ ಇಕ್ಬಾಲ್(35) ನೀರುಪಾಲಾದವರು.
ನಿನ್ನೆ ಸುರಿದ ಭಾರಿ ಮಳೆಗೆ ಕೊಂಡಜ್ಜಿ ಹಳ್ಳ ತುಂಬಿ ಹರಿಯುತ್ತಿತ್ತು. ಹಳ್ಳ ದಾಟದಂತೆ ಸ್ಥಳೀಯರು ಇಕ್ಬಾಲ್ಗೆ ಎಚ್ಚರಿಸಿದ್ದರು. ಇದನ್ನು ಲೆಕ್ಕಿಸದೇ ದಾಟಲು ಮುಂದಾದಾಗ ನೀರುಪಾಲಾಗಿದ್ದಾರೆ. ತಕ್ಷಣ ಸ್ಥಳೀಯರು ಕುಂಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ಕುರಿತು ಎಡವಾಲದ ನಿವಾಸಿ ಗಿರೀಶ್ ನಾಯ್ಕ್ ಮಾತನಾಡಿ, "ಬೈಕ್ನಲ್ಲಿ ಬಂದ ವ್ಯಕ್ತಿಗೆ ನಾವು ಹಳ್ಳ ತುಂಬಿದೆ, ದಾಟಬೇಡಿ. ಸ್ವಲ್ಪ ಹೂತ್ತು ನಿಂತು ನೀರಿನ ಹರಿವು ಕಡಿಮೆಯಾದ ಬಳಿಕ ಹೊರಡಿ ಎಂದು ಹೇಳಿದೆವು. ಆದರೆ ಕೇಳದೆ ಸೇತುವೆ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದರು. ಬಳಿಕ ನಾವು ಪೊಲೀಸರಿಗೆ ಮಾಹಿತಿ ನೀಡಿದೆವು" ಎಂದರು.
ಇದನ್ನೂ ಓದಿ: ರಾಜ್ಯದ ಹಲವೆಡೆ ಒಣಹವೆ: 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ