ದಾವಣಗೆರೆ : ಜಿಲ್ಲೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆ. 24 ರ ಶನಿವಾರ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡಾ. ಸನ್ನಿದಿ ನಾಯಕ್, ಡಾ. ನಿಶಾಂತ್, ಡಿ. ಎಸ್ ಡಾ. ಅಂಕುಶ್ ಹಲ್ಲೆಗೆ ಒಳಗಾದ ವೈದ್ಯರು.
''ಹಲ್ಲೆಗೆ ಒಳಗಾದ ವೈದ್ಯರ ಪೈಕಿ ಡಾ. ಸನ್ನಿದಿ ನಾಯಕ್ ಬಡಾವಣೆ ಪೊಲೀಸ್ ಠಾಣೆಗೆ ಹಾಜರಾಗಿ ಹಲ್ಲೆ ಮಾಡಿದ ವ್ಯಕ್ತಿ ಮೇಲೆ ದೂರು ಕೊಟ್ಟಿದ್ದರು. ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಜೆಜೆಎಂ ಮೆಡಿಕಲ್ ಕಾಲೇಜ್ನಲ್ಲಿ 2ನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಆಗಿರುವ ಸನ್ನಿದಿ ನಾಯಕ್ ಅವರು, ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ತನ್ನ ಸಹೋದ್ಯೋಗಿಗಳಾದ ಡಾ. ನಿಶಾಂತ್ ಡಿ. ಎಸ್ ಡಾ. ಅಂಕುಶ್ ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು.
ಆಗಸ್ಟ್ 23 ರಂದು ತಡರಾತ್ರಿ ಮಂಜುನಾಥ ಹಾಗೂ ಅವರ ಪತ್ನಿ ಉಷಾ ಎಂಬುವರು ಅವರ 4 ವರ್ಷ ವಯಸ್ಸಿನ ತಾನ್ವಿ ಎಂಬ ಹೆಣ್ಣು ಮಗುವನ್ನು ಚಿಕಿತ್ಸೆಗೆ ದಾಖಲು ಮಾಡಿದ್ದರು. ಮಗುವನ್ನು ಪರೀಕ್ಷಿಸಿ ನೋಡಿದಾಗ ನಾಡಿಮಿಡಿತ ಇರದೆ, ಕೈಕಾಲು ತಣ್ಣಗೆ ಆಗಿದ್ದು, ಬಿ. ಪಿ ರೆಕಾರ್ಡ್ ಆಗಿರುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ವಿಷಯವನ್ನು ಮಗುವಿನ ತಂದೆ- ತಾಯಿಗೆ ತಿಳಿಸಿ, ಆ. 24 ರಂದು ಮಗುವನ್ನು ತೀವ್ರ ನಿಗಾಘಟಕಕ್ಕೆ ಕಳುಹಿಸಿಕೊಡಲಾಗಿತ್ತು.
ಸ್ವಲ್ಪ ಸಮಯದ ಬಳಿಕ ಪರೀಕ್ಷಿಸಿದಾಗ ಮಗುವಿನ ಸ್ಥಿತಿ ಗಂಭೀರವಾಗಿ ಉಸಿರಾಡಲಾಗದೆ ರಕ್ತಸ್ರಾವ ಆಗಲು ಆರಂಭವಾಗಿತ್ತು. ಇದನ್ನು ನೋಡಿದ ಡಾ. ಸನ್ನಿದಿ ನಾಯಕ್ ಮತ್ತು ಡಾ. ನಿಶಾಂತ್, ಡಿ. ಎಸ್ ಡಾ. ಅಂಕುಶ್ ಅವರು ಸಿ.ಪಿ.ಆರ್ ಮಾಡುತ್ತಿರುವಾಗ ಏಕಾಏಕಿ ಮಗುವಿನ ತಂದೆಯಾದ ಮಂಜುನಾಥನು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ವೈದ್ಯರ ಹಲ್ಲೆ ಮಾಡಿದ್ದಾರೆ.
ಆದ್ದರಿಂದ ಮಗುವಿನ ತಂದೆ ಮಂಜುನಾಥ್ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡಿದ್ದ ಆರೋಪಿಯಾದ ಮಂಜುನಾಥನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಸದರಿ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕು.ತಾನ್ವಿ (4) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ'' ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೈದ್ಯರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ : ವೈದ್ಯರ ಮೇಲೆ ಹಲ್ಲೆ ಖಂಡಿಸಿ ವೈದ್ಯ ವರ್ಗ ಪ್ರತಿಭಟನೆ ನಡೆಸಿದರು. ದಾವಣಗೆರೆ ನಗರದ ಬಾಪೂಜಿ ಆಸ್ಪತ್ರೆ ವೈದ್ಯರಿಂದ ಆಕ್ರೋಶ ವ್ಯಕ್ತಪಡಿಸಲಾಯಿತು. ಕಳೆದ 23 ರಂದು ವೈದ್ಯರಾದ ಡಾ. ನಿಶಾಂತ್ ಹಾಗೂ ಡಾ. ಅಂಕುಶ್ ಮೇಲೆ ಹಲ್ಲೆ ನಡೆದಿತ್ತು. ಮಂಜುನಾಥ ಎಂಬುವರು ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವೈದ್ಯರು ಆರೋಪ ಮಾಡಿ ಇಂದು ಪ್ರತಿಭಟಿಸಿ ಈ ಹಲ್ಲೆಯನ್ನು ಖಂಡಿಸಿದರು.