ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರಿಗೆ ಮಹದಾಯಿ ನೀರು ಪೂರೈಕೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಅದ್ದರಿಂದ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮಹದಾಯಿ ಹೋರಾಟಗಾರರು ಹಾಗೂ ಕರ್ನಾಟಕ ಸಮತಾ ಪಕ್ಷದಿಂದ ಬೆಂಬಲಿಸಲಾಗುವುದು ಎಂದು ಮಹದಾಯಿ ಹೋರಾಟಗಾರ ಹಾಗೂ ಕರ್ನಾಟಕ ಸಮತಾ ಪಕ್ಷದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಜಿಲ್ಲೆ 11 ತಾಲೂಕಿನಲ್ಲಿ ರೈತ ಸೇನಾ ಕರ್ನಾಟಕ ಪದಾಧಿಕಾರಿಗಳು ಹಾಗೂ ಮಹದಾಯಿ ಹೋರಾಟಗಾರರು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತೇವೆ ಎಂದರು.
ಒಂಬತ್ತು ವರ್ಷಗಳ ಹೋರಾಟಕ್ಕೆ ಯಾವುದೇ ಫಲ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಜನರ ಸಮಸ್ಯೆಗೆ ಸ್ಪಂದಿಸುತ್ತದೆ ಎಂಬ ಮಹದಾಸೆಯಿಂದ ಬೆಂಬಲ ಸೂಚಿಸುತ್ತಿದ್ದೇವೆ. ಏ.6ರಂದು ನವಲೂರಿನ ಖಾಸಗಿ ಹೋಟೆಲ್ನಲ್ಲಿ ಸಮಾವೇಶ ಮಾಡಿ, ಸಂಪೂರ್ಣ ಬೆಂಬಲ ನೀಡುವ ಮೂಲಕ ನಮ್ಮ ಬೇಡಿಕೆಯ ಕುರಿತು ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಆದರೆ ದಿಂಗಾಲೇಶ್ವರ ಸ್ವಾಮೀಜಿ ಇನ್ನೂ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಎಲ್ಲಿಯೂ ಪ್ರಕಟಿಸಿಲ್ಲ. ಅವರು ಜೋಶಿಯವರ ವಿರುದ್ದ ಹೋರಾಟ ನಡೆಸುವ ಮುನ್ನ, ನಾವು ತೀರ್ಮಾನ ತೆಗೆದುಕೊಂಡಿದ್ದೇವೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಧಾರವಾಡ, ಬೆಳಗಾವಿ, ಹಾವೇರಿ ಹಾಗೂ ಬಾಗಲಕೋಟೆ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿಸುವ ತೀರ್ಮಾನ ತೆಗೆದುಕೊಂಡಿರುವುದಾಗಿ ಸ್ಪಷ್ಟಪಡಿಸಿದರು.
ಇದನ್ನೂಓದಿ:ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ವಾಟಾಳ್ ನಾಗರಾಜ್ - Vatal Nagaraj