ಬೆಳಗಾವಿ: ಗಡಿಯಲ್ಲಿ ಮರಾಠಾ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಮಹಾರಾಷ್ಟ್ರ ರಾಜ್ಯದ ನಾಯಕರ ಮೊರೆ ಹೋಗಿದೆ. ಈ ನಿಟ್ಟಿನಲ್ಲಿ ಮೇ 4 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ನಿಪ್ಪಾಣಿಯಲ್ಲಿ ಬಿಜೆಪಿ ಅಭ್ಯರ್ಥಿ ಜೊಲ್ಲೆ ಅಣ್ಣಾಸಾಹೆಬ್ ಜೊಲ್ಲೆ ಪರ ಮತಬೇಟೆ ನಡೆಸಲಿದ್ದಾರೆ.
ಚಿಕ್ಕೋಡಿ ಕ್ಷೇತ್ರದಲ್ಲಿ ಗೆಲುವಿಗೆ ಮರಾಠಾ ಮತಗಳು ನಿರ್ಣಾಯಕ ಆಗಿರುವ ಹಿನ್ನೆಲೆಯಲ್ಲಿ ಮರಾಠಾ ಮತಗಳನ್ನು ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ. ಆ ನಿಟ್ಟಿನಲ್ಲಿ ಶನಿವಾರ ನಿಪ್ಪಾಣಿಯಲ್ಲಿ ಏಕನಾಥ್ ಶಿಂಧೆ ಪ್ರಚಾರ ಮಾಡಲಿದ್ದಾರೆ.
ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಗಡಿತಂಟೆಯನ್ನು ಜೀವಂತವಾಗಿಡಲು ಲೋಕಸಭೆ ಚುನಾವಣೆ ಕಣಕ್ಕೆ ಇಳಿದಿರುವ ಎಂಇಎಸ್ಗೆ ಏಕನಾಥ್ ಶಿಂಧೆ ಆಗಮನದಿಂದ ಭಾರೀ ಮುಖಭಂಗವಾಗುವದು ನಿಶ್ಚಿತ. ಇಲ್ಲಿಯ ಎಂಇಎಸ್ ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ ಎಂದಿದ್ದಾರೆ.
ಈಗಾಗಲೇ ಎಂಇಎಸ್ನ ಒಂದು ಗುಂಪು ಬಿಜೆಪಿಗೆ ಬೆಂಬಲ ಘೋಷಿಸಿರುವುದು ಎಂಇಎಸ್ ಜಂಘಾಬಲವನ್ನೇ ಉಡುಗಿಸಿದಂತಾಗಿದೆ. ಇನ್ನು ಮುಂದಾದರೂ ಶಿಂಧೆ ಅವರು ಬೆಳಗಾವಿಯ ಎಂಇಎಸ್ ನಾಯಕರನ್ನು ದೂರವಿರಿಸುವ ಮೂಲಕ ಗಡಿಭಾಗದಲ್ಲಿಯ ಕರ್ನಾಟಕ ವಿರೋಧಿ ಚಟುವಟಿಕೆಗಳಿಗೆ ಅಂತ್ಯ ಹಾಡಬೇಕು ಎಂದು ಅವರು ಆಗ್ರಹಿಸಿದರು.
ಮೃಣಾಲ್ ಪರ ಉದ್ಧವ್ ಠಾಕ್ರೆ ಪ್ರಚಾರ?
ಮೇ 5ರಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರವಾಗಿ ಮಹಾರಾಷ್ಟ್ರ ಮಾಜಿ ಸಿಎಂ, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಪ್ರಚಾರಕ್ಕೆ ಆಗಮಿಸುತ್ತಾರೆ ಎನ್ನುವ ಮಾಹಿತಿ ಇದೆ. ಉದ್ಧವ್ ಬೆಳಗಾವಿಗೆ ಆಗಮಿಸಿದ್ದೇ ಆದಲ್ಲಿ ಎಂಇಎಸ್ಗೆ ಮತ್ತಷ್ಟು ಹಿನ್ನಡೆ ಆಗಲಿದೆ. ಗಡಿವಿಚಾರದಲ್ಲಿ ಎಂಇಎಸ್ಗೆ ಉತ್ತೇಜನ ನೀಡುವ ಮಹಾರಾಷ್ಟ್ರ ನಾಯಕರು ಲೋಕಸಭಾ ಚುನಾವಣೆಯಲ್ಲಿ ಕೈ ಕೊಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಎಂಇಎಸ್ ಮುಖಂಡ ವಿಕಾಸ ಕಲಘಟಗಿ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಬೆಳಗಾವಿ, ಉತ್ತರಕನ್ನಡ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಬೇಡಿ ಎಂದು ಮಹಾರಾಷ್ಟ್ರ ಸಿಎಂ ಸೇರಿ ಎಲ್ಲ ರಾಷ್ಟ್ರೀಯ ಪಕ್ಷಗಳ ಮುಖಂಡರಿಗೆ ಮನವಿ ಮಾಡಿಕೊಂಡಿದ್ದೇವೆ. ಈ ಸಂಬಂಧ ಇಂದು ಎಂಇಎಸ್ ಸಭೆ ಕರೆದಿದ್ದು, ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸುತ್ತೇವೆ ಎಂದು ಹೇಳಿದರು.