ಸ್ವರ್ಗ ಮತ್ತು ನರಕ ಎಂಬ ವಿಭಿನ್ನ ಕಾನ್ಸೆಪ್ಟ್ ಮೂಲಕ ಬಹಳ ಅದ್ಧೂರಿಯಾಗಿ ಶುಭಾರಂಭ ಮಾಡಿದ್ದ 'ಬಿಗ್ ಬಾಸ್ ಕನ್ನಡ ಸೀಸನ್ 11' ಎಂಟನೇ ವಾರಾಂತ್ಯ ಬಂದು ತಲುಪಿದೆ. ನಾಳೆ ಮತ್ತು ನಾಡಿದ್ದು ವಾರಾಂತ್ಯದ ಸಂಚಿಕೆಗಳು ಪ್ರಸಾರ ಕಾಣಲಿವೆ. ಸುದೀಪ್ ನಡೆಸಿಕೊಡುವ ವೀಕೆಂಡ್ ಎಪಿಸೋಡ್ಗಳಿಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಆದ್ರೆ ಅದಕ್ಕೂ ಮುನ್ನ ಹೃದಯಸ್ಪರ್ಶಿ ಘಟನೆ ಮನೆಯಲ್ಲಿ ನಡೆದಿದೆ. ಪರಿಣಾಮವಾಗಿ, ಅಭಿನಯ ಚಕ್ರವರ್ತಿ ಸುದೀಪ್ ಅವರ ಬಗ್ಗೆ ಪ್ರಶಂಸೆಯ ಮಳೆ ಸುರಿದಿದೆ. ನಟನ ವ್ಯಕ್ತಿತ್ವವನ್ನು ಅಭಿಮಾನಿಗಳು ಗುಣಗಾನ ಮಾಡುತ್ತಿದ್ದಾರೆ.
ಹನುಮಂತು 'ಬಿಗ್ ಬಾಸ್ ಕನ್ನಡ ಸೀಸನ್ 11'ರ ಮೊದಲ ವೈಲ್ಡ್ಕಾರ್ಡ್ ಸ್ಪರ್ಧಿ. ತಮ್ಮ ಮುಗ್ಧತೆಯಿಂದ ಬಹಳ ಹೆಸರು ಸಂಪಾದಿಸಿರುವ ಇವರು ಕಿಚ್ಚನ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಸತತವಾಗಿ ಎರಡು ಬಾರಿ ಕ್ಯಾಪ್ಟನ್ ಆಗುವುದರ ಜೊತೆಗೆ ಈ ಸೀಸನ್ನ ಮೊದಲ ಕಿಚ್ಚನ ಚಪ್ಪಾಳೆಗೂ ಪಾತ್ರರಾದರು. ಇದೀಗ ಅಭಿನಯ ಚಕ್ರವರ್ತಿ ಸುದೀಪ್ ಅವರು ಹನುಮಂತು ಅವರಿಗೆ ಬಟ್ಟೆ ಕಳುಹಿಸಿಕೊಡುವುದರ ಜೊತೆಗೆ ಒಂದು ಹೃದಯಸ್ಪರ್ಶಿ ಪತ್ರವನ್ನೂ ಕಳುಹಿಸಿದ್ದಾರೆ. ಈ ಸುಂದರ ಕ್ಷಣವನ್ನು 'ಹನುಮಂತುಗಾಗಿ ಬಂತು ಕಿಚ್ಚನ ಗಿಫ್ಟ್!' ಕ್ಯಾಪ್ಷನ್ನೊಂದಿಗೆ ಅನಾವರಣಗೊಂಡಿರುವ ಬಿಗ್ ಬಾಸ್ ಪ್ರೋಮೋದಲ್ಲಿ ಕಾಣಬಹುದು. ವಿಶೇಷ ಉಡುಗೊರೆ ಸ್ವೀಕರಿಸಿದ ಹನುಮಂತು ಭಾವುಕರಾಗಿದ್ದಾರೆ.
ಕಳೆದ ವಾರಾಂತ್ಯದ ಸಂಚಿಕೆಯಲ್ಲಿ, ಹನುಮಂತು ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂಬ ವಿಚಾರ ಚರ್ಚೆಗೆ ಬಂದಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಅವರು, ಇಲ್ಲಿ ನನ್ನ ಬಟ್ಟೆ ಹೊಗಿಯೋರು ಯಾರೂ ಇಲ್ಲ. ಅಲ್ಲದೇ ನನ್ನಲ್ಲಿ ಅತ್ಯಂತ ಕಡಿಮೆ ಬಟ್ಟೆಗಳಿವೆ. ಸ್ನಾನ ಮಾಡಿ ಹೊಗೆದುಹಾಕಿದರೆ ಬೇಗ ಒಣಗುವುದಿಲ್ಲ ಮತ್ತು ಅದನ್ನೇ ಮತ್ತೆ ಮತ್ತೆ ಹಾಕಬೇಕಾಗುತ್ತದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: 'ಬಿಗ್ ಬಾಸ್ ನನ್ನಮ್ಮನ ಅಚ್ಚುಮೆಚ್ಚಿನ ಕಾರ್ಯಕ್ರಮ': ಸುದೀಪ್ ಭಾವುಕ, ಧೈರ್ಯ ತುಂಬಿದ ಸರ್ವರಿಗೂ ಧನ್ಯವಾದ
ಸುದೀಪ್ ಕಳುಹಿಸಿರುವ ಪತ್ರದಲ್ಲೇನಿದೆ? ''ಮೈ ಮುಚ್ಚೋ ಬಟ್ಟೆ ನೋಡಿ 'ಮಾನ' ವ ಅಳೀಬೇಡ್ರಿ, ಮನಸು ತೋರುವ ನಗುವ ನೋಡದೇ ಸುಮ್ಮನೇ ಇರಬೇಡ್ರಿ, ಕುರಿಯ ಕಾಯೋ ಕುರಿಗಾಹಿ ಕೊಡುತಾನೋ ಕಂಬಳಿ, ಜಗವ ಕಾಯೋ ರೈತ ಸ್ನೇಹಿ ನೀಡುತಾನೋ ಅಂಬಲಿ, ಲೋ ತಮ್ಮ ಹನುಮಂತ ದಿನವೂ ಜಳಕ ಮಾಡೋ, ದಿನದಿನವೂ ಪದವ ಕಟ್ಟಿ ಹೊಸ ಹಾಡ ಹಾಡೋ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಹುಡುಗೀರ ಕೈ ಹಿಡಿದು ಓಡಾಡಿದಷ್ಟು ಸುಲಭವಲ್ಲ ಬಿಗ್ ಬಾಸ್ ಗೆಲ್ಲೋದು': ಇಂಥದ್ದೊಂದು ಹೇಳಿಕೆ ಬಂದಿದ್ದೇಕೆ?
ಹನುಮಂತುಗಾಗಿ ಒಂದಿಷ್ಟು ಉಡುಗೆಯ ಸೆಟ್ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅದನ್ನು ನೋಡಿ ಮನೆಮಂದಿ ಸಂತಸಗೊಂಡಿದ್ದಾರೆ. ಹನುಮಂತು ಅವರ ಭಾವನೆಗಳು ಅವರ ಕಣ್ಣಲ್ಲಿ ವ್ಯಕ್ತವಾಗಿದೆ. ಸುದೀಪ್ ಅವರಿಗೆ ಹನುಮಂತು ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ಹನುಮಂತು ಮುದ್ಧತೆ, ಸರಳತೆ ಮತ್ತು ಸುದೀಪ್ ಅವರ ಗುಣದ ಶ್ರೀಮಂತಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಗುಣಗಾನ ಮಾಡಲಾಗುತ್ತಿದೆ.