ಹಾಸನ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ನಿಲ್ಲಿಸಿದ್ದ ಬೈಕ್ಗಳ ಮೇಲೆ ಹಾಯ್ದು 17 ವಾಹನ ಜಖಂಗೊಂಡ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕು ಬಾಣಾವರ ಹೋಬಳಿಯಲ್ಲಿರುವ ಕೆಂಕೆರೆ ಗೇಟ್ ಬಳಿ ಇಂದು ಜರುಗಿತು.
ಮಳೆ ಜೋರಾಗಿ ಸುರಿಯುತ್ತಿದ್ದ ಕಾರಣ ಬೈಕ್ ಸವಾರರು ತಮ್ಮ ವಾಹನಗಳನ್ನು ಅಲ್ಲಿನ ಬಸ್ ನಿಲ್ದಾಣದ ಬದಿಯ ರಸ್ತೆಯಲ್ಲಿ ನಿಲ್ಲಿಸಿ ತಂಗುದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಐಷಾರಾಮಿ ಕಾರೊಂದನ್ನು ಓಡಿಸಿಕೊಂಡು ಬರುತ್ತಿದ್ದ ಚಾಲಕನಿಗೆ ಮಳೆಯಿಂದಾಗಿ ರಸ್ತೆ ಸರಿಯಾಗಿ ಕಂಡಿಲ್ಲ. ಕಾರು ನಿಯಂತ್ರಣ ಕಳೆದುಕೊಂಡು ಬಸ್ ಸ್ಟ್ಯಾಂಡ್ ಬಳಿ ನಿಲ್ಲಿಸಿದ್ದ ಬೈಕ್ಗಳಿಗೆ ಗುದ್ದಿದೆ. ಪರಿಣಾಮ, ವಾಹನಗಳೆಲ್ಲ ಜಖಂಗೊಂಡಿವೆ. ಕಾರು ಗುದ್ದಿದ ರಭಸಕ್ಕೆ ಬಸ್ ನಿಲ್ದಾಣದ ಗೋಡೆ ಕುಸಿದು ಬಿದ್ದಿದೆ. ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲ್ಲಮ್ಮ ದೇವಿ ದರ್ಶನ ಮುಗಿಸಿ ಬರ್ತಿದ್ದ ಟೆಂಪೋ ಪಲ್ಟಿ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿ, ಹದಿನಾಲ್ಕು ಜನರಿಗೆ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ಹೊರ ವಲಯದಲ್ಲಿ ಇಂದು ಬೆಳಗ್ಗೆ ನಡೆದಿದೆ. ಗಾಯಾಳುಗಳನ್ನು ಹುಕ್ಕೇರಿ ತಾಲೂಕಿನ ಚಿಕ್ಕಲಗುಡ್ಡ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವು ಕಾರ್ಯ ತೀವ್ರಗೊಳಿಸಿದ ಬಿಬಿಎಂಪಿ - BBMP Clearing Dangerous Trees