ಹಾಸನ: 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲದ ನೃತ್ಯವನ್ನು ರಾಜಕೀಯವಾಗಿ ನೋಡಿದ ಶಾಸಕರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ತಾಲೂಕು ಆಡಳಿತದ ಧ್ವಜಾರೋಹಣ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಚಂದ್ರಶೇಖರ ಭಾರತಿ ಶಾಲೆಯ ವಿದ್ಯಾರ್ಥಿಗಳು ಮಾಡಿದ ನೃತ್ಯದಲ್ಲಿ ರಾಷ್ಟ್ರ ಪಕ್ಷಿ ನವಿಲು ಹಾಗೂ ರಾಷ್ಟ್ರದ ಹೂವು ಕಮಲವನ್ನು ಹಿಡಿದು ಕುಣಿದಿದ್ದಾರೆ. ಆದರೆ, ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು, ಕಮಲವನ್ನು ರಾಜಕೀಯವಾಗಿ ಗಮನಿಸಿ, ಶಿಕ್ಷಕಿಯ ವಿರುದ್ಧ ಕಿಡಿಕಾರಿದ್ದಾರೆ. ಕಮಲ ನಮ್ಮ ರಾಷ್ಟ್ರೀಯ ಹೂವು ಎಂದು ಬಳಸಲಾಗಿದೆ ಎಂದು ಶಿಕ್ಷಕಿಯು ಶಾಸಕರಿಗೆ ಉತ್ತರಿಸಿದ್ದಾರೆ. ಕಮಲದ ಹೂವು ಬಿಜೆಪಿಯ ಚಿಹ್ನೆ, ಹಾಗಾಗಿ ಬಳಸಬಾರದು ಎಂದು ಶಾಸಕ ಕೆಎಂ ಶಿವಲಿಂಗೇಗೌಡ ವೇದಿಕೆಯ ಮೇಲೆ ಎದ್ದು ನಿಂತು ಶಿಕ್ಷಕಿಯ ವಿರುದ್ಧ ಗರಂ ಆದರು.
ಶಾಲಾ ಶಿಕ್ಷಕಿಯ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕಮಲ ಯಾವ ಪಕ್ಷದ ಚಿಹ್ನೆ? ಯಾವ ಸೀಮೆ ನಾಗರಿಕರು ನೀವು? ಮಕ್ಕಳನ್ನು ಹೇಗೆ ಉದ್ಧಾರ ಮಾಡ್ತೀರಾ ಎಂದು ಸಿಟ್ಟಾದರು. ಶಾಸಕರ ಮಾತಿಗೆ ಧ್ವನಿಗೂಡಿಸಿದ ತಹಶೀಲ್ದಾರ್ ಸಂತೋಷ್ ಕೂಡಾ ಶಾಲಾ ಶಿಕ್ಷಕಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿದ ಶಿಕ್ಷಕಿ, ಕಮಲ ಒಂದು ಪಕ್ಷದ ಚಿಹ್ನೆ ಹೇಗೆ ಆಗುತ್ತೆ ಸರ್? ನೀವು ಹೀಗೆ ಮಾತನಾಡಿದರೆ ಸರಿ ಕಾಣಲ್ಲ ಹೋಗಲ್ಲ ಎಂದು ಹೇಳಿದ್ದಾರೆ. ಇದರಿಂದ ಮತ್ತಷ್ಟು ಗರಂ ಆದ ಶಾಸಕ ಶಿವಲಿಂಗೇಗೌಡ, ಏನ್ ಸರಿ ಹೋಗಲ್ಲ? ನಿಮಗೆ ನೋಟಿಸ್ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ತಹಶೀಲ್ದಾರ್ ಸಂತೋಷ್ ಮಧ್ಯಪ್ರವೇಶಿಸಿ, ಒಂದು ಧರ್ಮ, ಒಂದು ಪಕ್ಷದ ಚಿಹ್ನೆ ಹೈಲೆಟ್ ಮಾಡಬಾರದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ, ಪೂರ್ವ ತಯಾರಿ ಪ್ರದರ್ಶನ ನೃತ್ಯ ನೋಡಿದವರು ಇದನ್ನು ಗಮನಿಸಿದ್ದರೆ, ಅದನ್ನು ನಾವು ಬಳಸುತ್ತಿರಲಿಲ್ಲ. ಜೊತೆಗೆ ಸಭೆಯಲ್ಲಿ ಸೂಚನೆ ನೀಡಿದ್ದರೆ ಚಿಹ್ನೆ ಬಳಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಶಾಸಕ ಶಿವಲಿಂಗೇಗೌಡ ಅವರು, ''ಇವರು ಎಂತದ್ದನ್ನಾದರೂ ತೋರಿಸಿಕೊಳ್ಳಲಿ ನನಗೇನು? ಅಲ್ಲಿ ಯಾವನೋ ಕುಳಿತಿರುತ್ತಾನೆ. ಬಿಜೆಪಿ ಚಿಹ್ನೆ ತೋರಿಸುತ್ತಿದ್ದಾರೆ ಎಂದು ಕಲ್ಲು ತೂರಿದರೆ ಮುಂದೆ ಆಗುವುದನ್ನು ನೋಡಬೇಕು ಅಲ್ವಾ? ಇದು ರಾಷ್ಟ್ರೀಯ ಹಬ್ಬ, ಅದನ್ನು ಗಮನದಲ್ಲಿಟ್ಟುಕೊಂಡು ನೃತ್ಯ ಮಾಡಿಸಬೇಕು ಎಂದು ಶಿಕ್ಷಕಿಗೆ ತಿಳಿಸಿದರು. ಈ ಅತ್ಯುತ್ತಮ ನೃತ್ಯಕ್ಕಾಗಿ ಶಾಲಾ ಮಕ್ಕಳು ಮೊದಲ ಬಹುಮಾನ ಕೂಡ ಪಡೆದಿದ್ದಾರೆ. ಶಾಸಕರ ಆಕ್ಷೇಪದ ನಂತರ ತಾಲೂಕು ಆಡಳಿತ ನಾಲ್ಕನೇ ಬಹುಮಾನ ನೀಡಿದೆ.
ಇದನ್ನೂ ಓದಿ: ಜಗತ್ತಿಗೆ ಒಳ್ಳೆಯ ದಿನಗಳಿಲ್ಲ, ಅಣು ಬಾಂಬ್ ಸ್ಫೋಟದ ಅವಕಾಶ ಇದೆ: ಕೋಡಿಮಠದ ಶ್ರೀ ಹೊಸ ಭವಿಷ್ಯ