ಮೈಸೂರು: ಮುಡಾ ಹಗರಣ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ನವೆಂಬರ್ 6ರ ಬೆಳಗ್ಗೆ 10.30ಕ್ಕೆ ಲೋಕಾಯುಕ್ತ ಕಚೇರಿಗೆ ಹಾಜರಾಗುವಂತೆ ಸಿಎಂ ಅವರಿಗೆ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರು ಸಮನ್ಸ್ ನೀಡಿದ್ದಾರೆ.
ವಿಚಾರಣೆಗೆ ಹಾಜರಾಗುತ್ತೇನೆಂದ ಸಿಎಂ: ನವೆಂಬರ್ 6 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಲೋಕಾಯುಕ್ತ ನೋಟಿಸ್ ಕುರಿತು ಸಿಎಂ ಸಿದ್ದರಾಮಯ್ಯ ಶಿಗ್ಗಾಂವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಉಪಚುನಾವಣೆ ಹಿನ್ನೆಲೆ ಇಂದಿನಿಂದ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಕ್ಷೇತ್ರದಲ್ಲಿ ನಾಳೆ ಕೂಡ ಕಾಂಗ್ರೆಸ್ ಅಭ್ಯರ್ಥಿ ಪರ ಸಿಎಂ ಮತಯಾಚಿಸಲಿದ್ದಾರೆ.
ಮೈಸೂರು ನಗರಾಭಿದ್ಧಿ ಪ್ರಾಧಿಕಾರದ 50:50 ಸೈಟ್ ಹಂಚಿಕೆ ಹಗರಣ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಸಿಎಂ A1 ಆರೋಪಿಯಾಗಿದ್ದು, ಅವರ ಪತ್ನಿ ಪಾರ್ವತಿ ಅವರು A2 ಆರೋಪಿಯಾಗಿದ್ದಾರೆ.
ಇನ್ನು ಪ್ರಕರಣ ಸಂಬಂಧ ಸಿಎಂ ಪತ್ನಿ ಮತ್ತು ಅವರ ಬಾವೈದ A3 ಆರೋಪಿಯಾಗಿರುವ ಮಲ್ಲಿಕಾರ್ಜನ ಸ್ವಾಮಿ ಹಾಗೂ ಭೂಮಿ ಮಾರಾಟ ಮಾಡಿದ್ದ A4 ಆರೋಪಿ ದೇವರಾಜು ಅವರನ್ನು ಈಗಾಗಲೇ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ 50:50 ನಿವೇಶನ ರದ್ದುಗೊಳಿಸುವ ನಿರೀಕ್ಷೆಯಿದೆ - ಶಾಸಕ ಶ್ರೀವತ್ಸ