ದಾವಣಗೆರೆ: ಪತಿ-ಪತ್ನಿ ನಡುವಿನ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ 16 ಜೋಡಿಗಳು ಚಿಕ್ಕಪುಟ್ಟ ವಿಚಾರಕ್ಕೆ ಜಗಳವಾಡಿ ವಿಚ್ಛೇದನಕ್ಕಾಗಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೆ, ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಕೊಡಿಸದೇ 16 ಜೋಡಿಗಳು ಮತ್ತೆ ಒಂದಾಗುವಂತೆ ಮಾಡಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸತಿಪತಿಗಳು ನಾನೊಂದು ತೀರ ನೀನೊಂದು ತೀರ ಎನ್ನುವ ರೀತಿಯಲ್ಲಿ ಜೀವನ ಮಾಡುತ್ತಿದ್ದ ವೇಳೆ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಮಧ್ಯ ಪ್ರವೇಶಿಸಿ ಸತಿಪತಿಗಳನ್ನು ಒಂದಾಗಿಸಿದೆ.
ದಾವಣಗೆರೆ ಜಿಲ್ಲಾ ಮುಖ್ಯ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ ಅವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 16 ಜೋಡಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ಸಿಹಿ ತಿನಿಸುವ ಮೂಲಕ ಮತ್ತೆ ದಂಪತಿಗಳಾಗಿದ್ದಾರೆ. ಇಂದು ದೇಶಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆದಿದ್ದು, 8,800 ವಿವಿಧ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ.
ಈ ಸಂದರ್ಭದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 16 ಜೋಡಿಗಳಿಗೆ ಕಾನೂನು ಸೇವಾ ಪ್ರಾಧಿಕಾರದಡಿ ರಾಜಿ ಮಾಡಿಸಿ ಜೀವನಕ್ಕೆ ದಾರಿ ಮಾಡಿಕೊಡಲಾಯಿತು. ಸಣ್ಣಪುಟ್ಟ ಕಾರಣಗಳಿಗೆ ಮನಸ್ತಾಪವಾಗಿ ಮೂರ್ನಾಲ್ಕು ವರ್ಷಗಳಿಂದ ದೂರವಿದ್ದ ಸತಿಪತಿಗಳು ವಿಚ್ಛೇದನ ಮರೆತು ಮತ್ತೆ ಒಂದಾಗಿ ಜೀವನ ನಡೆಸಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಇಡೀ ದಾವಣಗೆರೆ ಜಿಲ್ಲಾ ನ್ಯಾಯಾಧೀಶರು, ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಸಾಕ್ಷಿಯಾಗಿದೆ.
ರಜೀಯಾಬಾನು-ರಸೂಲ್, ಸೈಯ್ಯದ್ ಗೌಸ್ - ಸೈಯದಾ ನಿಷಾನ್ ತಾಜ್, ಉದಯ್ - ನಾಗರತ್ನ, ಶಾರುಕ್ ದರ್ವೇಜ್ - ರುಕ್ಸಾನಾ ಬಾನು, ಅಣ್ಣಕ್ಕ-ಭರಮಪ್ಪ ಸೇರಿದಂತೆ ಒಟ್ಟು 16 ಜೋಡಿಗಳು ಮತ್ತೆ ಒಂದಾಗಿವೆ.
ಈ ವೇಳೆ ಜಿಲ್ಲಾ ಮುಖ್ಯ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ ಮಾತನಾಡಿ "ಇಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದೇವೆ. ಪ್ರತಿ ವರ್ಷ ನಾಲ್ಕು ಲೋಕ ಅದಾಲತ್ ನಡೆಸಲಾಗುತ್ತಿದೆ. ಇದು ಈ ವರ್ಷದ ಎರಡನೇ ಲೋಕ ಅದಾಲತ್ ಆಗಿದೆ. ಇದನ್ನು ನ್ಯಾಯಾಂಗದಲ್ಲಿ ಒಂದು ಹಬ್ಬ ಎಂದು ಹೇಳಬಹುದು. ಈಗಾಗಲೇ 4800 ಪ್ರಕರಣಗಳನ್ನು ಬಗೆಹರಿಸಿದ್ದೇವೆ. ಕೌಟುಂಬಿಕ ನ್ಯಾಯಾಲಯದಲ್ಲಿ 15 ಮತ್ತು ಹರಿಹರದಲ್ಲಿ 1 ಒಟ್ಟು 16 ಜೋಡಿಯನ್ನು ಒಂದು ಮಾಡಲಾಗಿದೆ. ಲೋಕ ಅದಾಲತ್ನಲ್ಲಿ ಸಂಧಾನ ಮಾಡಿಕೊಂಡರೆ ನ್ಯಾಯಾಲಯದ ಖರ್ಚು ಉಳಿಸಬಹುದು, ಶೀಘ್ರವಾಗಿ ನ್ಯಾಯ ಸಿಗುತ್ತದೆ ಮತ್ತು ಎಲ್ಲರ ಸ್ನೇಹ - ಬಾಂಧವ್ಯ ಉಳಿಯುತ್ತದೆ" ಎಂದು ಹೇಳಿದರು.
ಒಂದಾದವರಲ್ಲಿ ಒಬ್ಬರಾದ ಸೈಯ್ಯದ್ ಗೌಸ್ ಖಾದ್ರಿ ಮಾತನಾಡಿ, "14 ವರ್ಷಗಳ ಹಿಂದೆ ನಮಗೆ ಮದುವೆಯಾಗಿತ್ತು. ಕಾರಣಾಂತರಗಳಿಂದ ನನ್ನ ಪತ್ನಿ ತವರು ಮನೆ ಸೇರಿದ್ದಳು. ಈಗ ಮತ್ತೆ ಒಂದಾಗಿದ್ದೇವೆ, ಮುಂದೆಯೂ ಒಂದಾಗಿರುತ್ತೇವೆ. ಜಗಳವನ್ನು ಗಂಡ -ಹೆಂಡತಿ ಇಬ್ಬರೇ ಕೂತು ಬಗೆಹರಿಸಿಕೊಳ್ಳುವುದು ಉತ್ತಮ. ನ್ಯಾಯಾಧೀಶರು ನಮಗೆ ಒಳ್ಳೆಯ ಮಾರ್ಗದರ್ಶನ ಮಾಡಿದ್ದಾರೆ" ಎಂದರು.
ಇದನ್ನೂ ಓದಿ: 20 ಸಾವಿರ ಅಂಗನವಾಡಿಗಳು 'ಗವರ್ನಮೆಂಟ್ ಮಾಂಟೆಸ್ಸರಿ' ಆಗಿ ಪರಿವರ್ತನೆ: ಲಕ್ಷ್ಮೀ ಹೆಬ್ಬಾಳ್ಕರ್ - Government Montessori