ಕಾರವಾರ (ಉತ್ತರ ಕನ್ನಡ): ಆಹಾರ ಅರಸಿ ಮನೆಯ ಬಳಿ ಬಂದಿದ್ದ ಚಿರತೆಯೊಂದು ಆಕಸ್ಮಿಕವಾಗಿ ಮನೆಯ ಹಿತ್ತಲಬಾವಿಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದ ಘಟನೆ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿ ಭಾನುವಾರ ಮುಂಜಾನೆ ಬೆಳಕಿಗೆ ಬಂದಿದೆ. ತಕ್ಷಣ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷರು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಣೆ ಮಾಡಿದ್ದಾರೆ.
ರಾತ್ರಿ ವೇಳೆ ಆಹಾರ ಅರಸಿ ಬಂದಿದ್ದ ಚಿರತೆ, ಮಲ್ಲಾಪುರದ ರಾಜು ಪರಮೇಶ್ವರ ಭೋವಿ ಎಂಬವರ ಮನೆಯ ನಾಯಿಯನ್ನು ಹೊತ್ತೊಯ್ಯಲು ಯತ್ನಿಸಿ, ಹಿತ್ತಲಿನ ಬಾವಿಗೆ ಬಿದ್ದಿತ್ತು. ಈ ವೇಳೆ ಚಿರತೆ ಬಾಯಲ್ಲಿ ಸಿಕ್ಕಿದ್ದ ನಾಯಿಯೂ ಬಾವಿಗೆ ಬಿದ್ದು ಪ್ರಾಣ ಬಿಟ್ಟಿದೆ. ಬಳಿಕ ಈ ವಿಷಯ ಮನೆಯವರಿಗೆ ಗೊತ್ತಾಗಿ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸುಮಾರು ಎರಡೂವರೆ ವರ್ಷದ ಗಂಡು ಚಿರತೆ ಇದಾಗಿದೆ. ಭಾರಿ ಗಾತ್ರದ ಇರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಂರಕ್ಷಕರು ಪ್ಲಾನ್ ರೂಪಿಸಿ ರಕ್ಷಣೆ ಮಾಡಿದರು.
ಸುಮಾರು 20 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆಯನ್ನು ಮೇಲೆತ್ತಲು ಸುಮಾರು 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಬಲೆ ಮೂಲಕ ರಕ್ಷಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಆರ್ಎಫ್ಒ ಪ್ರವೀಣ ನಾಯ್ಕ, ಸಿ.ಆರ್.ನಾಯಕ, ಅರಣ್ಯ ಇಲಾಖೆಯ ಸಿಬ್ಬಂದಿ, ವನ್ಯಜೀವಿ ಸಂರಕ್ಷಕರಾದ ಅಶೋಕ ನಾಯ್ಕ, ಮಹೇಶ ನಾಯ್ಕ, ಪವನ ನಾಯ್ಕ, ನಾಗರಾಜ ಶೇಟ್, ಶಂಕರ, ಸಂಗಮೇಶ ಭಾಗಿಯಾಗಿದ್ದರು.
ಇದನ್ನೂ ಓದಿ: ಚಿರತೆ ಬಾಯಿಂದ ಕುರಿ ಬಿಡಿಸಿಕೊಂಡು ಬಂದ ಕುರಿಗಾಹಿ: ಕೊನೆಗೂ ಬೋನಿಗೆ ಬಿದ್ದ ಚಿರತೆ - Sheep rescued from leopard