ಬೆಂಗಳೂರು: ರಾಜ್ಯದ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ, ಪದೇ ಪದೆ ಮಹಾರಾಷ್ಟ್ರ ಸರ್ಕಾರ ರಾಜ್ಯದ ಗಡಿಯೊಳಗೆ ಹಸ್ತಕ್ಷೇಪ ಮಾಡಿದ್ದಲ್ಲಿ ನಾವು ನೀಡುವ ಉತ್ತರ ನಿಮಗೆ ಸಹಿಸಿಕೊಳ್ಳಲಿಕ್ಕೆ ಆಗಲ್ಲ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಬೆಳಗಾವಿ ಗಡಿ ವ್ಯಾಪ್ತಿ ಮಹಾರಾಷ್ಟ್ರ ಸರ್ಕಾರದ ಯೋಜನೆಗಳನ್ನು ಅಳವಡಿಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚುನಾವಣೆ ಇತ್ಯಾದಿ ಸಮಯದಲ್ಲಿ ಗಡಿ ವಿಚಾರದಲ್ಲಿ ಪದೇ ಪದೆ ಕ್ಯಾತೆಯನ್ನು ಮಹಾರಾಷ್ಟ್ರ ಸರ್ಕಾರ ತೆಗೆಯುತ್ತ ಇರುತ್ತದೆ. ನಾವು ರಾಷ್ಟ್ರದ ಒಕ್ಕೂಟದಲ್ಲಿದ್ದೇವೆ. ನಮ್ಮ ಗಡಿಯೊಳಗೆ ನಮ್ಮ ಪರವಾನಗಿ ಇಲ್ಲದೆ ಏನೇ ಮಾಡಿದ್ರೂ ಅದು ಸಂವಿಧಾನಕ್ಕೆ ಅಪಚಾರ ಮಾಡಿದಂತಾಗಲಿದೆ. ಅದನ್ನು ನಾವು ಸಹಿಸಲ್ಲ ಎಂದು ಹೇಳಿದರು.
ನೀವು ಗಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ಗೆ ಹೋಗಿದ್ದೀರಿ, ಮಂಗಳಾರತಿ ಮಾಡಿಸಿಕೊಂಡಿದ್ದೀರಿ, ನಮಗೆ ಗಡಿ ವಿಚಾರದಲ್ಲಿ ಮಹಾಜನ್ ವರದಿ ಅಂತಿಮ, ಇಷ್ಟಾದರೂ ಮತ್ತೆ ಯಾವ ಯಾವ ವಿಷಯದ ಮೇಲೆ ಕಿರಿಕಿರಿ ಮಾಡಿ ಮತ್ತೆ ಸುಪ್ರೀಂ ಕೋರ್ಟ್ಗೆ ಹೋದರೆ ನಾವೂ ಕೈಕಟ್ಟಿ ಕೂರುತ್ತೇವಾ? ಎಂದು ತಿರುಗೇಟು ನೀಡಿದರು.
ಗಡಿ ವಿಚಾರದಲ್ಲಿ ಅನವಶ್ಯಕ ರಾಜಕಾರಣ ಮಾಡುವುದನ್ನು ಮಹಾರಾಷ್ಟ್ರ ಸರ್ಕಾರ ನಿಲ್ಲಿಸಬೇಕು. ಈಗ ಮಾಡುತ್ತಿರುವ ವರ್ತನೆಯನ್ನು ಮುಂದುವರೆಸಿದರೆ ತಕ್ಕ ಉತ್ತರ ಕೊಡಲಿದ್ದೇವೆ. ಆ ಉತ್ತರ ಸಹಿಸಿಕೊಳ್ಳಲು ನಿಮಗೆ ಆಗಲ್ಲ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಮರಾಠಿಗರಿದ್ದು, ಅವರನ್ನು ನಾವು ಯಾವ ರೀತಿ ನೋಡುತ್ತೇವೆ. ಅದೇ ರೀತಿ ನೀವು ನೋಡಬೇಕು. ವಾತಾವರಣ ಕಲಕುವ ಕೆಲಸ ಮಾಡಿದರೆ ನಾವು ಸುಮ್ಮನಿರಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಗಡಿ ವಿವಾದ, ಸಿಎಂ ಏಕನಾಥ ಶಿಂಧೆ ಸಭೆ: ಗಡಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮುಂಬೈನಲ್ಲಿ ಸಿಎಂ ಏಕನಾಥ ಶಿಂಧೆ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಮುಂಬೈನ ಮಹಾರಾಷ್ಟ್ರ ಮಂತ್ರಾಲಯ(ವಿಧಾನಸೌಧ)ದ ಕಚೇರಿ ಆವರಣದಲ್ಲಿ ನಡೆದ ಸಭೆಗೆ ಬೆಳಗಾವಿಯ ಎಂಇಎಸ್ ಕಾರ್ಯಕರ್ತರಿಗೂ ಆಹ್ವಾನ ನೀಡಲಾಗಿತ್ತು.
ಗಡಿವಿವಾದ ಸಂಬಂಧ ಸಂಗ್ರಹಿಸಬೇಕಾದ ಸಾಕ್ಷ್ಯಾಧಾರ, ದಾಖಲೆ ಸಂಬಂಧ ವಿಸ್ತೃತವಾಗಿ ಚರ್ಚೆ ನಡೆಯಲಿದ್ದು, ಸುಪ್ರೀಂಕೋರ್ಟ್ನಲ್ಲಿ ಗಡಿವಿವಾದ ಸಂಬಂಧ ನೇಮಿಸಿರುವ ವಕೀಲರ ತಂಡದ ಜೊತೆಯೂ ಚರ್ಚೆಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಯಾವುದೇ ಸಮಯದಲ್ಲಿ ಸುಪ್ರೀಂಕೋರ್ಟ್ನಲ್ಲಿ ಗಡಿವಿವಾದ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಗಡಿವಿವಾದವನ್ನು ಗಂಭೀರವಾಗಿ ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಸಭೆ ಮೇಲೆ ಸಭೆ ನಡೆಸುತ್ತಿದೆ. ಆದರೆ, ಕರ್ನಾಟಕ ಸರ್ಕಾರದ ಮೌನ ನಡೆಗೆ ಗಡಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಾಠಿಗರಿಗೆ ಆರೋಗ್ಯ ವಿಮೆ: ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಅಲ್ಲದೇ ಈ ಭಾಗದ ಮರಾಠಿಗರಿಗೆ ಆರೋಗ್ಯ ವಿಮೆ ಜಾರಿ ಮಾಡುತ್ತೇವೆ ಎಂದಿದ್ದರು. ಅಲ್ಲದೇ ಆ ಯೋಜನೆ ಕುರಿತು ಕೈಪಿಡಿ ಕೂಡ ಬಿಡುಗಡೆ ಮಾಡಿದ್ದರು. ಅದರ ಬೆನ್ನಲ್ಲೆ ಈಗ ಮಹಾರಾಷ್ಟ್ರ ಸರ್ಕಾರ ಪರಿಹಾರ ನಿಧಿ ಮಂಜೂರು ಮಾಡಿದೆ. ಪರಿಹಾರ ನಿಧಿ ಜೊತೆಗೆ ಮಹಾತ್ಮ ಫುಲೆ ಆರೋಗ್ಯ ವಿಮಾ ಯೋಜನೆ ಜಾರಿ ಮಾಡಿದೆ.
ಇದನ್ನೂಓದಿ:ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ: ಸದನದಲ್ಲಿ ಪ್ರತಿಪಕ್ಷಗಳ ಧರಣಿ, ಸೋಮವಾರಕ್ಕೆ ಕಲಾಪ ಮುಂದೂಡಿಕೆ