ಚಿಕ್ಕೋಡಿ: 10 ವರ್ಷದಲ್ಲಿನ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡುವುದರ ಜೊತೆಗೆ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳ ಆಧಾರದ ಮೇಲೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಜನರ ಬಳಿ ಕೇಳಿಕೊಳ್ಳುತ್ತೇವೆ ಎಂದು ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸವದಿ ಅವರು ಶನಿವಾರ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. "ದೇಶದಲ್ಲಿ ಬದಲಾವಣೆ ತರುತ್ತೇವೆ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಮತ ಪಡೆದು ಪ್ರಧಾನಿ ಮೋದಿ ಜನರಿಗೆ ಮೋಸ ಮಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿನ ನದಿಗಳನ್ನು ಜೋಡಣೆ ಮಾಡುವ ಕನಸ್ಸನ್ನು ಜನರಲ್ಲಿ ಬಿತ್ತಿ ಅವುಗಳನ್ನು ಪೂರ್ಣಗೊಳಿಸಲು ಮೋದಿ ಸರ್ಕಾರ ವಿಫಲವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಬಿಜೆಪಿಗೆ ಪಾಠ ಕಲಿಸಬೇಕಾಗಿದೆ" ಎಂದರು.
ಬಳಿಕ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತರ ಬಗ್ಗೆ ಕಾಳಜಿ ಇದ್ದರೆ ಕೃಷ್ಣ ನದಿಗೆ ನೀರು ಹರಿಸಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸ್ಥಳೀಯ ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಬೇಸಿಗೆಯ ಸಮಯದಲ್ಲಿ ಕೃಷ್ಣ ನದಿಗೆ ಮಹಾರಾಷ್ಟ್ರದಿಂದ 3 ಟಿಎಂಸಿ ನೀರು ಹರಿಸುವಂತೆ ಸವದಿ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ದೇಶದಲ್ಲಿ ಯಾವ ಕಡೆಯಲ್ಲೂ ಮೋದಿ ಅಲೆಯಿಲ್ಲ-ಸಚಿವ ಸತೀಶ್ ಜಾರಕಿಹೊಳಿ: ದೇಶದಲ್ಲಿ ಯಾವ ಕಡೆಯಲ್ಲೂ ಮೋದಿ ಅಲೆಯಿಲ್ಲ, ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಅಲೆ ಜೋರಾಗಿಯೇ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಅಲೆ ಜೋರಾಗಿದೆ. ನರೇಂದ್ರ ಮೋದಿ ಅಲೆ ದೇಶದಲ್ಲಿ ಕಾಣುತ್ತಿಲ್ಲ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಪುತ್ರ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಆಗಿರುವುದರಿಂದ ಈ ಭಾಗಕ್ಕೆ ಪ್ರಚಾರಕ್ಕೆ ಬರುವುದು ವಿಳಂಬವಾಗಿದೆ, ಮುಂದಿನ ದಿನದಲ್ಲಿ ಅವರು ಬರುತ್ತಾರೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ನದಿಗಳಲ್ಲಿ ಇನ್ನೂ ಒಂದು ತಿಂಗಳು ಆಗುವಷ್ಟು ನೀರು ಇದ್ದು, ಯಾವುದೇ ತೊಂದರೆ ಇಲ್ಲ. ಕೃಷ್ಣ ನದಿಗೆ ಹಿಡಕಲ್ ಜಲಾಶಯದಿಂದ ಒಂದು ಟಿಎಂಸಿ ನೀರು ಹರಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಮೊದಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ, ಮೈಸೂರಿನಿಂದ ಯದುವೀರ್ನನ್ನು ಗೆಲ್ಲಿಸಬೇಕು: ಎಚ್ ವಿಶ್ವನಾಥ್ - Lok Sabha Election 2024