ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ತೆಂಕಿಲದಲ್ಲಿ ಇಂದು ನಸುಕಿನ ಜಾವದ ವೇಳೆ ಗುಡ್ಡ ಕುಸಿದಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಬದಲಿ ರಸ್ತೆಯಾಗಿ ಪುತ್ತೂರು ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಆಗಾಗ ಗುಡ್ಡಕುಸಿಯುತ್ತಲೇ ಇದ್ದು ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಈಗಾಗಲೇ ನಗರಸಭೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಡಬ: ಕಡಬ ತಾಲೂಕಿನಲ್ಲಿ ಮಳೆಹಾನಿಗಳು ಸಂಭವಿಸಬಹುದಾದ ಪ್ರದೇಶಗಳಿಗೆ ಪುತ್ತೂರು ಉಪ ಆಯುಕ್ತ ಜುಬಿನ್ ಮೊಹಪಾತ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. "ಮಳೆ, ನೆರೆ, ಗಾಳಿ ಹಾಗೂ ಭೂಕುಸಿತದಿಂದಾಗಿ ಅಪಾಯಗಳು ಎದುರಾಗದಂತೆ ತುರ್ತು ಕ್ರಮ ವಹಿಸುವಂತೆ ಮತ್ತು ಈಗಾಗಲೇ ಎದುರಾಗಿರುವ ಸಾರ್ವಜನಿಕರ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ" ಸೂಚನೆ ನೀಡಿದ್ದಾರೆ.
ನೆಲ್ಯಾಡಿಯಲ್ಲಿ, ಇಚ್ಲಂಪಾಡಿ ಪ್ರದೇಶದ ಹಲವಾರು ಪ್ರದೇಶಗಳಿಗೆ, ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಖಾಸಗಿ ವಿದ್ಯಾಸಂಸ್ಥೆಯೊಂದರ ಪ್ರದೇಶದಲ್ಲಿ, ಕೋಡಿಂಬಾಳ ಗ್ರಾಮದ ಮಡ್ಯಡ್ಕದಿಂದ ಬೊಳ್ಳೆಕುಕ್ಕು ಪ್ರದೇಶದಲ್ಲಿ ಮತ್ತು ಕಡಬ ಪೇಟೆಯ ಸಭಾಭವನವೊಂದರ ಸಮೀಪದಲ್ಲಿ ಉಪ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ತುರ್ತು ಪರಿಸ್ಥಿತಿಯ ಸೇವೆಗಾಗಿ ಈಗಾಗಲೇ ಜಿಲ್ಲಾಡಳಿತ ಹೊರಡಿಸಿದ ಹೆಲ್ಫ್ ಸೆಂಟರ್ ನಂಬರ್ಗಳನ್ನು ಬಳಸುವಂತೆ ಅವರು ಹೇಳಿದ್ದಾರೆ.
'ಎ.ಸಿ'ಗೆ ಗ್ರಾಮಸ್ಥರಿಂದ ಅಭಿನಂದನೆ: ಸುಮಾರು 50 ವರ್ಷಗಳಿಂದ ಸಣ್ಣಪುಟ್ಟ ಕಾಮಗಾರಿಗಳು ನಡೆದದ್ದು ಬಿಟ್ಟರೆ ಹೆಚ್ಚಿನ ಅಭಿವೃದ್ಧಿಯೇ ಕಾಣದ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಮಡ್ಯಡ್ಕ- ಬೊಳ್ಳೆಕುಕ್ಕು ಪ್ರದೇಶಕ್ಕೆ ಎ.ಸಿ' ಭೇಟಿ ನೀಡಿದ್ದಾರೆ. ತುರ್ತಾಗಿ ರಸ್ತೆ ಮತ್ತು ಚರಂಡಿ ದುರಸ್ತಿ, ನೀರು ಹರಿಯುತ್ತಿರುವ ಚರಂಡಿಯಲ್ಲಿ ಹಾಕಿರುವ ವಿದ್ಯುತ್ ಕಂಬಗಳ ತೆರವು, ವಿದ್ಯುತ್ ಕಂಬಗಳ ಮೇಲೆ ಬಗ್ಗಿರುವ ಮರಗಳ ತೆರವು, ಪಂಚಾಯತ್ ರಸ್ತೆಯನ್ನು ಅತಿಕ್ರಮಣ ಮಾಡಿದವರಿಗೆ ಹಾಗೂ ಮಣ್ಣು ಹಾಕಿ ನೀರಿನ ಹರಿವಿಗೆ ತೊಂದರೆ ಮಾಡಿದವರಿಗೆ ನೋಟೀಸ್ ನೀಡುವಂತೆ ಮೆಸ್ಕಾಂ,ಅರಣ್ಯ, ಕಂದಾಯ, ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶವಾದ ಇಲ್ಲಿಗೆ ಅಧಿಕಾರಿಯೋರ್ವರು ಭೇಟಿ ನೀಡುತ್ತಿರುವುದು ಮೊದಲ ಬಾರಿಯಾಗಿದ್ದು ಗ್ರಾಮಸ್ಥರು ಉಪ ಆಯುಕ್ತ ಜುಬಿನ್ ಮೊಹಪಾತ್ರ ಅವರಿಗೆ ಅಭಿನಂದನೆ ಸಲ್ಲಿಸಿದರು.