ದಾವಣಗೆರೆ: 'ಟ್ರಾಯ್ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಹೆಸರಿನಲ್ಲಿ ಖರೀದಿಸಿರುವ ಸಿಮ್ ಮನಿ ಲ್ಯಾಂಡ್ರಿಂಗ್ ಪ್ರಕರಣದಲ್ಲಿ ಬಳಕೆಯಾಗಿದೆ. ನಿಮ್ಮ ಮೇಲೆ 17 ಪ್ರಕರಣಗಳು ದಾಖಲಾಗಿವೆ' ಎಂದು ಹೆದರಿಸಿ, ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರ ಬಳಿ ಆನ್ಲೈನ್ ಮೂಲಕ ಬರೋಬ್ಬರಿ 34 ಲಕ್ಷ ರೂ. ವಂಚಿಸಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಆಗಸ್ಟ್ 12ರಂದು ದಾವಣಗೆರೆ ನಗರದಲ್ಲಿ ಪ್ರಕರಣ ನಡೆದಿದ್ದು, ತಡವಾಗಿ ಗೊತ್ತಾಗಿದೆ. ವಂಚನೆಗೆ ಒಳಗಾದ ವ್ಯಕ್ತಿ ಬಗ್ಗೆ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿರಿಸಿದ್ದಾರೆ. ಆಗಸ್ಟ್ 13ರಂದು ವಂಚನೆ ಒಳಗಾದ ವ್ಯಕ್ತಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?: ಆಗಸ್ಟ್ 12ರಂದು ವ್ಯಕ್ತಿಗೆ ಅಪರಿಚಿತರು ದೂರವಾಣಿ ಕರೆ ಮಾಡಿ, 'ನಾವು ಟ್ರಾಯ್ನಿಂದ ಕರೆ ಮಾಡಿದ್ದೇವೆ. ನಿಮ್ಮ ಹೆಸರಿನಲ್ಲಿ ಇರುವ ಸಿಮ್ ಅಕ್ರಮ ಹಣ ವರ್ಗಾವಣೆಗೆ ಬಳಸಲಾಗಿದೆ. ನಿಮ್ಮ ವಿರುದ್ಧ ಒಟ್ಟು 17 ಪ್ರಕರಣಗಳು ದಾಖಲಾಗಿವೆ' ಎಂದು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ಆಧಾರ್ ಕಾರ್ಡ್ ಸಂಖ್ಯೆ ನೀಡುವಂತೆ ಕೇಳಿದ್ದಾರೆ. ಅಪರಿಚಿತರು ಕಳಿಸಿದ ದೂರವಾಣಿ ಸಂಖ್ಯೆಗೆ ವ್ಯಕ್ತಿ ಆಧಾರ್ ಕಾರ್ಡ್ ಪ್ರತಿಯನ್ನು ವಾಟ್ಸ್ ಆ್ಯಪ್ ಮೂಲಕ ಕಳಿಸಿದ್ದಾರೆ. ಆಗ ಅಪರಿಚಿತರು, 'ಹಲವು ರಾಜ್ಯಗಳಲ್ಲಿ ಮನಿ ಲ್ಯಾಂಡ್ರಿಂಗ್ ಪ್ರಕರಣಗಳು ದಾಖಲಾಗಿವೆ. ನಿಮ್ಮ ಮೇಲೆ ಅರೆಸ್ಟ್ ವಾರಂಟ್ ಜಾರಿಯಾಗಿದೆ' ಎಂದು ಹೆದರಿಸಿದ್ದಾರೆ. ಅಲ್ಲದೇ, 'ನಿಮ್ಮನ್ನು ಈ ಕೂಡಲೇ ಬಂಧಿಸುತ್ತೇವೆ. ನೀವು ಮುಂಬೈ ತಿಲಕ್ ನಗರ ಪೊಲೀಸ್ ಠಾಣೆಗೆ ಬರಬೇಕಾಗುತ್ತದೆ' ಎಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಡಿಯೋ ಕಾಲ್ನಲ್ಲಿ ಸಹಾಯದ ಭರವಸೆ: ಮುಂದುವರೆದು, ಜಾರಿ ನಿರ್ದೇಶನಾಲಯ (ಇ.ಡಿ) ಲೆಟರ್ಹೆಡ್ ಇರುವ ಪತ್ರ ಕಳುಹಿಸಿ, ವಾಟ್ಸ್ ಆ್ಯಪ್ ವಿಡಿಯೋ ಕಾಲ್ ಮಾಡಿದ್ದಾರೆ. ಅ ವಿಡಿಯೋ ಕಾಲ್ನಲ್ಲಿ ಪೊಲೀಸ್ ಡ್ರೆಸ್ನಲ್ಲಿ ಇರುವವರು ದೂರುದಾರರ ಜೊತೆ ಮಾತನಾಡಿದ್ದಾರೆ. ಬಳಿಕ ತಮ್ಮ ಮೇಲಧಿಕಾರಿಗಳ ಜೊತೆ ಮಾತನಾಡಿ ಎಂದು ಮತ್ತೊಬ್ಬರಿಗೆ ಫೋನ್ ಕೊಟ್ಟಿದ್ದಾರೆ. ಹೇಮರಾಜ್ ಕೋಲಿ ಎಂಬುವರ ಜೊತೆ ಮಾತನಾಡಿಸಿ, 'ನಿಮಗೆ ನಾವು ಸಹಾಯ ಮಾಡುತ್ತೇವೆ' ಎಂದು ನಂಬಿಸಿದ್ದಾರೆ. ಆನಂತರ, 'ಭ್ರಷ್ಟಾಚಾರ ನಿಗ್ರಹ ಕಮಿಷನರ್ ವಿ.ಜಿ.ಪಾಟೀಲ್ ಎಂಬವರ ಜೊತೆ ಮಾತನಾಡಿ, ಅವರು ಸಹಾಯ ಮಾಡಿದರೆ ನಿಮ್ಮ ಪ್ರಕರಣವನ್ನು ಆದ್ಯತೆಯ ಮೇರೆಗೆ ತೆಗೆದುಕೊಂಡು ತನಿಖೆ ನಡೆಸಿ, ಸಹಾಯ ಮಾಡುತ್ತಾರೆ' ಎಂದು ನಂಬುವಂತೆ ಮಾಡಿದ್ದಾರೆ. ಆನಂತರ, ಭ್ರಷ್ಟಾಚಾರ ನಿಗ್ರಹ ಕಮಿಷನರ್ ವಿ.ಜಿ.ಪಾಟೀಲ್ ಜೊತೆ ವಿಡಿಯೋ ಕಾಲ್ ಮಾಡಿಸಿ ಕೊಟ್ಟಿದ್ದಾರೆ. ವಿ.ಜಿ.ಪಾಟೀಲ್ ಜೊತೆ ಮಾತನಾಡಿದಾಗ, 'ನಾವು ನಿಮಗೆ ಸಹಾಯ ಮಾಡುತ್ತೇವೆ. ನಿಮ್ಮ ಹೆಸರಿನಲ್ಲಿ ಒಂದು ಕೌಂಟರ್ ಎಫ್ಐಆರ್ ಮಾಡಲಾಗಿದೆ' ತಿಳಿಸಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
'ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ಆರ್ಬಿಐನವರು (RBI) ಪರಿಶೀಲನೆ ಮಾಡುತ್ತಾರೆ. ನಿಮ್ಮ ಕುಟುಂಬದವರೆಲ್ಲರ ಖಾತೆಯಲ್ಲಿರುವ ಹಣವನ್ನು ಒಂದೇ ಖಾತೆಗೆ ಹಾಕಿಕೊಂಡು, ನಾವು ಕಳುಹಿಸುವ ಖಾತೆ ನಂಬರಿಗೆ ದೃಢೀಕರಣ ಮಾಡಿರಿ. ಆರ್ಬಿಐನವರು ನಿಮ್ಮ ಅಕೌಂಟ್ಗಳನ್ನು ಚೆಕ್ ಮಾಡಿದ 03 ದಿನಗಳಲ್ಲಿ ನಿಮ್ಮ ಹಣ ವಾಪಸ್ ಬರುತ್ತದೆ ಎಂದು ನಂಬಿಸಿದ್ದಾರೆ.
ನಿಮ್ಮ ಬಳಿ ಎಷ್ಟು ಹಣ ಇದೆ? ಅಂತಾ ಕೇಳಿದ್ದಾರೆ. 34 ಲಕ್ಷ ಇದೇ ಎಂದು ಹೇಳಿದಾಗ, ಸರಿ ಅಷ್ಟೂ ಹಣವನ್ನು ನಾವು ಕಳುಹಿಸುವ ಅಕೌಂಟ್ಗೆ ಹಾಕಿ ಅಂತಾ ತಿಳಿಸಿದ್ದಾರೆ. ಅಪರಿಚಿತರು ತಿಳಿಸಿದ ಅಕೌಂಟ್ಗೆ 34 ಲಕ್ಷ ರೂ. ವರ್ಗಾವಣೆ ಮಾಡಿದ್ದೇನೆ. ಬಳಿಕ ಮೋಸ ಆಗಿರುವುದು ಗೊತ್ತಾಗಿದೆ ಎಂದು ಹಣ ಕಳೆದುಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಫೋನ್ ಪೇ ಹೆಸರಲ್ಲಿ ನಕಲಿ ಕರೆ: ರಿವ್ಯೂ ನೀಡಲು ಹೋಗಿ ಲಕ್ಷ - ಲಕ್ಷ ಹಣ ಕಳೆದುಕೊಂಡ ಯುವಕ - fake calls in name of phonepe