ಮೈಸೂರು: ಈ ಬಾರಿಯ ಬಜೆಟ್ನಲ್ಲಿ ಬರದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು. ಕಬ್ಬು ತೂಕದಲ್ಲಿ ಮೋಸ ತಪ್ಪಿಸಲು ಎಪಿಎಂಸಿಗಳ ಮೂಲಕ ತೂಕದ ಯಂತ್ರ ಸ್ಥಾಪಿಸುವ ಘೋಷಣೆ, ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ, ಗ್ರಾಮೀಣ ಹೋಟೆಲ್ ಮಹಿಳೆಯರಿಗೆ ಉದ್ಯೋಗ ಭರವಸೆ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿರುವುದು ಸಂತಸ ತಂದಿದೆ. ಇದನ್ನು ಸ್ವಾಗತಿಸುತ್ತೇನೆ. ಕನಿಷ್ಠ ಬೆಂಬಲ ಬೆಲೆಗೆ ಶಾಸನ ಸ್ವರೂಪ ನೀಡುವ ಜೊತೆಗೆ, ತರಕಾರಿ ಹಣ್ಣು ಅಡಿಕೆ ಮುಂತಾದ ತೋಟಗಾರಿಕಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರುವುದು ಸರಿಯಿದೆ ಎಂದರು.
ಬಜೆಟ್ ಟೀಕಿಸಿದ ಬಿಜೆಟ್ ಹಾಲಿ, ಮಾಜಿ ಶಾಸಕರು: ಮೈಸೂರು ನಗರದ ಹಾಲಿ ಶಾಸಕ ಟಿ.ಎಸ್ ಶ್ರೀವತ್ಸ ಮತ್ತು ಮಾಜಿ ಶಾಸಕ ಎಲ್.ನಾಗೇಂದ್ರ ಬಜೆಟ್ ಅನ್ನು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲೆಯವರೇ ಆಗಿದ್ದರೂ ಈ ಬಾರಿಯ ಬಜೆಟ್ನಲ್ಲಿ ಏನನ್ನೂ ನೀಡದೆ ತೀವ್ರ ನಿರಾಶೆ ಮೂಡಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಟೀಕಿಸುವುದಕ್ಕಷ್ಟೇ ಮೀಸಲಾದ ಬಜೆಟ್ ಪ್ರತಿ ಎಂದು ಟಿ.ಎಸ್.ಶ್ರೀವತ್ಸ ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲು ಪರದಾಡುತ್ತಿರುವ ಸಿಎಂ, ನೀರಾವರಿ, ಗ್ರಾಮೀಣಾಭಿವೃದ್ಧಿ ಮೊದಲಾದ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸರ್ಕಾರ ಯಾವುದೇ ವರ್ಗಗಳ ಅಭಿವೃದಿಗೂ ಗಮನಹರಿಸಿಲ್ಲ. ಬರೀ ಪುಸ್ತಕದಲ್ಲಿ ಯೋಜನೆಗಳನ್ನು ಪ್ರಕಟಿಸಲಾಗಿದೆಯೇ ಹೊರತು ಕಾರ್ಯರೂಪಕ್ಕೆ ಬರುವಂತಹದ್ದು ಏನೂ ಇಲ್ಲ. ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವ ಬಗ್ಗೆ ಅನುದಾನ ಪ್ರಸ್ತಾಪಿಸಿಲ್ಲ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಗೆ200 ಕೋಟಿ ರೂ.ಅನುದಾನ ಮೀಸಲಿಡುವಂತೆ ಪ್ರಸ್ತಾಪ ಮಾಡಿದ್ದರೂ ಬರೀ ಅಭಿವೃದಿ ಹೆಸರು ಹೇಳಿ ಮೈಸೂರಿಗರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಉಪ್ಪು ಹುಳಿ ಖಾರವಿಲ್ಲದ ಆಯವ್ಯಯ: ಸಿದ್ದರಾಮಯ್ಯನವರ ಬಜೆಟ್ನಲ್ಲಿ ಯಾವುದೇ ಸ್ಪಷ್ಟತೆಯಿಲ್ಲ. ಇದೊಂದು ಉಪ್ಪು ಹುಳಿ ಖಾರವಿಲ್ಲದ ಆಯವ್ಯಯ ಎಂದು ಬಿಜೆಪಿ ನಗರಾಧ್ಯಕ್ಷ ಹಾಗು ಮಾಜಿ ಶಾಸಕ ಎಲ್.ನಾಗೇಂದ್ರ ವ್ಯಂಗ್ಯವಾಡಿದರು. ಬಜೆಟ್ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತಹ ಕೊಡುಗೆಗಳಿಲ್ಲ. ಇದೊಂದು ನಿರಾಶದಾಯಕ ಬಜೆಟ್ ಆಗಿದ್ದು, ಜನರನ್ನು ನಿರಾಸೆಗೊಳಿಸಿದೆ. ಇಂತಹ ಆಯವ್ಯಯವನ್ನು ಜನರು ನಿರೀಕ್ಷಿಸಿರಲಿಲ್ಲ. ರೈತರು ಸಾಲ ಮನ್ನಾ ನಿರೀಕ್ಷೆಯಲ್ಲಿದ್ದರು. ಆದರೆ ಅದು ಹುಸಿಯಾಗಿದೆ. ಕೃಷಿ ವಿರೋಧಿ ಬಜೆಟ್ ಎಂಬುದು ಗೊತ್ತಾಗಿದ್ದು, ಬುರುಡೆ ಬಿಡಲಾಗಿದೆ ಎಂದರು.
ಇನ್ನು ಜಲಸಂಪನ್ಮೂಲ ಇಲಾಖೆಗೆ ಯಾವುದೇ ಅನುದಾನ ನೀಡದಿರುವುದರಿಂದ ನೀರಾವರಿ ಕ್ಷೇತ್ರಕ್ಕೆ ಹಿನ್ನಡೆ ಉಂಟಾಗಿದೆ. ಈ ನಡುವೆ ಲೋಸಭಾ ಚುನಾವಣೆಯನ್ನು ಮುಂದಿಟ್ಟಿಕೊಂಡು ಅಲ್ಪಸಂಖ್ಯಾತರ ಸಮುದಾಯವನ್ನು ಓಲೈಸುವ ಕೆಲಸ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಇವರಿಗೆ ಜನರೇ ಬುದ್ಧಿ ಕಲಿಸಲಿದ್ದಾರೆ. ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಇದಕ್ಕೆ ಬಗ್ಗೆ ಗಮನಹರಿಸುವ ಕೆಲಸವನ್ನು ಸಿಎಂ ಮಾಡಿಲ್ಲ ಎಂದು ಎಲ್ ನಾಗೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮಹಿಳಾ ಅಭ್ಯುದಯಕ್ಕೆ ಪೂರಕ ಬಜೆಟ್: ಎಫ್‌ಕೆಸಿಸಿಐ ಉಪಾಧ್ಯಕ್ಷೆ ಉಮಾ ರೆಡ್ಡಿ