ಶಿವಮೊಗ್ಗ: ಪುರಾಣ ಪ್ರಸಿದ್ಧ ಶಂಕರಾಚಾರ್ಯರಿಂದ ಸ್ಥಾಪಿತವಾದ ಶಾರದಾ ಪೀಠದ ಕೂಡಲಿ ಶೃಂಗೇರಿ ಮಠದಲ್ಲಿನ ಬಂಗಾರದ ಪಾದುಕೆ ಕಳುವಾಗಿದೆ ಎಂದು ಮಠದ ಭಕ್ತ ರಮೇಶ್ ಹುಲುಮನಿ ಎಂಬವರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಂಗಾರದ ಪಾದುಕೆ ಸುಮಾರು 60 ಲಕ್ಷ ರೂ ಮೌಲ್ಯದ್ದಾಗಿದೆ. ಪಾದುಕೆಯ ಜೊತೆಗೆ ಬೆಳ್ಳಿಯ ಶ್ರೀಮುದ್ರೆ, ಒಂದು ದೊಡ್ಡ ಮುದ್ರೆ, ಇನ್ನೊಂದು ಸಣ್ಣ ಮುದ್ರೆ ಹಾಗೂ ಶ್ರೀಮನ್ನಾರಾಯಣಸ್ಕೃತಯ ಎಂಬ ಬೆಳ್ಳಿಯ ಸೀಲು ಕೂಡಾ ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೇವಾಲಯದ ಹುಂಡಿ ಎಣಿಕೆ ನಡೆಸಿ, ಹಣವನ್ನು ಬ್ಯಾಂಕ್ಗೆ ಕಟ್ಟಲು ಸಮಯವಾದ ಕಾರಣ ಹಣವನ್ನು ಬೀರುವಿನಲ್ಲಿಡಲು ಹೋದಾಗ ಬೀರುವಿನ ಬೀಗ ತೆಗೆಯಲು ಆಗಲಿಲ್ಲ. ಆಗ ಸ್ವಾಮೀಜಿ ತಮ್ಮ ಬಳಿ ಇದ್ದ ಬೀಗದಿಂದ ತೆರೆಯಲು ಹೋದರು. ಅದೂ ಕೂಡ ಬಾರದೇ ಹೋದಾಗ ದೇವಾಲಯದ ಅರ್ಚಕರು ತಮ್ಮ ಬಳಿ ಇರುವ ಬೀಗ ನೀಡಿದ್ದಾರೆ. ಇವರು ನೀಡಿದ ಬೀಗದಿಂದ ಬೀರು ತೆರೆಯುತ್ತದೆ. ಅವಸರದಲ್ಲಿ ಅದರಲ್ಲಿ ಹಣವನ್ನಿಟ್ಟು ಮತ್ತೆ ಬೀಗ ಹಾಕುತ್ತಾರೆ. ಆದರೆ, ಮರು ತಕ್ಷಣವೇ ಸ್ವಾಮೀಜಿಗಳಿಗೆ ಅನುಮಾನ ಬಂದು ಪಾದುಕೆ ಇದ್ದ ಬೀರುವನ್ನು ತೆಗೆಯಲು ಹೋದಾಗ ಅದರಲ್ಲಿ ಪಾದುಕೆ ಹಾಗೂ ಮುದ್ರೆಗಳು ಇಲ್ಲದಿರುವುದು ಕಂಡುಬರುತ್ತದೆ.
ಮಠದ ಪೀಠಾಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀಗಳು ಕಳೆದ 8 ತಿಂಗಳಿನಿಂದ ಮಠದಲ್ಲಿರಲಿಲ್ಲ. ಬೆಂಗಳೂರು, ದಾವಣಗೆರೆ ಶಾಖಾ ಮಠದಲ್ಲಿದ್ದು, ಕೊಡಲಿ ಮಠಕ್ಕೆ ಭೇಟಿ ನೀಡಲಿಲ್ಲ. ಹಾಗಾಗಿ, ಕಳುವಾಗಿರುವ ಸುವರ್ಣ ಪಾದುಕೆಗಳನ್ನು ಹುಡುಕಿ ಕೊಡುವಂತೆ ರಮೇಶ್ ಹುಲುಮನಿ ಅವರು ಸ್ವಾಮೀಜಿಗಳ ಪರವಾಗಿ ದೂರು ನೀಡಿದ್ದಾರೆ.
ಈ ಕುರಿತು 'ಈಟಿವಿ ಭಾರತ' ಜೊತೆ ಮಾತನಾಡಿದ ದೂರುದಾರ ರಮೇಶ್ ಹುಲುಮನಿ, ಸ್ವಾಮೀಜಿಗಳು ಹಣ ಇಡಲು ಹೋದಾಗ ಅನುಮಾನಗೊಂಡು ತಮ್ಮ ಬೀರುವನ್ನು ತೆಗೆದರು. ಆಗ ಅಲ್ಲಿ ಪಾದುಕೆ ಸೇರಿದಂತೆ ಮುದ್ರಿಕೆಗಳು ಕಾಣೆಯಾಗಿದ್ದು ಕಂಡು ಬಂದಿತು. ತಕ್ಷಣ ಮಠದಲ್ಲಿ ವಿಚಾರಿಸಿದೆವು. ಯಾರೂ ನೋಡಿಲ್ಲವೆಂದರು. ಬೇರೆ ದಾರಿ ಕಾಣದೇ ಸ್ವಾಮೀಜಿಗಳ ಪರವಾಗಿ ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡಬೇಕಾಯಿತು ಎಂದು ನಡೆದ ಘಟನಾವಳಿ ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಕೂಡಲಿ ಮಠದ ಪಾದುಕೆ ಕಳೆದ ಒಂದು ವರ್ಷದ ಅವಧಿಯಲ್ಲಿ ಯಾವಾಗ ಕಳುವಾಗಿದೆ ಎಂದು ತಿಳಿದಿಲ್ಲ. ಇದರಿಂದ ಎಲ್ಲಾ ಆಯಾಮಗಳಿಂದ ಇಲಾಖೆಯು ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಅಂಗಡಿಯ ಮೇಲ್ಛಾವಣಿ ಮುರಿದು ಲಕ್ಷಾಂತರ ಮೌಲ್ಯದ ಮದ್ಯ ಹೊತ್ತೊಯ್ದ ಕಳ್ಳರು! - Liquor Theft