ಬೆಂಗಳೂರು: ಕೆಎಸ್ಆರ್ಟಿಸಿಗೆ 100 ಹೊಸ ವಿನ್ಯಾಸದ ಬಸ್ಗಳು ಸೇರ್ಪಡೆಯಾಗಿವೆ. ನೂತನ 'ಅಶ್ವಮೇಧ ಕ್ಲಾಸಿಕ್ ಬಸ್'ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆ ಮಾಡಿದರು.
ಅಶ್ವಮೇಧ ಬಸ್ಗಳ ವಿಶೇಷತೆ: ವಾಹನದ ಎತ್ತರ 3.4 ಮೀಟರ್ (ಈ ಹಿಂದೆ 3.2 ಮೀಟರ್ ಇತ್ತು). 50ಕ್ಕೂ ಹೆಚ್ಚಿನ ಎತ್ತರದ ಉತ್ತಮ ಗುಣಮಟ್ಟದ ಕುಷನ್ ಮತ್ತುರೆಕ್ಸಿನ್ ಒಳಗೊಂಡಂತೆ ಪ್ರತಿ ಆಸನದ ಹಿಂಬದಿಯಲ್ಲಿ ಮ್ಯಾಗಜಿನ್ ಹಾಗೂ ವಾಟರ್ ಬಾಟಲ್ ಪೌಚ್‌ನ ಸೌಲಭ್ಯ ಇದೆ.
ವಾಹನದ ಮುಂದಿನ ಹಾಗೂ ಹಿಂದಿನ ಗಾಜು ವಿಶಾಲವಾಗಿದೆ. ಪ್ರಯಾಣಿಕರ ಕಿಟಕಿ ಫೋಮ್ ಹಾಗೂ ಮೇಲಿನ ಗಾಜು ಕೂಡ ಹೆಚ್ಚು ಅಗಲವಾಗಿವೆ. ಮೇಲ್ಛಾವಣಿಯಲ್ಲಿ 2 ಸಾಲು ಗ್ರಾಬ್ ರೈಲ್, ಬಸ್ನ ಹಿಂದೆ ಹಾಗೂ ಮುಂದೆ ಎಲ್.ಇ.ಡಿ ಮಾರ್ಗ ಫಲಕ ಅಳವಡಿಸಲಾಗಿದೆ.
ಜಾಹೀರಾತು ಮಾದರಿಯ ಹ್ಯಾಂಡ್ ಗ್ರಿಪ್, ಎಫ್.ಆರ್.ಪಿ ಡ್ಯಾಶ್ ಬೋರ್ಡ್, ಪ್ರವೇಶದ ಫುಟ್ ಸ್ಟೆಪ್ ಮೇಲೆ ಸ್ಕ್ರಿಪ್ ಮಾದರಿಯ ಎಲ್.ಇ.ಡಿ ಬಲ್ಬ್ಗಳು ಮತ್ತು ಮುಂಬದಿ ಹಾಗೂ ಹಿಂಬದಿಯಲ್ಲಿ ತಲಾ 1 ಕ್ಯಾಮರಾ ಆಳವಡಿಸಲಾಗಿದೆ. ಎಲೆಕ್ಟ್ರಾನಿಕ್ ವಾಹನ ಸ್ಥಿರತೆ ನಿಯಂತ್ರಣ ಉಪಕರಣವೂ ಇದೆ. ಟ್ರ್ಯಾಕಿಂಗ್ ಉಪಕರಣ, ಪ್ಯಾನಿಕ್ ಬಟನ್‌ಗಳು ಮತ್ತು ಬಸ್ ನಿಲ್ದಾಣಗಳ ಮಾಹಿತಿ ನೀಡುವ ಧ್ವನಿವರ್ಧಕ ಯಂತ್ರಗಳಿವೆ.
ಸುರಕ್ಷಿತ ಪ್ರಯಾಣಕ್ಕೆ ಅನುಕೂಲ-ಸಿಎಂ: ಹೊಸ ಬಸ್ಗಳನ್ನು ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ರಾಜ್ಯದಲ್ಲಿ ಶಕ್ತಿ ಯೋಜನೆಯಡಿ 146 ಕೋಟಿ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಶಕ್ತಿ ಯೋಜನೆ ಪೂರಕವಾಗಿದೆ" ಎಂದು ತಿಳಿಸಿದರು.
"ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಈ ವರ್ಷ ಒಂದು ಸಾವಿರ ಬಸ್ಗಳನ್ನು ಸೇರ್ಪಡೆ ಮಾಡುತ್ತಿದ್ದು, ಇಂದು ನೂರು ಬಸ್ಗಳ ಬಿಡುಗಡೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಹೊಸ ಬಸ್ ಸೇರ್ಪಡೆ ಆಗಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಕೂಡ ಕೆಲವು 3,800 ವಾಹನಗಳನ್ನು ಸ್ಥಗಿತಗೊಳಿಸಲಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಸಂಸ್ಥೆಗೆ 5,800 ಬಸ್ ಸೇರ್ಪಡೆ ಮಾಡುತ್ತಿದ್ದೇವೆ" ಎಂದರು.
ಸಿಬ್ಬಂದಿಗೆ ವಿಮಾ ಸೌಲಭ್ಯ: "ಕೆಎಸ್ಆರ್ಟಿಸಿ ಸಿಬ್ಬಂದಿಗೆ ವಿಮಾ ಸೌಲಭ್ಯವನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಕರ್ತವ್ಯದ ವೇಳೆ ಮೃತಪಡುವ ಸಿಬ್ಬಂದಿಗೆ ಪರಿಹಾರ ಮೊತ್ತವನ್ನು 3 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ" ಎಂದು ಸಿಎಂ ತಿಳಿಸಿದರು.
"ಕೇವಲ ಸುಳ್ಳು ನುಡಿಯುವ ಬಿಜೆಪಿಯವರು ಹಾಗೂ ಮೋದಿ ಗ್ಯಾರಂಟಿ ಎಂಬ ಸುಳ್ಳು ಭರವಸೆಗೆ ಜನರು ಮರುಳಾಗಬಾರದು. ಎಲ್ಲ ಜಾತಿ, ಧರ್ಮಗಳ ಬಡವರಿಗೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಎಲ್ಲ ಮಹಿಳೆಯರಿಗೂ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ಹಿಂದೆ ಯಾವ ಸರ್ಕಾರದವರೂ ಇಂತಹ ಪ್ರಯತ್ನ ಕೈಗೊಂಡಿರಲಿಲ್ಲ" ಎಂದರು.
"ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರೂ ಹೇಳಿದ್ದರು. ತಾವು 10 ವರ್ಷದಿಂದ ಅಧಿಕಾರದಲ್ಲಿದ್ದರೂ ಇಂತಹ ಗ್ಯಾರಂಟಿಗಳನ್ನು ಜನರಿಗೆ ನೀಡಲಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದರೆ ಭಾರತದ ಪ್ರತಿ ಕುಟುಂಬಕ್ಕೂ 15 ಲಕ್ಷ ನೀಡುವ, ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಆದರೆ, ಈ ಯಾವುದನ್ನೂ ಈಡೇರಿಸದ ಪ್ರಧಾನಿ ಮೋದಿಯವರು, ಈಗ ಮೋದಿ ಗ್ಯಾರಂಟಿ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರ ಸುಳ್ಳುಗಳಿಗೆ ಜನರು ಮರುಳಾಗಬಾರದು" ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ 1,87,867 ಕೋಟಿ ರೂ. ನಷ್ಟವಾಗಿದೆ: ಸಿಎಂ ಸಿದ್ದರಾಮಯ್ಯ