ದಾವಣಗೆರೆ : ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಗುಡ್ಡದಹಟ್ಟಿ ಗ್ರಾಮದಲ್ಲಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಪರದಾಟ ನಡೆಸುತ್ತಿದ್ದರು. ಈ ಕುರಿತು ಈಟಿವಿ ಭಾರತ ವಿಸ್ತೃತವಾದ ವರದಿ ಮಾಡಿತ್ತು. ವರದಿ ಸದ್ದು ಮಾಡಿದ ಬೆನ್ನಲ್ಲೇ ಗುಡ್ಡದಹಟ್ಟಿ (ಶ್ರೀರಂಗನ ಮಟ್ಟಿ) ಗ್ರಾಮಕ್ಕೆ ಕೊನೆಗೂ ಸರ್ಕಾರಿ ಬಸ್ ಬಂದಿದೆ. ಇದೀಗ ಇಡೀ ಜಿಲ್ಲಾಡಳಿತ ಗುಡ್ಡದಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈಟಿವಿ ಭಾರತ ವರದಿ ಗಮನಿಸಿದ ಮಾಯಕೊಂಡ ಶಾಸಕ ಕೆ. ಎಸ್ ಬಸವಂತಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ, ತಹಶೀಲ್ದಾರ್ ಜಿ ಎಂ ಅಶ್ವಥ್ ಅವರು ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಗುಡ್ಡದಹಟ್ಟಿ (ಶ್ರೀರಂಗನಮಟ್ಟಿ) ಗ್ರಾಮಕ್ಕೆ ಭೇಟಿ ನೀಡಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.
ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆ ಈಡೇರಿದೆ. ಗ್ರಾಮದಲ್ಲಿ ಐದನೇ ತರಗತಿವರೆಗೂ ಮಾತ್ರ ಶಾಲೆ ಇರುವ ಕಾರಣ ಹೆಚ್ಚಿನ ಓದಿಗಾಗಿ ಎಂಟು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಮಕ್ಕಳಿಗೆ ಎದುರಾಗಿತ್ತು. ಬಸ್ ಇಲ್ಲದ ಹಿನ್ನೆಲೆ ಸಾಕಷ್ಟು ಯುವತಿಯರನ್ನು ಶಾಲೆ ಬಿಡಿಸಿ ಪೋಷಕರು ಕೂಲಿ ಕೆಲಸಕ್ಕೆ, ಮದುವೆ ಮಾಡಲು ನಿರ್ಧಾರ ಮಾಡಿದ್ದರು.
ಇದೀಗ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಬಂದಿರುವುದರಿಂದ ಬಸ್ ಕಂಡು ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಗ್ರಾಮಸ್ಥರು ನೂತನ ಬಸ್ಗೆ ಪೂಜೆ ಸಲ್ಲಿಸಿ ಗ್ರಾಮಕ್ಕೆ ಬರಮಾಡಿಕೊಂಡಿದ್ದಾರೆ. ಇದೀಗ ಗ್ರಾಮಸ್ಥರು ಈಟಿವಿ ಭಾರತಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
ಈಟಿವಿ ಭಾರತಕ್ಕೆ ಧನ್ಯವಾದಗಳನ್ನ ತಿಳಿಸಿದ ಗ್ರಾಮಸ್ಥರು : ಈಟಿವಿ ಭಾರತ ಗುಡ್ಡದಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿ ಕೆಎಸ್ಆರ್ಟಿಸಿ ಬಸ್ ಬರುವಂತೆ ಮಾಡಿದ್ದಕ್ಕಾಗಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥ ರಮೇಶ್ ನಾಯ್ಕ್ ಪ್ರತಿಕ್ರಿಯಿಸಿ, 'ನಮ್ಮ ಗ್ರಾಮದಲ್ಲಿ ಸಮಸ್ಯೆಗಳಿದ್ದವು. ಇದರ ಬಗ್ಗೆ ಈಟಿವಿ ಭಾರತ ನವರು ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದರು. ಆ ವರದಿಯಿಂದ ಜಿಲ್ಲಾಡಳಿತ ಗ್ರಾಮಕ್ಕೆ ಬಂದು ಸಭೆ ಮಾಡಿ ಸಮಸ್ಯೆ ಬಗೆಹರಿಸಲು ಟೊಂಕ ಕಟ್ಟಿ ನಿಂತಿದೆ. ಕೆಎಸ್ಆರ್ಟಿಸಿ ಬಸ್ ನಮ್ಮ ಗ್ರಾಮಕ್ಕೆ ಬಂದಿದೆ. ಸಮಸ್ಯೆ ಬಗೆಹರಿದಿದೆ, ಈಟಿವಿ ಭಾರತಕ್ಕೆ ಧನ್ಯವಾದಗಳು' ಎಂದು ತಿಳಿಸಿದರು.