ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ -2ರ ಫಲಿತಾಂಶ ಆನ್ ಲೈನ್ ಮೂಲಕ ಪ್ರಕಟಗೊಂಡಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇದೇ ವೇಳೆ, ಆಗಸ್ಟ್ 2 ರಿಂದ ಎಸ್ಎಸ್ಎಲ್ಸಿ ಪರೀಕ್ಷೆ 3 ಅನ್ನು ನಡೆಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.
2023 - 24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ- 2ನಲ್ಲಿ 2,23,293 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಬಾರಿ ಶೇ.31.02 ರಷ್ಟು ಫಲಿತಾಂಶ ಬಂದಿದ್ದು, ಅದರಲ್ಲಿ 69,275 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1,44,153 ಬಾಲಕರಲ್ಲಿ 38,820 ಬಾಲಕರು ಉತ್ತೀರ್ಣರಾಗಿದ್ದಾರೆ. 79,140 ಬಾಲಕಿಯರು ಪರೀಕ್ಷೆ ಬರೆದಿದ್ದು, ಅದರಲ್ಲಿ 30,455 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಫಲಿತಾಂಶದ ವಿವರ: ರಾಜ್ಯದ 5401 ಸರ್ಕಾರಿ ಶಾಲೆಗಳ 1,10,654 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 3,2570 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಸರ್ಕಾರಿ ಶಾಲೆಗಳಿಗೆ ಶೇ.29.43 ರಷ್ಟು ಫಲಿತಾಂಶ ಸಿಕ್ಕಿದೆ. 3,503 ಅನುದಾನಿತ ಶಾಲೆಗಳ 66,712 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 19,154 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ 5315 ಶಾಲೆಗಳ 45,927 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 17,551 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶಗಳ 89,691 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 27,955 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಗ್ರಾಮೀಣ ಪ್ರದೇಶದ 1,33,602 ವಿದ್ಯಾರ್ಥಿಗಳಲ್ಲಿ 41,320 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಜೂನ್ 14 ರಿಂದ 22 ರವರೆಗೆ ರಾಜ್ಯದ 724 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ-2 ಅನ್ನು ನಡೆಸಲಾಗಿತ್ತು. ಜೂನ್ 26 ರಿಂದ 30ರವರಗೆ 14 ಶೈಕ್ಷಣಿಕ ಜಿಲ್ಲೆಗಳ 85 ಮೌಲ್ಯಮಾಪನ ಕೇಂದ್ರದಲ್ಲಿ 21,658 ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ನಡೆಸಿದ್ದಾರೆ.
ಹೀಗೆ ನೋಡಿ ಫಲಿತಾಂಶ: ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸಲು karresults.nic.in. ಇಲ್ಲಿಗೆ ಲಾಗಿನ್ ಆಗಬಹುದಾಗಿದೆ. ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಜುಲೈ 10 ಇಂದಿನಿಂದ ಜುಲೈ 15ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಂಕಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 13 ರಿಂದ 18ರವರೆಗೆ ಅವಕಾಶ ನೀಡಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆ- 3 ದಿನಾಂಕ ಪ್ರಕಟ: ಎಸ್.ಎಸ್.ಎಲ್.ಸಿ ಪರೀಕ್ಷೆ- 3ಕ್ಕೆ ಹೆಸರು ನೋಂದಾಯಿಸಲು ಇಂದಿನಿಂದ ಜುಲೈ 17ರವರೆಗೆ ಅವಕಾಶ ಕಲ್ಪಿಸಿದ್ದು, ಆಗಸ್ಟ್ 2 ರಿಂದ 9ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಧಾರವಾಡ ತಹಶೀಲ್ದಾರ್ ಕಚೇರಿ ಸಿಬ್ಬಂದಿಯ ಬ್ಯಾಗ್ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ