ಶಿವಮೊಗ್ಗ: ರಾಜ್ಯ ಸರ್ಕಾರ ದೆಹಲಿಯ ಜಂತರ್ ಮಂತರ್ನಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಪ್ರಾರಂಭಿಸಿದೆ ಎಂದು ಬಿಜೆಪಿ ಹಿರಿಯ ನಾಯಕ ಕೆ. ಎಸ್. ಈಶ್ವರಪ್ಪ ದೆಹಲಿ ಪ್ರತಿಭಟನೆಯನ್ನು ಖಂಡಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ದೆಹಲಿಯ ಜಂತರ್ ಮಂತರ್ನಲ್ಲಿ ಮೊದಲನೇ ಚುನಾವಣಾ ಪ್ರಚಾರ ಸಭೆಯನ್ನು ಕಾಂಗ್ರೆಸ್ ಪ್ರಾರಂಭಿಸಿದೆ. ಅದು ಕೂಡ ಶ್ರೀಸಾಮಾನ್ಯರ ತೆರಿಗೆ ಹಣದಲ್ಲಿ ನಡೆಸುತ್ತಿದ್ದಾರೆ. ಸಿಎಂ ಹಾಗೂ ಡಿಸಿಎಂ ತಮ್ಮ ಮಂತ್ರಿ, ಶಾಸಕರನ್ನು ಚುನಾವಣಾ ಪ್ರಚಾರಕ್ಕಾಗಿ ದೆಹಲಿಗೆ ಕರೆದೊಯ್ದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶ ವಿಭಜನೆ ಹೊಸತಲ್ಲ: ಬಳಿಕ ಮಾತನಾಡಿದ ಅವರು ದೇಶ ವಿಭಜನೆ ಕಾಂಗ್ರೆಸ್ಗೆ ಹೊಸತಲ್ಲ. ಅಧಿಕಾರ ಹಾಗೂ ಖುರ್ಚಿ ಆಸೆಗಾಗಿ ದೇಶವನ್ನು ಒಡೆದಿದ್ದಾರೆ. ಈಗ ಮತ್ತೆ ದೇಶವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ಸಿಗರು ಡ್ರಾಮ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಪಾಲಿನ ಪೂರ್ಣ ಪ್ರಮಾಣದ ಅನುದಾನ ನೀಡಲಾಗಿದೆ, ಕೇಂದ್ರದಿಂದ ಯಾವುದೇ ಹಣ ಬಾಕಿ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ರಾಜ್ಯಕ್ಕೆ ಅನುದಾನ ಹಂಚಿಕೆಯನ್ನು ಕೇಂದ್ರದ ಆರ್ಥಿಕ ಇಲಾಖೆ ನಿಗದಿ ಮಾಡುತ್ತದೆ ಎಂದು ತಿಳಿಸಿದರೂ ಸಹ ಪ್ರತಿಭಟನೆ ನಡೆಸಲಾಗುತ್ತಿದೆ. ಇದು ಪ್ರತಿಭಟನೆ ಅಲ್ಲ, ಚುನಾವಣಾ ಪ್ರಚಾರ ಎಂದು ಆರೋಪಿಸಿದರು.
ಶ್ವೇತ ಪತ್ರಕ್ಕೆ ಆಗ್ರಹ: ಅಧಿಕೃತವಾಗಿ ಒಂದು ಶ್ಬೇತ ಪತ್ರ ಹೊರಡಿಸಿ, ಇದರಲ್ಲಿ ಯುಪಿಎ ಹಾಗೂ ಎನ್ಡಿಎ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಸೇರಿಸಿ, ಜನರ ಮುಂದೆ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು. ನಿಮ್ಮ ಸರ್ಕಾರ ದಿವಾಳಿಯಾಗಿದೆ. ನಿಮ್ಮಬಳಿ ಹಣ ಇಲ್ಲ. ಇದರಿಂದ ನೀವು ದೆಹಲಿಗೆ ಹೋಗಿ ಪ್ರತಿಭಟನೆ ನಡೆಸುತ್ತಿರುವುದು. ದೇಶದಲ್ಲಿಯೇ ರಾಜ್ಯ ತಲೆಬಾಗುವಂತೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ದೆಹಲಿಗೆ ಹೋಗಿ ಪ್ರತಿಭಟನೆ ನಡೆಸುತ್ತಿರುವುದನ್ನು ಕೇರಳ ಕಾಂಗ್ರೆಸ್ ಕೂಡ ಖಂಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಈಶ್ವರಪ್ಪ ಹೇಳಿದ್ರು.
ಚುನಾವಣೆ ನಂತರ ಸರ್ಕಾರ ಅಧಿಕಾರದಲ್ಲಿರಲ್ಲ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 28 ಸೀಟುಗಳನ್ನು ಗೆಲ್ಲುತ್ತದೆ. ಚುನಾವಣೆ ನಂತರ ರಾಜ್ಯ ಸರ್ಕಾರ ಅಧಿಕಾರದಲ್ಲಿ ಇರಲ್ಲ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: 'ಇದು ರಾಜಕೀಯ ಚಳವಳಿ ಅಲ್ಲ, ಕರ್ನಾಟಕದ ಹಾಗೂ ಕನ್ನಡಿಗರ ಹಿತ ಕಾಯುವ ಚಳವಳಿ' : ಸಿಎಂ ಸಿದ್ದರಾಮಯ್ಯ