ಶಿವಮೊಗ್ಗ: ಪುತ್ರ ಕೆ. ಈ. ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಟಿಕೆಟ್ ತಪ್ಪಿದ ಬಳಿಕ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಬಂಡಾಯವೆದ್ದು ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಬಹಿರಂಗ ಹೇಳಿಕೆಗಳ ಮೂಲಕ ನೇರವಾಗಿಯೇ ಅಖಾಡಕ್ಕಿಳಿದಿದ್ದಾರೆ. ಗೆಲ್ಲುವ ವಿಶ್ವಾಸದಲ್ಲಿ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರವನ್ನೂ ಆರಂಭಿಸಿದ್ದಾರೆ.
ಈಶ್ವರಪ್ಪ ನಡೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಲ್ಲಿದ್ದು, ಬಿಜೆಪಿಗೆ ಮುಜುಗರ ಉಂಟುಮಾಡಿದೆ. ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿಯುವ ತನಕ ಸುಮ್ಮನಿದ್ದ ರಾಜ್ಯ ಬಿಜೆಪಿ ಘಟಕವು ಸೋಮವಾರ ಈಶ್ವರಪ್ಪರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಈ ಮೂಲಕ 40 ವರ್ಷಗಳ ಕಾಲ ಪಕ್ಷದಲ್ಲಿದ್ದ ಈಶ್ವರಪ್ಪ ಈಗ ಉಚ್ಚಾಟನೆಗೊಂಡಿದ್ದಾರೆ.
ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ ವೈ ರಾಘವೇಂದ್ರ ಮತ್ತು ಕಾಂಗ್ರೆಸ್ನಿಂದ ಗೀತಾ ಶಿವರಾಜ್ಕುಮಾರ್ ಸ್ಪರ್ಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ಕಣದಲ್ಲಿರುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗಿದೆ. ಇನ್ನು, ರಾಘವೇಂದ್ರ ಅವರನ್ನು ಸೋಲಿಸಲೇಬೇಕೆಂಬ ಹಠದಲ್ಲಿ ಈಶ್ವರಪ್ಪ ಪ್ರಚಾರಕ್ಕಿಳಿದಿದ್ದಾರೆ.
ಬಿಜೆಪಿ ಹೈಕಮಾಂಡ್ ಆದೇಶದಂತೆ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭೆ ಕ್ಷೇತ್ರವನ್ನು ಈಶ್ವರಪ್ಪ ಬಿಟ್ಟುಕೊಟ್ಟು, ಪಕ್ಷದ ಮಾತನ್ನು ಪಾಲಿಸಿದ್ದರು. ಆದರೆ ಈ ಬಾರಿ ಬಿಜೆಪಿ ವಿರುದ್ಧವೇ ಸ್ಪರ್ಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಈಶ್ವರಪ್ಪ ಗೆಲುವಿನ ಲೆಕ್ಕಾಚಾರ; ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ 17,29,901 ಮತದಾರರಿದ್ದಾರೆ. ಈ ಪೈಕಿ 50 ರಷ್ಟು ಮತದಾರರು ಓಬಿಸಿಗೆ ಸೇರಿದವರಾಗಿದ್ದಾರೆ. ಈಶ್ವರಪ್ಪ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಓಬಿಸಿ ಮತಗಳು ತಮಗೆ ಬರುತ್ತವೆ ಎಂಬ ನಿರೀಕ್ಷೆ ಈಶ್ವರಪ್ಪನವರದ್ದಾಗಿದೆ.
ಕಾರ್ಯಕರ್ತರಿಂದಲೂ ಬೆಂಬಲದ ವಿಶ್ವಾಸ: ಪಕ್ಷದಲ್ಲಿ ಸ್ಥಾನಮಾನ ಸಿಗದಿರುವ ಕಾರಣ ಹಲವಾರು ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಅವರೆಲ್ಲ ತಮ್ಮ ಪರವಾಗಿದ್ದಾರೆ ಎಂಬುದು ಈಶ್ವರಪ್ಪನವರ ಮಾತು.
ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು: ಈಶ್ವರಪ್ಪನವರು ಕಳೆದ 10 ವರ್ಷಗಳಿಂದ ಮಾರಿಕಾಂಬ ಸ್ವ-ಸಹಾಯ ಸಂಘವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಗೆ ಮಾರಿಕಾಂಬ ಫೈನಾನ್ಸ್ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿನ ಮಹಿಳೆಯರು ತಮಗೆ ಬೆಂಬಲ ನೀಡುವ ವಿಶ್ವಾಸದಲ್ಲಿದ್ದಾರೆ. ಯುವ ಶಕ್ತಿ, ನಾರಿ ಶಕ್ತಿ ಹಾಗೂ ರೈತ ಶಕ್ತಿ ನನ್ನ ಜೊತೆ ಇದೆ. ಇದರಿಂದಲೇ ತಾವು ಧೈರ್ಯದಿಂದ ಚುನಾವಣೆ ಎದುರಿಸುತ್ತಿರುವುದಾಗಿ ಈಶ್ವರಪ್ಪ ಹೇಳಿಕೊಂಡಿದ್ದಾರೆ.
ಕಬ್ಬು ಇರುವ ರೈತನ ಚಿಹ್ನೆ: ಕಬ್ಬಿನೊಂದಿಗೆ ರೈತ ಇರುವ ಚಿಹ್ನೆ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪನವರಿಗೆ ಬಂದಿದೆ. ಕಳೆದ 40 ವರ್ಷಗಳಿಂದ ಕಮಲದ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದ ಈಶ್ವರಪ್ಪನವರು ಈಗ ಹೊಸ ಚಿಹ್ನೆಯೊಂದಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ರೈತನ ಚಿಹ್ನೆ ಬಂದಿರುವುದಕ್ಕೆ ಅವರು ಸಂತಸಗೊಂಡಿದ್ದಾರೆ.
ಬಿಜೆಪಿಯ ಪ್ರತಿತಂತ್ರ: ಹಾಲಿ ಸಂಸದ ರಾಘವೇಂದ್ರಗೆ ಕೆ.ಎಸ್.ಈಶ್ವರಪ್ಪ ನೇರ ಸವಾಲಾಗಿದ್ದಾರೆ. ಬಿಜೆಪಿ ಮತಗಳನ್ನು ಈಶ್ವರಪ್ಪ ಸೆಳೆಯುವುದರಿಂದ ಕಮಲ ಪಡೆ ತಮ್ಮದೇ ಆದ ಪ್ರತಿತಂತ್ರ ಹೆಣೆದಿದೆ. ಈಶ್ವರಪ್ಪನವರ ಜೊತೆ ಇದ್ದ ಬಿಜೆಪಿಯ ಪಾಲಿಕೆಯ ಮಾಜಿ ಸದಸ್ಯರು ಸೇರಿದಂತೆ ವಿವಿಧ ಜವಾಬ್ದಾರಿ ಹೊಂದಿದ ಕೆಲವರಿಗೆ ಸ್ಥಾನಮಾನದ ಭರವಸೆ ನೀಡಿ ಪಕ್ಷದ ಕೆಲಸದಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ. ಆದರೂ ಸಹ ಬಿಜೆಪಿಯ ಕೆಲ ಪಾಲಿಕೆಯ ಮಾಜಿ ಸದಸ್ಯರಾದ ವಿಶ್ವಾಸ್, ಶಂಕರ್ ಗನ್ನಿ, ಆರತಿ ಪ್ರಕಾಶ್, ಲತಾ ಗಣೇಶ್, ಲಕ್ಷ್ಮೀ ಸೇರಿದಂತೆ ಕೆಲವರು ಈಶ್ವರಪ್ಪ ಜೊತೆ ನಿಂತಿದ್ದಾರೆ.
ಈಶ್ವರಪ್ಪ ಹಿಂದಿನಿಂದಲೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಜಿಲ್ಲೆಯ ಪ್ರವಾಸ ಮಾಡಿದ್ದು ಬಿಟ್ಟರೆ, ಬೇರೆ ಸಮಯದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಸಂಪರ್ಕ ಕಡಿಮೆ. ಇದೀಗ ಚುನಾವಣೆಗೆ ಸ್ಪರ್ಧಿಸಿರುವುದರಿಂದ ಇಡೀ ಶಿವಮೊಗ್ಗವನ್ನು ಸುತ್ತುತ್ತಿದ್ದಾರೆ.
ಮೋದಿ ಕೈಬಲಪಡಿಸಲು ಸ್ಪರ್ಧೆ; ಮತ್ತೊಂದೆಡೆ ಈಶ್ವರಪ್ಪ ತಾವು ಗೆದ್ದು ಪ್ರಧಾನಿ ಮೋದಿ ಅವರ ಕೈ ಬಲಪಡಿಸುವುದಾಗಿ ಹೇಳುತ್ತಿದ್ದಾರೆ. ಈ ಮೂಲಕ ಸಾಂಪ್ರದಾಯಿಕ ಮತಗಳು ಕೂಡ ತಮ್ಮ ಪರವಾಗಿರಲಿವೆ ಎಂಬುದು ಈಶ್ವರಪ್ಪ ಅವರ ವಿಶ್ವಾಸವಾಗಿದೆ.
ಬಿಜೆಪಿ ಕಾಂಗ್ರೆಸ್ ನಡುವಿನ ಸ್ಪರ್ಧೆಯಾಗಿದ್ದ ಶಿವಮೊಗ್ಗ ಅಖಾಡ ಈಶ್ವರಪ್ಪ ಅವರಿಂದಾಗಿ ಕಾವು ಪಡೆದುಕೊಂಡಿದೆ. ಜೂನ್ 4ರ ಫಲಿತಾಂಶದಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.