ಶಿವಮೊಗ್ಗ: ಸ್ವಾಮೀಜಿಗಳಿಗೆ ನಾನು ನೋವುಂಟು ಮಾಡಿದ್ದೇನೆ ಎಂದು ಈಶ್ವರಪ್ಪ ಅವರು ಚಂದ್ರಗುತ್ತಿ ದೇವಾಲಯದಲ್ಲಿ ಗಂಟೆ ಬಾರಿಸಬೇಕೆಂದು ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಹಾಕಿದ ಸವಾಲನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸ್ವೀಕಾರ ಮಾಡಿದ್ದಾರೆ.
ಇಂದು ಈಶ್ವರಪ್ಪ ಚುನಾವಣೆ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಇದುವರೆಗೆ ದೇವರ ಬಳಿ ಗಂಟೆ ಬಾರಿಸುವುದು, ದೀಪ ಹಚ್ಚುವುದನ್ನು ಇಂತಹ ವಿಚಾರದಲ್ಲಿ ನಾನು ಮಾಡಿಲ್ಲ. ಬಿ ವೈ ರಾಘವೇಂದ್ರ ಹಾಗೂ ಅವರ ಅಪ್ಪನಿಗೆ ಸುಳ್ಳು ಹೇಳುವುದೇ ಕೆಲಸವಾಗಿದೆ. ನಾನು ಕಾಂತೇಶನಿಗೆ ಟಿಕೆಟ್ ಕೊಡಿಸುವುದಾಗಿ ಯಡಿಯೂರಪ್ಪ ಹೇಳಿಲ್ವಾ ಎಂಬುದರ ಬಗ್ಗೆ ಅವರು ಬಂದು ಗಂಟೆ ಹೊಡೆಯುತ್ತಾರಾ ಎಂದು ಪ್ರಶ್ನಿಸಿದರು.
ಸ್ವಾಮೀಜಿಗಳಿಗೆ ರಾಘವೇಂದ್ರ ಹಾಗೂ ಅವರ ಬೆಂಬಲಿಗರು ನೋವುಂಟು ಮಾಡಿದ್ದಾರೆ. ಬಿ ವೈ ರಾಘವೇಂದ್ರ ಅವರು ಗಂಟೆ ಬಾರಿಸಲು ಸಿದ್ದ ಎಂದಿದ್ದಾರೆ. ನನಗೆ ಈ ರೀತಿಯಲ್ಲಿ ಗಂಟೆ ಬಾರಿಸುವ ಕುರಿತು ನಂಬಿಕೆ ಇಲ್ಲ. ಆದರೂ ಸಹ ನಾನು ಗಂಟೆ ಬಾರಿಸಲು ಬರುತ್ತೇನೆ. ರಾಘವೇಂದ್ರ ಹಾಗೂ ಆತನ ಕಡೆಯವರು ಸ್ವಾಮೀಜಿಗಳಿಗೆ ನೋವುಂಟು ಮಾಡಿಲ್ಲ ಎಂದು ಗಂಟೆ ಬಾರಿಸಬೇಕು ಎಂದು ಪ್ರತಿ ಸವಾಲು ಹಾಕಿದರು.
ನಾನು ಗಂಟೆ ಬಾರಿಸಲು ಹೋಗದೇ ಇದ್ರು ನಾನು ಹೇಳಿದ್ದು ಸುಳ್ಳು ಎಂದು ಭಾವಿಸುತ್ತಾರೆ. ಇದರಿಂದ ನಾನು ಗಂಟೆ ಬಾರಿಸಲು ಸಿದ್ದ. ಚಂದ್ರಗುತ್ತಿ ಅಲ್ಲ ಅಯೋಧ್ಯೆಗೂ ಹೋಗಿ ಗಂಟೆ ಬಾರಿಸಲು ಸಿದ್ದ. ಗಂಟೆ ಬಾರಿಸುವ ವಿಚಾರವನ್ನು ಅವರು ಮರೆತರೆ ನಾನು ಮರೆಯಲು ಸಿದ್ದ ಎಂದು ಹೇಳಿದರು.
ಚಂದ್ರಪ್ಪನ ಮಗನಿಗೂ ಯಡಿಯೂರಪ್ಪ ಮೋಸ: ಯಡಿಯೂರಪ್ಪ ನನಗೆ ಮಾತ್ರವಲ್ಲ ಹೊಳಲ್ಕರೆ ಚಂದ್ರಪ್ಪನ ಮಗನಿಗೂ ಮೋಸ ಮಾಡಿದ್ದಾರೆ. ಯಡಿಯೂರಪ್ಪ ನನಗೆ ಅಷ್ಟೇ ಅಲ್ಲ ಎಲ್ಲರಿಗೂ ಸುಳ್ಳು ಹೇಳುತ್ತಿದ್ದಾರೆ ಎಂದರು.
ಶಿವಮೊಗ್ಗ ಪಾಲಿಕೆ ಟಿಕೆಟ್ ನೀಡುವುದು ನಾನೇ: ಮುಂದಿನ ಚುನಾವಣೆಯಲ್ಲಿ ನಾನೇ ಟಿಕೆಟ್ ನೀಡುವುದು ಅಪ್ಪ ಮಕ್ಕಳಂತೆ ನಿನಗೆ ಟಿಕೆಟ್ ಎಂದು ಕಾರ್ಪೋರೇಟರ್ಗಳಿಗೆ ಸುಳ್ಳಿನ ಭರವಸೆ ನೀಡುತ್ತಿದ್ದಾರೆ. ಒಂದು ವಾರ್ಡ್ನಲ್ಲಿ ನಾಲ್ಕು ಜನರಿಗೆ ಆಶ್ವಾಸನೆ ನೀಡುತ್ತಿದ್ದಾರೆ. ಈ ಮೂಲಕ ನನ್ನ ಜೊತೆ ಇರುವವರನ್ನು ಅವರ ಜೊತೆ ಇರುವಂತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಫೋಟೋ ಬಳಕೆ ವಿಚಾರ: ಶಾಸಕ ಚನ್ನಬಸಪ್ಪ (ಚನ್ನಿ) ನಮ್ಮ ಹುಡುಗ ಅವನು ನನಗೆ ಪ್ರಶ್ನೆ ಕೇಳುವಷ್ಟು ದೊಡ್ಡವ್ಯಕ್ತಿ ಆಗಿದ್ದು ಸಂತೋಷ. ಕೂಪ ಮಂಡೂಕಗಳು ಹೀಗೆ ಮಾತನಾಡುತ್ತಿದ್ದಾರೆ. ಗೆಲ್ಲುವುದು ನಾನೇ, ನಾನು ಮತ್ತೆ ಅದೇ ಪಾರ್ಟಿಯಲ್ಲಿ ಇದ್ದೇನೆ. ಮುಂದೆ ತೆಗೆದು ಹಾಕಬಹುದೇನೂ. ನಾನು ಗೆಲ್ಲುವುದು ಮೋದಿ, ಅಮಿತ್ ಶಾಗೂ ಬೇಕಿದೆಯೋ ಏನೋ ಎಂದು ಹೇಳಿದರು.
ಮೋದಿ, ಅಮಿತ್ ಶಾ ಅವರು ಹೇಳಿದ್ರೆ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ರಾಘವೇಂದ್ರ ಹೇಳುತ್ತಿದ್ದಾರೆ. ನೊಂದ ಕಾರ್ಯಕರ್ತರ ಪರವಾಗಿ ನಾನು ಗೆದ್ದು ಬರುವುದು ಮೋದಿ, ಅಮಿತ್ ಶಾಗೂ ಬೇಕಾಗಿದೆಯೇ ಏನೂ ಎಂದರು. ನಾನು ಗೆಲ್ಲಬೇಕು ಎಂದು ಎಲ್ಲರೂ ಬಯಸುತ್ತಿದ್ದಾರೆ. ದಲಿತರು, ಮುಸ್ಲಿಮರು ನಾನು ಗೆಲ್ಲಬೇಕು ಎಂದು ಬಯಸುತ್ತಿದ್ದಾರೆ. ಇವತ್ತಿನ ತನಕ ಯಾರೂ ಸಹ ನನಗೆ ಪೋನ್ ಮಾಡಿಲ್ಲ ಎಂದರು.
ಯಡಿಯೂರಪ್ಪ ನನಗ ಮೋಸ ಮಾಡಿ, ಯಾವ ಮುಖ ಇಟ್ಟುಕೊಂಡು ಬರುತ್ತಾರೆ. ಹಠ ಹಿಡಿದುಕೊಂಡು ಶೋಭಾಗೆ ಟಿಕೆಟ್ ಕೊಡಿಸುತ್ತಾರೆ. ಅದೇ ರೀತಿ ಹಠ ಹಿಡಿದುಕೊಂಡು ಕಾಂತೇಶ್ಗೆ ಟಿಕೆಟ್ ಕೊಡಿಸಬೇಕಿತ್ತು. ನನಗೂ ಶೆಟ್ಟರ್ ಇಬ್ಬರಿಗೂ ಚುನಾವಣೆಯಲ್ಲಿ ನಿಲ್ಲಬೇಡಿ. ನಾನು ಅವರು ಹೇಳಿದಂತೆ ಕೇಳಿದೆ, ಶೆಟ್ಟರ್ ಪಕ್ಷ ಬಿಟ್ಟು ಹೋಗಿದ್ರು, ಅದೇ ಯಡಿಯೂರಪ್ಪ ಶೆಟ್ಟರ್ ಅವರನ್ನ ಮತ್ತೆ ಪಕ್ಷಕ್ಕೆ ಕರೆ ತಂದಿದ್ದಾರೆ ಎಂದರು.
ಯಡಿಯೂರಪ್ಪ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ಸಾರೆ. ಅವರ ಮಗ ಗೆಲ್ಲಲು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಶಿಕಾರಿಪುರದಲ್ಲಿ 60 ಸಾವಿರ ಮತಗಳಿಂದ 12 ಸಾವಿರ ಮತಗಳಿಗೆ ಇಳಿಸಿದ್ದಾರೆ. ಮುಂದೆ ಎಷ್ಟಾದರೂ ಹಣ ಸುರಿಯಲಿ, ಆಗ ಎಷ್ಟು ಮತ ಬರುತ್ತದೆ ಎಂದು ನೋಡೋಣ. ಹಿಂದೆ ಅನೇಕ ಹಿರಿಯರು, ಮುಖಂಡರು ಹೇಳಿದಾಗ ನಾನು ಅವರ ಮಾತನ್ನು ಕೇಳಲಿಲ್ಲ. ಈಗ ಅವರ ಮಾತು ನನಗೆ ಸತ್ಯ ಎನ್ನುವುದು ಗೊತ್ತಾಗುತ್ತಿದೆ ಎಂದು ಹೇಳಿದರು.
ಜನ ಅಭಿವೃದ್ದಿಗೆ ಮತ ಹಾಕುತ್ತಾರೆ, ಅದೇ ರೀತಿ ಯಡಿಯೂರಪ್ಪ ಮೋಸದ ಬಗ್ಗೆ ತಿಳಿದು ಮತ ಹಾಕಿ ನನಗೆ ಗೆಲ್ಲಿಸುತ್ತಾರೆ. ಈ ಚುನಾವಣೆಯಲ್ಲಿ ಜನ ಧರ್ಮಕ್ಕೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ. ಅತಿ ಹೆಚ್ಚು ಬಿಜೆಪಿ ಕಾರ್ಯಕರ್ತರು, ಸಂಘ ಪರಿವಾರದವರು ನನ್ನ ಜೊತೆಗೆ ಇದ್ದಾರೆ. ನಾನು ಇಬ್ಬರಕ್ಕಿಂತ ಚುನಾವಣೆಯಲ್ಲಿ ಬಹಳ ಮುಂದೆ ಇದ್ದೇನೆ. ಬೇಡವಾದ ಚರ್ಚೆಗಳಿಗೆ ನಾನು ಉತ್ತರ ನೀಡಲ್ಲ. ಆಯನೂರು ಮಂಜುನಾಥ ಪ್ರಶ್ನೆಗೂ ಉತ್ತರ ನೀಡಲ್ಲ ಎಂದರು.
ನನಗೆ ಅಖಿಲೇಶ್ ಯಾದವ್ ಪೋನ್ ಮಾಡಿದ್ರು: ನನಗೆ ಅಖಿಲೇಶ್ ಯಾದವ್ ನನಗೆ ಪೋನ್ ಮಾಡಿದ್ರು, ಆಗ ನಾನು ಪೋನ್ ರಿಸೀವ್ ಮಾಡಲಿಲ್ಲ. ಮೇಸೆಜ್ ಹಾಕಿದ್ರು ಅದಕ್ಕೂ ನಾನು ಉತ್ತರ ನೀಡಿಲ್ಲ. ಹಿಂದೂ ಸಂಘಟನೆಯವರು ಟಿಕೆಟ್ ನೀಡುವುದಾಗಿ ಹೇಳಿದ್ರು ನಾನು ಯಾವುದೇ ಪಕ್ಷಕ್ಕೂ ಹೋಗಲ್ಲ. ದೆಹಲಿಯಿಂದ ಕುಮಾರಸ್ವಾಮಿ ಪೋನ್ ಮಾಡಿದ್ರು , ನಿಮ್ಮ ಆಸೆಯಂತೆ ಎನ್ಡಿಎ ಸೇರುವೆ ಎಂದು ಪೋನ್ ಮಾಡಿದ್ರು ಎಂದರು.
ನಿರೀಕ್ಷೆ ಮೀರಿ ಜನ ಬೆಂಬಲ: ನಿರೀಕ್ಷೆಗೂ ಮೀರಿ ಜನ ನನಗೆ ಬೆಂಬಲ ನೀಡುತ್ತಿದ್ದಾರೆ. ರಾಘವೇಂದ್ರ ಲಿಂಗಾಯತರು ನನಗೆ ಬೆಂಬಲ ನೀಡ್ತಾರೆ ಅಂತ ಹೇಳುತ್ತಿದ್ದಾರೆ. ಸಹೋದರಿ ಗೀತಾ ಶಿವರಾಜ್ ಕುಮಾರ್ ಈಡಿಗರು ನನ್ನ ಬೆಂಬಲ ಎನ್ನುತ್ತಿದ್ದಾರೆ. ಆದರೆ ಈಡಿಗರು ಸಹ ನನಗೆ ಬೆಂಬಲ ನೀಡುತ್ತಿದ್ದಾರೆ. ಈಡಿಗರು, ಲಿಂಗಾಯತರು ಅಲ್ಲದೇ ಎಲ್ಲ ಸಮಾಜದವರು ನನಗೆ ಬಂಬಲ ನೀಡುತ್ತಿದ್ದಾರೆ. ಎಲ್ಲರಿಗೂ ಸಮಯಕ್ಕೆ ಸಿಗುವ ವ್ಯಕ್ತಿ ನೀವು, ಹಿಂದೂ ಹುಲಿಯನ್ನು ಕಳೆದುಕೊಳ್ಳಲು ಆಗಲ್ಲ ಎನ್ನುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾನು ಚುನಾವಣೆಗೆ ನಿಲ್ಲುವುದು ಸತ್ಯ: ನಾಳೆ ಬೈಂದೂರು, 5 ರಂದು ತೀರ್ಥಹಳ್ಳಿ ಅಂಬು ತೀರ್ಥದಲ್ಲಿ ಸಭೆ ನಡೆಸಲಾಗುತ್ತಿದೆ. ಹೋದ ಕಡೆ ನೀವು ನಿಲ್ಲುತ್ತೀರಿ ಎಂದು ಕೇಳುತ್ತಿದ್ದಾರೆ. ನಾನು ಚುನಾವಣೆಗೆ ನಿಂತೆ ನಿಲ್ಲುತ್ತೇನೆ. ದಾನವಾಡಿಯ ರಂಗನಾಥ ಸ್ವಾಮಿಯ ದೇವಾಲಯಕ್ಕೆ ಹೋಗಿ ಪ್ರಸಾದ ಕೇಳಲು ಹೋದೆ, ಎರಡು ನಿಮಿಷ ಕುಳಿತುಕೊಂಡೆ, ನಾನು ಚುನಾವಣೆಗೆ ನಿಲ್ಲುವುದು ಸತ್ಯ ಎಂದಾಗ ದೇವರ ಪ್ರಸಾದ ಆಯ್ತು ಇದು ವಿಶೇಷವಾಗಿದೆ. ನಾನು ಚುನಾವಣೆಗೆ ನಿಲ್ಲುವುದು ಸತ್ಯ, ಗೆಲ್ಲುವುದು ಸತ್ಯ ಎಂದರು.