ಬೆಂಗಳೂರು: ಕರ್ನಾಟಕದ ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಗೆ ಮಳೆ ನೀರು ಒದಗಿಸಿ ಕೃಷಿ ಉತ್ಪಾದನೆ ಹೆಚ್ಚಿಸಲು 2023-24ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ (2014ರ ಅವಿಭಜಿತ ತಾಲೂಕುಗಳು) ಕೃಷಿ ಭಾಗ್ಯ ಯೋಜನೆ ಮರು ಜಾರಿಗೊಳಿಸಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ವಿಧಾನಸಭೆಯಲ್ಲಿ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಮಳೆಯಾಶ್ರಿತ ಕೃಷಿ ನೀತಿ, 2014 ರನ್ವಯ 100 ಕೋಟಿ ರೂ. ಅನುದಾನದಲ್ಲಿ ಈ ಯೋಜನೆಯನ್ನು 2023-24ನೇ ಸಾಲಿನಲ್ಲಿ ಪ್ಯಾಕೇಜ್ ಮಾದರಿಯಲ್ಲಿ (ಕ್ಷೇತ್ರ ಬದು, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ತಂತಿಬೇಲಿ, ಪಂಪ್ ಸೆಟ್, ಸೂಕ್ಷ್ಮ ನೀರಾವರಿ ಘಟಕಗಳು) ಮಾರ್ಗಸೂಚಿ ಹಾಗೂ ಕ್ರಿಯಾ ಯೋಜನೆಯನ್ವಯ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಸಿಗರೇಟು ಸೇದುವ ವಯೋಮಿತಿ 21ಕ್ಕೆ ಹೆಚ್ಚಿಸುವ ವಿಧೇಯಕ ಅಂಗೀಕಾರ: ನಿಯಮ ಮೀರಿದ್ರೆ 1000 ರೂ. ದಂಡ
ಮುಂಗಾರು 2023ನೇ ಸಾಲಿನ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳು ಸೇರ್ಪಡೆಯಾಗಿವೆ. ಆದರೂ ಸಹ 2023-24ನೇ ಸಾಲನಲ್ಲಿ ರಾಜ್ಯ ಮಳೆಯಾಶ್ರಿತ ಕೃಷಿ ನೀತಿ, 2014ರನ್ವಯ ಕೃಷಿ ಭಾಗ್ಯ ಯೋಜನೆ ರಾಜ್ಯದ ಒಣ ಕೃಷಿ ಹವಾಮಾನ ವಲಯಗಳಲ್ಲಿ ಇರುವ ತಾಲೂಕುಗಳಲ್ಲಿ ಮಾತ್ರ ಅನುಷ್ಠಾನ ಮಾಡಲಾಗುತ್ತಿದೆ. ಇದರಿಂದಾಗಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕುಗಳು ಒಣ ಕೃಷಿ ಹವಾಮಾನ ವಲಯದಲ್ಲಿ ಇಲ್ಲದಿರುವ ಕಾರಣ ಸೇರ್ಪಡೆ ಮಾಡಲಾಗಿಲ್ಲ ಎಂದರು.
2023-24ನೇ ಸಾಲಿನ ಆಯವ್ಯಯದಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸಲಾಗಿದ್ದು, ರಾಜ್ಯದ ಮಳೆಯಾಶ್ರಿತ ಕೃಷಿ ನೀತಿ, 2014ರನ್ವಯ ರಾಜ್ಯದ 24 ಜಿಲ್ಲೆ 106 ತಾಲೂಕುಗಳಲ್ಲಿ (2014ರ ಅವಿಭಜಿತ ತಾಲೂಕು) ಅನುಷ್ಠಾನ ಮಾಡಲು ಮಾರ್ಗಸೂಚಿ ಹಾಗೂ ಕ್ರಿಯಾ ಯೋಜನೆಯನ್ನು ಈಗಾಗಲೇ ಜಿಲ್ಲೆಗಳಿಗೆ ನೀಡಲಾಗಿದ್ದು, ಅದರಂತೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಒಂದು ವರ್ಷಕ್ಕೆ ಪೊಲೀಸರ ವರ್ಗಾವಣೆ ತಡೆಗೆ ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ ಅಂಗೀಕಾರ
SCSPTSP ಶೇ.40ರಷ್ಟು ಹಣವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೇರವಾಗಿ ವೆಚ್ಚ ಮಾಡಲು ಪ್ರಸ್ತಾವನೆ: ಎಸ್‌ಸಿಪಿಟಿಎಸ್‌ಪಿಯಡಿ ನಿಗದಿಪಡಿಸಿರುವ 39,000 ಕೋಟಿಯಲ್ಲಿ ಶೇ.40ರಷ್ಟನ್ನು ಸಮಾಜ ಕಲ್ಯಾಣ ಇಲಾಖೆಯ ಏಕಗವಾಕ್ಷಿ ಮೂಲಕ ನೇರವಾಗಿ ವೆಚ್ಚ ಮಾಡಲು ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ರೂಪಕಲಾ ಎಂ. ಅವರ ಪ್ರಶ್ನೆಗೆ ಬುಧವಾರ ಉತ್ತರಿಸಿದ ಸಚಿವರು, ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಶೇ.60ರಷ್ಟನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗುತ್ತೆ. ಶೇ.40ರಷ್ಟನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೇರವಾಗಿ ವೆಚ್ಚ ಮಾಡಲು ಅನುಮತಿ ಕೋರಿ ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಅನುಮತಿ ಸಿಕ್ಕರೆ, ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಏಕಗವಾಕ್ಷಿ ಮೂಲಕ ಅನುಷ್ಠಾನಕ್ಕೆ ತರುತ್ತೇವೆ. ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ 39,000 ಕೋಟಿ ರೂ. ಒದಗಿಸಿರಬಹುದು. ಆದರೆ, ಈ ಮೊತ್ತ 36 ಇಲಾಖೆಗಳಿಗೆ ಹಂಚಿಕೆಯಾಗುತ್ತದೆ. ನೇರವಾಗಿ ಪರಿಶಿಷ್ಟರ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು 2019–20 ಮತ್ತು 2020–21ನೇ ಸಾಲಿನಲ್ಲಿ ಆಯ್ಕೆ ಮಾಡಿದ್ದ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ. ನಂತರ ಆಯ್ಕೆಯಾದ ಫಲಾನುಭವಿಗಳ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ ಎಂದು ರೂಪಕಲಾ ಅಸಮಾಧಾನ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆಯಲ್ಲಿನ ಲೋಪಗಳ ಕಾರಣದಿಂದ ವಿಳಂಬವಾಗಿದೆ. ಈಗ ಅದೇ ಗುತ್ತಿಗೆದಾರರು ಕೆಲಸ ಮುಂದುವರಿಸಲು ಹೈಕೋರ್ಟ್ ಆದೇಶಿಸಿದೆ. ಶೀಘ್ರದಲ್ಲಿ ಎಲ್ಲ ಫಲಾನುಭವಿಗಳ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.