ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಮಳೆ ನೀರು ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಆವರಣದೊಳಗೆ ನುಗ್ಗಿದ ಪರಿಣಾಮ ಇಂದು ನಡೆಯಬೇಕಿದ್ದ ಏಷ್ಯನ್ ನೆಟ್‌ಬಾಲ್ ಮಹಿಳಾ ಚಾಂಪಿಯನ್‌ಶಿಪ್‌ನ ಎರಡು ಪಂದ್ಯಗಳನ್ನ ಮುಂದೂಡಲಾಗಿದೆ.
ಕ್ರೀಡಾಂಗಣದ ಆವರಣದೊಳಗೆ ನೀರು ತುಂಬಿಕೊಂಡಿರುವುದರಿಂದ ಆಟಗಾರರು, ತೀರ್ಪುಗಾರರು, ತರಬೇತುದಾರರು ಸೂಕ್ತ ಸಮಯಕ್ಕೆ ತಲುಪುವುದೇ ದುಸ್ತರವಾಗಿದೆ. ಇದರಿಂದಾಗಿ ಚೈನೀಸ್ ತೈಪೆ - ಇರಾಕ್ ಹಾಗೂ ಫಿಲಿಪೈನ್ಸ್ - ಜಪಾನ್ ನಡುವಿನ ನಡೆಯಬೇಕಿದ್ದ ಇಂದಿನ ಮೊದಲ ಎರಡು ಪಂದ್ಯಗಳನ್ನು ಅಕ್ಟೋಬರ್ 24ಕ್ಕೆ ಮುಂದೂಡಲಾಗಿದೆ ಎಂಬ ಮಾಹಿತಿಯನ್ನು ಆಯೋಜಕರು ನೀಡಿದ್ದಾರೆ.
ಅಕ್ಟೋಬರ್ 18ರಿಂದ ಆರಂಭಗೊಂಡಿರುವ 13ನೇ ಏಷ್ಯನ್ ನೆಟ್‌ಬಾಲ್ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಭಾರತದ, ಮಾಲ್ಡೀವ್ಸ್, ಸೌದಿ ಅರೇಬಿಯಾ, ಶ್ರೀಲಂಕಾ, ಮಲೇಷ್ಯಾ, ಸಿಂಗಪುರ್, ಬ್ರುನೈ, ಇರಾಕ್ ಸೇರಿದಂತೆ 14 ತಂಡಗಳು ಪಾಲ್ಗೊಂಡಿವೆ. ಪ್ರತಿ ಬಾರಿ ಮಳೆ ಬಂದಾಗಲೂ ಈ ಸಮಸ್ಯೆ ಸಾಮಾನ್ಯವಾಗಿದ್ದು, ಕ್ರೀಡಾಕೂಟದ ಸಂದರ್ಭದಲ್ಲಿಯೂ ಸೂಕ್ತ ಕ್ರಮಗಳನ್ನ ಕೈಗೊಳ್ಳದಿರುವುದು ಕ್ರೀಡಾಪಟುಗಳ ಬೇಸರಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮತ್ತೆ ವಾಯುಭಾರ ಕುಸಿತ: ಬೆಂಗಳೂರು ಸೇರಿ ರಾಜ್ಯದ 25 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ