ಕೊಪ್ಪಳ: ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಎರಡು ಕೊಲೆ ಹಾಗೂ ಒಂದು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು. ಗುರುವಾರ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಲಿವಿಂಗ್ ಟು ಗೆದರ್‌ನಲ್ಲಿದ್ದ ವ್ಯಕ್ತಿ ಕೊಲೆ: ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬಹದ್ದೂರ ಬಂಡಿ ಗ್ರಾಮದಲ್ಲಿ ಶ್ರೀನಾಥ ಖಾರ್ವಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏ.16ರಂದು ದೂರು ದಾಖಲಾಗಿತ್ತು. ಅಲ್ಲಿನ ಖಾಜಾಬನಿ ಎಂಬ ಮಹಿಳೆಯೊಂದಿಗೆ ಈ ವ್ಯಕ್ತಿ ಲಿವಿಂಗ್ ಟು ಗೆದರ್ ಸಂಬಂಧ ಹೊಂದಿದ್ದರು. ಅಲ್ಲದೇ ಬೇರೆ ಹೆಣ್ಣು ಮಕ್ಕಳೊಂದಿಗೂ ಸಂಪರ್ಕವಿತ್ತು. ಇದರಿಂದಾಗಿ ಹಲ್ಲೆಗೈದು ಕೊಂದಿರುವುದಾಗಿ ಖಾಜಾಬನಿ ಒಪ್ಪಿಕೊಂಡಿದ್ದಾಳೆ. ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪತಿಯನ್ನೇ ಕೊಂದ ಪತ್ನಿ: ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯ ವಟಪರವಿ ಗ್ರಾಮದಲ್ಲಿ ಡಿಸೆಂಬರ್ 6ರಂದು ನಡೆದಿದ್ದ ಪ್ರಭುರಾಜ ಎಂಬವರ ಕೊಲೆಗೆ ಸಂಬಂಧಿಸಿದಂತೆ ಆತನ ಪತ್ನಿ ಆರೋಪಿಯಾಗಿದ್ದು, ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಅಂಗಡಿ ಕಳ್ಳತನ ಪ್ರಕರಣ: ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏ.17ರಂದು ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಅದೇ ಗ್ರಾಮದ ನಾಗರಾಜ ದಿವಟರ ಹಾಗೂ ಬಸನಗೌಡ ತೋಟಗಂಟಿ ಬಂಧಿತರು. ಇವರಿಂದ 7.5 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಇದನ್ನೂಓದಿ: ಜೈ ಶ್ರೀರಾಮ್ ಘೋಷಣೆಗೆ ಆಕ್ಷೇಪಿಸಿ ಯುವಕರ ಮೇಲೆ ಹಲ್ಲೆ ಆರೋಪ: ನಾಲ್ವರ ಬಂಧನ - Assault Case