ಹುಬ್ಬಳ್ಳಿ: ಸಾಮಾನ್ಯವಾಗಿ ಮದುವೆಯಾದ ದಂಪತಿ ಮಕ್ಕಳಾಗಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಆದ್ರೆ, ಕೆಲವು ಕಾರಣದಿಂದ ಕೆಲ ದಂಪತಿಗಳಿಗೆ ಮಕ್ಕಳಾಗುವುದು ವಿಳಂಬ ಹಾಗೂ ಕನಸಾಗಿರುತ್ತದೆ. ಅಂತವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಬಂಜೆತನ ನಿವಾರಣಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇನ್ನು ಬಡ ಹಾಗೂ ಮಧ್ಯಮ ವರ್ಗದವರಿಗೆ ಇದು ಕಷ್ಟ ಸಾಧ್ಯವಾಗಿದೆ. ಇದಕ್ಕಾಗಿ ಕೆಎಂಸಿ ಆರ್ಐ ಬಂಜೆತನ ನಿವಾರಣೆಗೆ ಚಿಕಿತ್ಸೆ ನೀಡುವ ಮಹತ್ವ ಕಾರ್ಯಕ್ಕೆ ಕೈಹಾಕಿದೆ.
ಹುಬ್ಬಳ್ಳಿ ಕೆಎಂಸಿ ಆರ್ಐ ಈಗ ಮತ್ತೊಂದು ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿದ್ದು, ಮಕ್ಕಳಿಲ್ಲದ ದಂಪತಿಗೆ ಮಕ್ಕಳ ಭಾಗ್ಯ ಕರುಣಿಸುವ ಐವಿಎಫ್ (ಇನ್ ವಿಟ್ರೋ ಫರ್ಟಿಲೈಜೇಷನ್) ಕೇಂದ್ರವನ್ನು ಶೀಘ್ರವೇ ಆರಂಭಿಸಲಿದೆ. ಈ ಮೂಲಕ ರಾಜ್ಯದಲ್ಲಿಯೇ ಸರ್ಕಾರಿ ಸ್ವಾಮ್ಯದ ಮೊದಲ ಐವಿಎಫ್ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಖಾಸಗಿ ಐವಿಎಫ್ ಕೇಂದ್ರಗಳು 17 ಇವೆ ಎಂಬ ಅಂದಾಜಿದೆ. ಮಧ್ಯಮ ಹಾಗೂ ಮೇಲ್ವರ್ಗದವರು ಬಿಟ್ಟರೆ ಬಡವರು ಇತ್ತ ಧಾವಿಸುವುದು ಕಷ್ಟಸಾಧ್ಯ. ಇದನ್ನು ಮನಗಂಡಿರುವ ರಾಜ್ಯ ಸರ್ಕಾರವು ಕೆಎಂಸಿಆರ್‌ಐನಲ್ಲಿ ಐವಿಎಫ್ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಐವಿಎಫ್ ಕಾರ್ಯಾರಂಭ ಕುರಿತಂತೆ ಕೆಎಂಸಿ ಆರ್ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಈ ಕೇಂದ್ರ ಆರಂಭಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
''ಈಗಾಲೇ ಕೆಎಂಸಿ ಆರ್ಐನಲ್ಲಿ ಸ್ಥಳವನ್ನು ಗುರುತಿಸಿ ಸಿವಿಲ್ ಕಾಮಗಾರಿಗಾಗಿ ಟೆಂಡರ್ ಕೂಡ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಅ.11ರಂದು ಅಂತಿಮಗೊಳ್ಳಲಿದೆ. ಸಿವಿಲ್ ಕಾಮಗಾರಿಗೆ ಹಟ್ಟಿ ಗೋಲ್ಡ್ ಮೈನ್ಸ್ನಿಂದ 46.7 ಲಕ್ಷ ರೂ. ಸಿಎಸ್ಆರ್ ಫಂಡ್ ಅಡಿಯಲ್ಲಿ ಬಿಡುಗಡೆ ಮಾಡಿದೆ'' ಎಂದು ಮಾಹಿತಿ ನೀಡಿದರು.
''ಟೆಂಡರ್ ಪ್ರಕ್ರಿಯೆ ಅಂತಿಮಗೊಂಡ ಮರುದಿನವೇ ಕಾಮಗಾರಿ ಆರಂಭಿಸಲಾಗುತ್ತಿದೆ. ಐವಿಎಫ್ ಯಂತ್ರೋಪಕರಣ ಖರೀದಿಗಾಗಿ ಕಲಬುರಗಿ ಮಾನವಿಯ ಎನ್ಜಿಒ ಟ್ರಸ್ಟ್ 90 ಲಕ್ಷ ರೂಪಾಯಿ ಸಿಎಸ್ಆರ್ ನಿಧಿಯನ್ನು ಕೊಟ್ಟಿದೆ. ಐವಿಎಫ್ ಸೆಂಟರ್‌ಗೆ ಅಗತ್ಯವಾದ ಉಪಕರಣಗಳ ಖರೀದಿ ಕಾರ್ಯ ಕೂಡ ನಡೆಯುತ್ತಿದೆ'' ಎಂದು ತಿಳಿಸಿದರು.
''ಈ ಕೇಂದ್ರದ ಸಂಪೂರ್ಣ ನಿರ್ವಹಣೆಯನ್ನು ಕೆಎಂಸಿ ಆರ್ಐ ವಹಿಸಿಕೊಳ್ಳಲಿದೆ. ಸಂಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುವ ಪ್ರಥಮ ಘಟಕ ಇದಾಗಿದೆ. ಸರ್ಕಾರ ಸಿಎಸ್ಆರ್ ಅನುದಾನ ಬಳಸಿಕೊಳ್ಳಲು ಅನುಮತಿ ನೀಡಿದ್ದರಿಂದ ದಾನಿಗಳ ಸಹಾಯ ಪಡೆದುಕೊಂಡು ಈ ಕೇಂದ್ರ ಸ್ಥಾಪಿಸಲಾಗುತ್ತಿದೆ. ಕೆಎಂಸಿ ಆರ್ಐನಲ್ಲಿನ ವೈದ್ಯರನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಕೆಲ ವೈದ್ಯರು ತರಬೇತಿಯನ್ನು ಪಡೆದುಕೊಂಡು ಬಂದಿದ್ದಾರೆ. ಅದಕ್ಕೆ ಬೇಕಾದಂತ ಎಂಬ್ರಾಲಜಿಸ್ಟ್ ಅವರನ್ನು ಅನಾಟಮಿ ವಿಭಾಗದಿಂದ ಡೆಪ್ಟೆಷನ್ ಕಳುಹಿಸುವ ಚಿಂತನೆ ಇದೆ'' ಎಂದು ವಿವರಿಸಿದರು.
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಚಿಕಿತ್ಸೆ: ಖಾಸಗಿ ಐವಿಎಫ್ ಸೆಂಟರ್ಗಳಲ್ಲಿ ಲಕ್ಷಾಂತರ ಶುಲ್ಕ ವಿಧಿಸಲಾಗುತ್ತದೆ. ಆದ್ರೆ, ಇಲ್ಲಿ ಇನ್ನೆರಡು ತಿಂಗಳಲ್ಲಿ ಆರಂಭವಾಗುವ ಕೇಂದ್ರದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಔಷಧೋಪಚಾರ ಎಬಿಆರ್ಕೆಯಲ್ಲಿ ಅಡಿಯಲ್ಲಿ ಬರುತ್ತಿಲ್ಲ. ಹೀಗಾಗಿ ಚಿಕಿತ್ಸೆ ಪಡೆಯುವವರು ಹಣ ಕೊಟ್ಟು ಔಷಧಿ ಪಡೆಯಬೇಕಾಗುತ್ತದೆ. ಈ ಕುರಿತಂತೆ ಸರ್ಕಾರಕ್ಕೂ ಉಚಿತ ಔಷಧಿ ವಿತರಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಔಷಧಿಗಳನ್ನು ಉಚಿತ ಕೊಡಲು ಅನುಮತಿ ನೀಡಬೇಕು ಎಂದು ಕೋರಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶೇ. 14ರಿಂದ 15 ರಷ್ಟು ಇರುವ ಬಂಜೆತನ ನಿವಾರಣೆ ಆಗಲಿದೆ ಎಂಬ ಆಶಯವನ್ನು ಕೆಎಂಸಿ ಆರ್ಐ ನಿರ್ದೇಶಕರು ಹೊಂದಿದ್ದಾರೆ.
ಸಂತಾನಹೀನತೆಗೆ ಕಾರಣಗಳೇನು?: ತಡವಾಗಿ ಮದುವೆಯಾಗುವುದು, ಹಾರ್ಮೋನ್ ವ್ಯತ್ಯಾಸ, ಅಂಡಾಣು ಬೆಳವಣಿಗೆ ಕುಸಿತ ಸೇರಿ ಇತರ ಕಾರಣಗಳಿಂದ ಸಂತಾನಶಕ್ತಿ ಕುಗ್ಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ ವಯಸ್ಸಿಗೆ ಅನುಗುಣವಾಗಿ ಸಂತಾನಶಕ್ತಿ ಇಳಿಮುಖವಾಗುವ ಸಾಧ್ಯತೆಯೂ ಇದೆ. ಕೃತಕ ಗರ್ಭಧಾರಣೆ (ಐಯುಐ, ಐವಿಎಫ್) ಚಿಕಿತ್ಸೆಯ ಪರಿಣಾಮದಿಂದ ಬಹಳಷ್ಟು ಮಹಿಳೆಯರು ಮಕ್ಕಳನ್ನು ಪಡೆಯುವ ಪರಿಸ್ಥಿತಿ ಬಂದಿದೆ. ಹಾಗಾಗಿಯೇ, ಉತ್ತರ ಕರ್ನಾಟಕದ ಸಂಜೀವಿನಿ ಕೆಎಂಸಿಆರ್‌ಐನಲ್ಲಿ ಐವಿಎಫ್ ಕೇಂದ್ರ ಆರಂಭಕ್ಕೆ ಕಾಲ ಕೂಡಿ ಬಂದಿದೆ. ಇದರ ಆರಂಭದಿಂದ ಆರ್ಥಿಕವಾಗಿ ಸಬಲರಲ್ಲದ ದಂಪತಿಗಳಿಗೆ ಅನುಕೂಲವಾಗಲಿದೆ.