ಬೆಳಗಾವಿ: ಕಪ್ಪ ಕೇಳಿದ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿ ವಿಜಯ ಸಾಧಿಸಿದ ವೀರರಾಣಿ ಕಿತ್ತೂರು ಚನ್ನಮ್ಮನ ಐತಿಹಾಸಿಕ 200ನೇ ವಿಜಯೋತ್ಸವ ಮತ್ತು ಕಿತ್ತೂರು ಉತ್ಸವ-2024ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.
ಕಿತ್ತೂರು ಉತ್ಸವದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ನಂತರ ಪುಷ್ಪಾಲಂಕೃತ ಅಶ್ವಾರೂಢ ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಚನ್ನಮ್ಮನ ಕಿತ್ತೂರಿನ ಪ್ರವೇಶದ್ವಾರದ ಎರಡೂ ಬದಿಯಲ್ಲಿರುವ ಅಮಟೂರ ಬಾಳಪ್ಪ ಮತ್ತು ವೀರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿಗಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.
ಉತ್ಸವದ ಅಂಗವಾಗಿ ಆಯೋಜಿಸಿದ್ದ ಆಕರ್ಷಕ ಜಾನಪದ ಕಲಾವಾಹಿನಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು. ಕಿತ್ತೂರು ಚನ್ನಮ್ಮ ವೃತ್ತದಿಂದ ಆರಂಭಗೊಂಡ ಜಾನಪದ ಕಲಾವಾಹಿನಿಯು ನಿಚ್ಚಣಿಕಿ ಮಠದ ಆವರಣದವರೆಗೆ ಸಂಚರಿಸಿತು.
ಚಿಟ್ಟಿಮೇಳ, ಮಹಿಳಾ ವೀರಗಾಸೆ, ಈಶ್ವರ ವೇಷ, ಗಾರುಡಿ ಗೊಂಬೆ, ಮೀನು ನೃತ್ಯ, ಮಹಿಳಾ ಡೊಳ್ಳು ಕುಣಿತ, ಚೆಂಡೆವಾದ್ಯ, ಕುದುರೆ ಕುಣಿತ, ಕಂಸಾಳೆ, ನಂದಿಧ್ವಜ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ, ಕರಡಿಮಜಲು, ಕಂಸಾಳೆ, ಜಗ್ಗಲಗಿ ಸೇರಿದಂತೆ ವಿವಿಧ ಪ್ರಕಾರಗಳ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಜನಮನ ಆಕರ್ಷಿಸಿದವು. ಅಲ್ಲದೇ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡು ಸರ್ಕಾರದ ವಿವಿಧ ಯೋಜನೆಗಳು, ಸೇವಾಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿದವು.
ನಂತರ ಫಲಪುಷ್ಪ ಪ್ರದರ್ಶನ ಮತ್ತು ವಸ್ತುಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಾಯಿತು. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ವಿಧಾನಪರಿಷತ್ ಸದಸ್ಯ ಚನ್ಮರಾಜ ಹಟ್ಟಿಹೊಳಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ಮತ್ತಿತರ ಗಣ್ಯರು, ಸಾವಿರಾರು ಜನರು ಪಾಲ್ಗೊಂಡಿದ್ದರು.
ಚನ್ನಮ್ಮಾಜಿ ಸಂದೇಶ ಇಡೀ ರಾಜ್ಯಕ್ಕೆ ಹೋಗಬೇಕು: ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಚನ್ನಮ್ಮಳ ಶೌರ್ಯದ ಸಂದೇಶ ರಾಜ್ಯಕ್ಕೆ ಹೋಗಬೇಕೆಂಬುದು ನಮ್ಮ ಉದ್ದೇಶ. ಅಂಚೆ ಚೀಟಿಯಲ್ಲಿ ಚೆನ್ನಮ್ಮಳ ಹೆಸರು ಸೇರ್ಪಡೆಗೆ ಈಗಾಗಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಅಂಚೆ ಚೀಟಿಯಲ್ಲಿ ಚೆನ್ನಮ್ಮಳ ಹೆಸರು ಹಾಕಿದ್ದು ಒಳ್ಳೆಯ ನಿರ್ಧಾರ. ಹಾಗಾಗಿ, ಸ್ವಾಗತಿಸುತ್ತೇವೆ ಎಂದು ಹೇಳಿದರು.
ಮತ್ತೊಂದೆಡೆ, ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಇಂದು ಸಚಿವ ಸತೀಶ್ ಜಾರಕಿಹೊಳಿ ಅವರು ಕಿತ್ತೂರು ಉತ್ಸವ-2024 ಹಾಗೂ ವಿಜಯೋತ್ಸವದ 200ನೇ ವರ್ಷಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಿತ್ತೂರ ರಾಣಿ ಚನ್ನಮ್ಮನವರ 200ನೇ ವರ್ಷದ ವಿಜಯೋತ್ಸವ ಹಾಗೂ ಚನ್ನಮ್ಮಾಜಿ ಇತಿಹಾಸವನ್ನು ನಾಡಿಗೆ ಸಾರುವ ಉದ್ದೇಶದೊಂದಿಗೆ ಕಿತ್ತೂರು ಉತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಉತ್ಸವವು ಕಿತ್ತೂರಿನ ಐತಿಹಾಸಿಕ ಹೋರಾಟದ ಮಹತ್ವವನ್ನು ಸಾರಲಿದೆ ಎಂದರು.
ಇದನ್ನೂ ಓದಿ: ಕುನಾಲ್ ಹಾಡಿಗೆ ಹುಚ್ಚೆದ್ದು ಕುಣಿದ ಪ್ರೇಕ್ಷಕರು: ಕುಂದಾನಗರಿಯಲ್ಲಿ ಸಂಗೀತ ರಸದೌತಣ