ಕೋಲಾರ: ಇಡೀ ವಿಶ್ವಕ್ಕೆ ಬಂಗಾರ ಕೊಟ್ಟ ಚಿನ್ನದನಾಡು, ವಿಶ್ವಭೂಪಟದಲ್ಲಿ ಕರ್ನಾಟಕದ ಹೆಸರನ್ನು ಕಂಗೊಳಿಸುವಂತೆ ಮಾಡಿದ್ದ ಕೆಜಿಎಫ್ ಚಿನ್ನದ ಗಣಿ ಇತಿಹಾಸದ ಪುಟ ಸೇರುವ ದಿನಗಳು ಸನಿಹವಾಗುತ್ತಿವೆ.
ದೇಶದ ಹೆಮ್ಮಯ ಚಿನ್ನದ ನಾಡು ಕೋಲಾರ ಜಿಲ್ಲೆಯ ಕೆಜಿಎಫ್. ಈ ನೆಲದಲ್ಲಿ ಎರಡು ಶತಮಾನಗಳ ಕಾಲ ಚಿನ್ನದ ಬೆಳೆ ಬೆಳೆಯಲಾಗಿತ್ತು. 1880ರಲ್ಲಿ ಜಾನ್ ಟೇಲರ್ ಎಂಬ ಬ್ರಿಟಿಷ್ ಅಧಿಕಾರಿಯಿಂದ ಆರಂಭವಾದ ಚಿನ್ನದ ಗಣಿ, ಮೈಸೂರು ಒಡೆಯರ್, ನಂತರ ಕೇಂದ್ರ ಸರ್ಕಾರದ ಒಡೆತನ ಸೇರಿ ಸುಮಾರು 140 ವರ್ಷಗಳ ಕಾಲ ತನ್ನೊಡಲಿನಿಂದ ಸಾವಿರಾರು ಟನ್‌ಗಟ್ಟಲೆ ಚಿನ್ನವನ್ನು ಕೆಜಿಎಫ್ ಬಗೆದುಕೊಟ್ಟಿದೆ. ಜೊತೆಗೆ, ಅಂದು ಸುಮಾರು 35 ಸಾವಿರ ಕಾರ್ಮಿಕರ ಕುಟುಂಬಗಳ ಜೀವನಕ್ಕೆ ಆಸರೆಯೂ ಆಗಿತ್ತು. ಚಿನ್ನದ ಗಣಿ ಇರುವ ಉದ್ದೇಶದಿಂದಲೇ ಇಡೀ ಏಷ್ಯಾದಲ್ಲೇ ಮೊದಲ ಬಾರಿಗೆ ರಾಜ್ಯದ ಶಿವನಸಮುದ್ರದಿಂದ ವಿದ್ಯುತ್ ಉತ್ಪಾದಿಸಿ ಮೊದಲು ಚಿನ್ನದ ಗಣಿ ಪ್ರದೇಶಕ್ಕೆ ಪೂರೈಕೆ ಮಾಡಲಾಗಿತ್ತು. ಇಂದಿಗೂ ಕರ್ನಾಟಕದಲ್ಲಿ ಮೊದಲು ವಿದ್ಯುತ್ ಪಡೆದ ನಗರ, ಮೊದಲು ರೈಲ್ವೆ ಸಂಪರ್ಕ ಸಿಕ್ಕ ನಗರವೆಂಬ ಹೆಗ್ಗಳಿಕೆ ಕೆಜಿಎಫ್ಗಿದೆ.
ಸ್ವತಂತ್ರ್ಯಾನಂತರ 1956ರಲ್ಲಿ ಬ್ರಿಟಿಷ್ ಜಾನ್ ಟೇಲರ್ ಕಂಪನಿಯಿಂದ ಕೆಜಿಎಫ್ ಚಿನ್ನದ ಗಣಿ ಕೇಂದ್ರ ಸರ್ಕಾರದ ಒಡೆತನಕ್ಕೆ ಬಂದಿತ್ತು. ಆಗಿನ ಕೇಂದ್ರ ಸರ್ಕಾರಕ್ಕೆ ಕೆಜಿಎಫ್ ಚಿನ್ನದ ಗಣಿ ಒಳ್ಳೆಯ ಆದಾಯದ ಮೂಲವಾಗಿತ್ತು. ಆದರೆ ನಂತರ ಅಧಿಕಾರಿಗಳ ದುರಾಡಳಿತ, ಭ್ರಷ್ಟಾಚಾರ, ರಾಜಕೀಯ ಮುಂತಾದ ಕಾರಣಗಳಿಂದ 1980ರಿಂದೀಚೆಗೆ ಕೆಜಿಎಫ್ ಅವನತಿಯ ಹಾದಿ ತುಳಿಯುತ್ತಾ ಬಂದಿತ್ತು. ಕ್ರಮೇಣ ನಷ್ಟ ಉಂಟಾಗಿದ್ದರಿಂದ ಕೇಂದ್ರ ಸರ್ಕಾರ ಅಲ್ಲಿನ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ನೀಡಿ 2001 ಮಾರ್ಚ್ 1ರಂದು ಚಿನ್ನದ ಗಣಿಗೆ ಬೀಗ ಹಾಕಲಾಗಿತ್ತು. ಚಿನ್ನದ ಗಣಿಗೆ ಬೀಗ ಹಾಕಿದ ಸಂದರ್ಭದಲ್ಲಿ ಸುಮಾರು 3500 ಕಾರ್ಮಿಕರು ಬೀದಿಪಾಲಾಗಿದ್ದರು. ಗಣಿಗೆ ಬೀಗ ಹಾಕಿ 22 ವರ್ಷಗಳು ಕಳೆದರೂ ಇಂದಲ್ಲಾ ನಾಳೆ ಸುವರ್ಣ ಕಾಲ ಪುನಾರಂಭವಾಗುತ್ತದೆ ಎಂದು ಕಾಯುತ್ತಿದ್ದವರಿಗೆ ಕೆಜಿಎಫ್ ಚಿನ್ನದ ಗಣಿ ಮುಗಿದ ಅಧ್ಯಾಯ ಎಂದು ಕೇಂದ್ರ ಗಣಿ ಇಲಾಖೆಯ ಕಾರ್ಯದರ್ಶಿ ಕಾಂತಾರಾವ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕೆಜಿಎಫ್ನಲ್ಲಿರುವ ಸುಮಾರು 12,500 ಎಕರೆ ಭೂಮಿಯನ್ನು ಚಿನ್ನದ ಗಣಿಗಾರಿಕೆಗಾಗಿ ಗುತ್ತಿಗೆ ನೀಡಿತ್ತು. ಆದರೆ 2023 ಆಗಸ್ಟ್ ತಿಂಗಳಿಗೆ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, ಕೇಂದ್ರ ಗಣಿ ಇಲಾಖೆ ಕೆಜಿಎಫ್‌ನಲ್ಲಿ ಗುತ್ತಿಗೆ ಪಡೆದಿದ್ದ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸುವ ಪ್ರಕ್ರಿಯೆ ಶುರು ಮಾಡಿದೆ. ಈಗಾಗಲೇ ಕೆಜಿಎಫ್‌ನಲ್ಲಿ ಹಾಕಲಾಗಿದ್ದ ಸೈನೈಡ್ ಗುಡ್ಡಗಳಲ್ಲಿನ ಚಿನ್ನವನ್ನು ಶೋಧಿಸುವ ಕಾರ್ಯಕ್ಕೆ ಗ್ಲೋಬಲ್ ಟೆಂಡರ್ ಕರೆಯಲಾಗಿದೆ. ಜೊತೆಗೆ 12,500 ಎಕರೆಯಲ್ಲಿ ಬಹಳಷ್ಟು ಎಕರೆ ಒತ್ತುವರಿಯಾಗಿದ್ದು, ಸ್ಥಳೀಯ ಆಡಳಿತದ ಸಹಕಾರದಿಂದ ಒತ್ತುವರಿ ತೆರವು ಮಾಡುವ ಕೆಲಸ ಕೂಡಾ ನಡೆಯುತ್ತಿದೆ. ಕೇಂದ್ರ ಸರ್ಕಾರದ ಸಚಿವ ಸಂಪುಟದ ನಿರ್ಧಾರದಂತೆ ಪ್ರಕ್ರಿಯೆ ಮಾಡುತ್ತಿದ್ದೇವೆ ಎಂದು ಕೇಂದ್ರ ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಜಿಎಫ್ನ ಭಾರತ ಗೋಲ್ಡ್ ಆ್ಯಂಡ್ ಮೈನ್ಸ್ ಲಿಮಿಟೆಡ್ ಕಂಪನಿ ವ್ಯಾಪ್ತಿಗೆ ಒಳಪಡುತ್ತಿದ್ದ ಚಾಂಪಿಯನ್‌ರೀಫ್, ಮಾರುಕುಪ್ಪಂ, ಗೋಲ್ಕೊಂಡ, ಚಿಗರಿಗುಂಟ, ಬಿಸಾನತ್ತಂ, ಮೈಸೂರು ಮೈನ್ಸ್, ನಂದಿದುರ್ಗ, ಹೆನ್ರೀಸ್ ಮೈನ್ಸ್ ಸೇರಿದಂತೆ ಎಲ್ಲಾ ಪ್ರದೇಶಗಳಲ್ಲೂ ಗಣಿಗಾರಿಕೆ ಸ್ಥಗಿತವಾಗಿ 22 ವರ್ಷಗಳು ಕಳೆದಿವೆ. ಹಾಗಾಗಿ ರಾಜ್ಯ ಸರ್ಕಾರ ಇಲ್ಲಿರುವ 12,500 ಎಕರೆ ಭೂ ಪ್ರದೇಶದಲ್ಲಿ ಹೊಸ ಕೈಗಾರಿಕಾ ವಲಯ ಹಾಗೂ ಹೊಸ ಟೌನ್‌ಶಿಪ್ ನಿರ್ಮಾಣ ಮಾಡುವ ಯೋಜನೆ ಹೊಂದಿದ್ದು, ಈಗಾಗಲೇ 1,000 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವುದಾಗಿ ಕಳೆದ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಸದ್ಯ ರಾಜ್ಯ ಸರ್ಕಾರ ಚಿನ್ನದ ಗಣಿ ಪ್ರದೇಶದಲ್ಲಿ ಕೈಗಾರಿಕಾ ವಲಯವಾದರೂ ಸ್ಥಾಪನೆ ಮಾಡಿದ್ದೇ ಆದಲ್ಲಿ ಕನಿಷ್ಠ ಇಲ್ಲಿನ ಜನರಿಗೆ ಉದ್ಯೋಗ ಸಿಗಲಿದೆ.
ಮಾರ್ಚ್-1ಕ್ಕೆ ಚಿನ್ನದ ಗಣಿಗೆ ಬೀಗ ಹಾಕಿ 23 ವರ್ಷಗಳು ಪೂರ್ಣವಾಗಲಿದೆ. ಈಗಲಾದ್ರೂ ಕೆಜಿಎಫ್ ಪ್ರದೇಶಕ್ಕೆ ಹೊಸ ರೂಪ ಕೊಡುವ ಕೆಲಸ ಮಾಡಬೇಕಿದೆ. ಈ ಮೂಲಕ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಇತಿಹಾಸ ಹೊಂದಿರುವ ಕೆಜಿಎಫ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡುಗೆ ನೀಡಬೇಕಿದೆ.
ಇದನ್ನೂ ಓದಿ: ಭೂಮಿ ಮೇಲೆ ಇರುವವರೆಗೆ ಪ್ರತಿಯೊಬ್ಬರು ದುಡಿದು ತಿನ್ನಬೇಕು: ಗವಿಸಿದ್ಧೇಶ್ವರ ಶ್ರೀ ಸಲಹೆ