ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಆತಂಕ ಮುಂದುವರೆದಿದೆ. ಈಗಾಗಲೇ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ. ಸಿದ್ದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ಸೋಂಕಿತರಿದ್ದು, ಈವರೆಗೆ 9 ಜನ ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನಡೆದಿದೆಯೇ ಹೊರತು, ಸರ್ಕಾರದಿಂದ ಪರಿಣಾಮಕಾರಿ ಲಸಿಕೆ ನೀಡುವ ಕೆಲಸ ಆಗುತ್ತಿಲ್ಲ ಎಂಬುದು ಜನರ ದೂರು.
ಸಿದ್ದಾಪುರದಲ್ಲಿ 100 ಸೋಂಕಿತ ಪ್ರಕರಣ: ಕಳೆದ ಡಿಸೆಂಬರ್ ತಿಂಗಳಲ್ಲಿ ಸಿದ್ದಾಪುರದ ಕೊರ್ಲಕೈ ಭಾಗದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದೀಗ ಜಿಲ್ಲೆಯ ವಿವಿಧೆಡೆ ಕಾಯಿಲೆ ಹರಡಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 108 ಕೇಸ್ ಪತ್ತೆಯಾಗಿದೆ. ಸಿದ್ದಾಪುರದಲ್ಲಿ 100, ಶಿರಸಿ 5, ಜೋಯಿಡಾ 2 ಮತ್ತು ಅಂಕೋಲಾದಲ್ಲಿ 1 ಪ್ರಕರಣ ಕಂಡುಬಂದಿದೆ.
ಸಿದ್ದಾಪುರ ತಾಲೂಕಿನ ಕೊರ್ಲಕೈ ಗ್ರಾಮದಲ್ಲಿ 69, ಹಲಗೇರಿಯಲ್ಲಿ 14, ಸೋವಿನಕೊಪ್ಪ ಮತ್ತು ಮನ್ಮನೆ ಭಾಗದಲ್ಲಿ 2, ಹಸರಗೋಡು ಭಾಗದಲ್ಲಿ 1 ಮತ್ತು ಸಿದ್ದಾಪುರ ಪಟ್ಟಣ ಪಂಚಾಯತ್ ಭಾಗದಲ್ಲಿ 3 ಪ್ರಕರಣ ದೃಢಪಟ್ಟಿದೆ. ಮಣಿಪಾಲ ಆಸ್ಪತ್ರೆ ಮತ್ತು ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ತಲಾ ಇಬ್ಬರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
''ಪ್ರಕರಣದಿಂದಾಗಿ ಗ್ರಾಮೀಣ ಪ್ರದೇಶದ ನಾಗರಿಕರಲ್ಲಿ ಆತಂಕ ಹೆಚ್ಚಾಗಿದೆ. ನಮಗೆ ಕಾಡಿನತ್ತ ಹೋಗಲು ಭಯವಾಗುತ್ತಿದೆ. ರೋಗ ಕರಾವಳಿ ಭಾಗಕ್ಕೂ ತಗುಲಿದೆ. ಆರೋಗ್ಯ ಇಲಾಖೆ ಜಾಗೃತಿ ಮೂಡಿಸಿದೆ ಎಂದು ಹೇಳುತ್ತಿದೆ, ಆದರೆ ನಿಯಂತ್ರಣ ಸಾಧ್ಯವಾಗಿಲ್ಲ'' ಎನ್ನುತ್ತಾರೆ ಸ್ಥಳೀಯರಾದ ಅವಿನಾಶ್.
''ಜ್ವರ, ಹೊಟ್ಟೆ ನೋವು, ಬೇಧಿ ಕಾಣಿಸಿಕೊಂಡ ಒಟ್ಟು 2,242 ಶಂಕಿತರ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ವರದಿ ಬಂದ ಬಳಿಕ ಒಟ್ಟು 108 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 10 ಬೆಡ್ ವ್ಯವಸ್ಥೆ ಮಾಡಲಾಗಿದೆ. ಕೆಎಫ್ಡಿಗೆ ಸಂಬಂಧಿಸಿದಂತೆ ಜನವರಿ ತಿಂಗಳಲ್ಲಿ ಆರೋಗ್ಯ ಇಲಾಖೆ ಸಭೆ ನಡೆಸಿತ್ತು. ಮನೆ, ಮನೆಗೆ ಭೇಟಿ ಮಾಡಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಮಂಗನ ಕಾಯಿಲೆ ಕಾಣಿಸಿಕೊಂಡ ಗ್ರಾಮಗಳಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದೇವೆ'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಮಾಹಿತಿ ನೀಡಿದ್ದಾರೆ.
''ಲಸಿಕೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮುಂದೆ ಮಳೆಯಾದಲ್ಲಿ ಪ್ರಕರಣ ಕಡಿಮೆಯಾಗಬಹುದು. ಒಟ್ಟು 55 ಮಂಗಗಳು ಸಾವನ್ನಪ್ಪಿದ್ದು, ಅದರಲ್ಲಿ ಎಂಟು ಮಂಗಗಳ ಮರಣೋತ್ತರ ಪರೀಕ್ಷೆಯಿಂದ ಪಾಸಿಟಿವ್ ಕಂಡುಬಂದಿದೆ. ಆರೋಗ್ಯ ಇಲಾಖೆಯಿಂದ ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ'' ಎಂದು ಡಿಎಚ್ಒ ಡಾ.ನೀರಜ್ ತಿಳಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ವೃದ್ಧ ಬಲಿ; ನಾಲ್ಕಕ್ಕೇರಿದ ಸಾವಿನ ಸಂಖ್ಯೆ