ಬೆಂಗಳೂರು: ಎರಡನೇ ಸುತ್ತಿನ ಯುಜಿ ನೀಟ್ ಅಖಿಲ ಭಾರತ ಸೀಟು ಹಂಚಿಕೆ ಫಲಿತಾಂಶ ಇಂದು (ಸೆ.19) ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಕೌನ್ಸಿಲಿಂಗ್ನಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ, ಕೆಇಎ ಯಿಂದ ಹಂಚಿಕೆಯಾದ ಸೀಟಿಗೆ ಸೇರಲು ಅಥವಾ ಅಖಿಲ ಭಾರತ ಕೌನ್ಸಿಲಿಂಗ್ ಮೂಲಕ ಹಂಚಿಕೆಯಾದ ಸೀಟನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಯ ನೀಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಆ ಪ್ರಕಾರ, ಕೆಇಎಯಿಂದ ಹಂಚಿಕೆಯಾದ ಸೀಟು ರದ್ದುಪಡಿಸಿಕೊಂಡು ಅಖಿಲ ಭಾರತ ಸೀಟು ಉಳಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು ಸೆ.20ರ ಬೆಳಗ್ಗೆ 11ರೊಳಗೆ ಕೆಇಎಯಿಂದ ಹಂಚಿಕೆಯಾದ ಯುಜಿನೀಟ್ ಸೀಟನ್ನು ಕೆಇಎ ಕಚೇರಿಗೆ ಖುದ್ದಾಗಿ ಬಂದು ರದದು ಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಇಂತಹ ಅಭ್ಯರ್ಥಿಗಳಿಗೆ 10,000 ರೂ ದಂಡ ವಿಧಿಸಿ, ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಸೀಟು ರದ್ದುಪಡಿಸಿಕೊಳ್ಳುವ ಸಮಯದಲ್ಲಿ ಅಖಿಲ ಭಾರತ ಕೌನ್ಸಿಲಿಂಗ್ನಲ್ಲಿ ಹಂಚಿಕೆಯಾದ ಸೀಟುಗಳ ವಿವರವನ್ನು ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಕೆಇಎಯಲ್ಲಿ ರದ್ದಾದ ಎಲ್ಲಾ ಸೀಟುಗಳನ್ನು ಪರಿಗಣಿಸಿ ಮತ್ತು ಅರ್ಹ ಅಭ್ಯರ್ಥಿಗಳು ಎರಡನೇ ಸುತ್ತಿಗೆ ನಮೂದಿಸಿದ ಅದೇ ಆದ್ಯತಾ ಕ್ರಮದಲ್ಲಿನ ಆಪ್ಶನ್ಗಳೊಂದಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು 'ರೀ ರನ್' ಮಾಡಿ, ಎರಡನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಆಪ್ಶನ್ಗಳ ಆದ್ಯತೆಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ ಎಂದು ವಿವರಿಸಲಾಗಿದೆ.
ಇತರೆ ಅಭ್ಯರ್ಥಿಗಳಿಗೆ ದಂಡವಿಲ್ಲದೆ ಯಾವುದೇ ಸೀಟನ್ನು ರದ್ದುಪಡಿಸುವುದಿಲ್ಲ. ಮುಂದಿನ ಪ್ರಕ್ರಿಯೆ ಮತ್ತು ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ ಎಂದು ಹೆಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.
ಬುಧವಾರವಷ್ಟೇ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶದ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಕೆಇಎ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ. ಈ ಸುತ್ತಿನ ಸೀಟು ಹಂಚಿಕೆಗೆ ಸೆಪ್ಟೆಂಬರ್ 13ರ ಮಧ್ಯಾಹ್ನ 2 ಗಂಟೆವರೆಗೆ ನಮೂದಿಸಿದ ಆಪ್ಶನ್ಗಳನ್ನು ಪರಿಗಣಿಸಲಾಗಿದೆ. ಇದು ತಾತ್ಕಾಲಿಕ ಫಲಿತಾಂಶವಾಗಿರುವ ಕಾರಣ ಅಭ್ಯರ್ಥಿಗಳು ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆಯುವಂತಿಲ್ಲ. ಯಾವುದಾದರೂ ನಿರ್ದಿಷ್ಟ ಆಕ್ಷೇಪಣೆಗಳು ಇದ್ದಲ್ಲಿ ಸೆಪ್ಟೆಂಬರ್ 19ರ ಬೆಳಗ್ಗೆ 10ಗಂಟೆಯೊಳಗೆ keauthority-ka@nic.inಗೆ ಇಮೇಲ್ ಮಾಡಬಹುದು. ಆಕ್ಷೇಪಣೆ ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೆಚ್.ಪ್ರಸನ್ನ ಮಾಹಿತಿ ನೀಡಿದ್ದರು.