ಕೊಪ್ಪಳ: ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ದುಡಿದು ತಿನ್ನಬೇಕು. ವ್ಯಕ್ತಿ ಎಲ್ಲಿಯವರೆಗೆ ಬದುಕುತ್ತಾನೋ, ಅಲ್ಲಿಯವರೆಗೆ ದುಡಿಯುತ್ತಿರಬೇಕು ಎಂದು ಕೊಪ್ಪಳದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ಗವಿಮಠ ಜಾತ್ರೆಯ ನಿಮಿತ್ತ ಏರ್ಪಡಿಸಿದ್ದ ಕಾಯಕ ದೇವೊ ಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗವಿಸಿದ್ದೇಶ್ವರ ಜಾತ್ರೆ ಕಾಯಕ ನಿಷ್ಠೆಯ ಕುರಿತು ಜಾಥಾ ಮೂಲಕ ಆರಂಭವಾಗಿದೆ. ಸೃಷ್ಟಿಕರ್ತ ದೇವರು ಈ ನಿಸರ್ಗದಲ್ಲಿ ಅಂಗಾಂಗಳು ಇಲ್ಲದೇ ಇರುವವರನ್ನು ಮತ್ತು ಮಾತು ಬಾರದವರಿಗೆ ಜನ್ಮ ನೀಡಿದ್ದಾನೆ. ಆದರೆ ಹೊಟ್ಟೆ ಇಲ್ಲದವರನ್ನು ಅಂದರೆ ಊಟ ಮಾಡದೇ ಬದುಕ ಬಲ್ಲವರನ್ನು ಸೃಷ್ಟಿಸಿಲ್ಲ. ಅಂದರೆ ಈ ಭೂಮಿಯ ಮೇಲೆ ಜೀವಿಸುವವರೆಲ್ಲ ಆಹಾರ ತಿನ್ನಲೇಬೇಕು. ಅದನ್ನು ಅವರೇ ದುಡಿದು ತಿಂದಾಗ ಮಾತ್ರ ಅದಕ್ಕೆ ಮೌಲ್ಯವಿದೆ ಎಂದು ಅರಿವಿನ ಸಂದೇಶ ನೀಡಿದರು.
ಮನುಷ್ಯನು ನಿರಂತರ ಕಾಯಕದಲ್ಲಿ ತೊಡಗಲಿ: ನಿಸರ್ಗ ನಿರಂತರ ಕೆಲಸ ಮಾಡುತ್ತದೆ. ಗಾಳಿ, ನದಿ, ಸೂರ್ಯ ನಿರಂತರ ಕೆಲಸ ಮಾಡುತ್ತವೆ. ಅವುಗಳಲ್ಲಿ ಯಾವುದಾದರೂ ಒಂದು ತನ್ನ ಕೆಲಸ ಮಾಡುವುದನ್ನು ನಿಲ್ಲಿಸಿದರೆ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಪ್ರಕೃತಿಯಂತೆ ಮನುಷ್ಯನು ನಿರಂತರ ಕಾಯಕದಲ್ಲಿ ತೊಡಗಬೇಕು. ಮನುಷ್ಯ ದುಡಿಯದೇ ಇದ್ದರೆ ಕೆಡುತ್ತಾನೆ. ಮನುಷ್ಯ ದುಡಿದೇ ಬದುಕಬೇಕು ಎಂದು ನುಡಿದರು.
ಸ್ವಯಂ ಉದ್ಯೋಗದಲ್ಲಿ ಯಶಸ್ಸು: ನಾನು ದುಡಿದು ಉಣ್ಣಬೇಕು. ತಂದೆ ಮಾಡಿದ್ದು ಉಂಡರೆ ಹಳಿಸಿದ್ದನ್ನು ತಿಂದಂತೆ, ಮೋಸ ಮಾಡಿ ತಿಂದರೆ ಅದು ಇನ್ನೊಬ್ಬರ ಎಂಜಲ ತಿಂದಂತೆ. ನಾವು ದುಡಿದು ತಿನ್ನಬೇಕು ಅದು ಮೃಷ್ಠಾನ್ನ ತಿಂದಂತೆ ಎಂದ ಶ್ರೀಗಳು, ಜಾತ್ರೆಯಲ್ಲಿ ಕಾಯಕ ನಿಷ್ಠೆಯ ಕಾರ್ಯಕ್ರಮವನ್ನು ಆಸಕ್ತಿಯಿಂದ ಆಯೋಜಿಸಲಾಗಿದೆ. ಈ ಬಾರಿ ಜಾತ್ರೆಯಲ್ಲಿ 100ಕ್ಕೂ ಹೆಚ್ಚು ಸ್ವಯಂ ಉದ್ಯೋಗದಲ್ಲಿ ಯಶಸ್ವಿಯಾದವರು ಬಂದಿದ್ದಾರೆ. ಅವರ ಯಶೋಗಾಥೆಗಳನ್ನು ಅರಿತು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾನತೆ: ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಮಾತನಾಡಿ, ಗವಿಮಠ ಜಾತ್ರೆಯಲ್ಲಿ ಪ್ರಸಾದ ನೀಡುವುದರ ಜೊತೆಗೆ ಜಾತ್ರೆಗೆ ಬಂದವರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಜಾಗೃತಿ ಕೊರತೆಯಿಂದ ಬಾಲ್ಯ ವಿವಾಹಗಳು ಜರುಗುತ್ತಿರುವುದು ದುರಂತದ ಸಂಗತಿಯಾಗಿದೆ. ಈ ಬಗ್ಗೆ ಪಾಲಕರು ಎಚ್ಚೆತ್ತುಕೊಳ್ಳಬೇಕು. ಅಸಮಾನತೆ ಪ್ರಾರಂಭವಾಗುವುದೇ ನಿಮ್ಮಗಳ ಮನೆಯಿಂದ. ಮನೆಯಲ್ಲಿ ಹುಡುಗರಿಗೆ ಒಂದು ರೀತಿ, ಹುಡುಗಿಯರಿಗೆ ಒಂದು ರೀತಿ ಬೆಳೆಸುತ್ತಾರೆ. ಹಾಗಾಗಬಾರದು, ಸಮಾನತೆ ಅನ್ನೋದು ಮನೆಯಿಂದ ಶುರುವಾಗಬೇಕು ಎಂದು ಸಲಹೆ ನೀಡಿದರು.
ಅವಕಾಶ ವ್ಯಕ್ತಿತ್ವ ಬೆಳವಣಿಗೆಗೆ ಬಳಸಿಕೊಳ್ಳಿ: ಹುಡುಗಿಯರಿಗೆ ಅನುಕಂಪ ಬೇಡ. ಸಮಾನತೆ ಜೊತೆಗೆ ಸಮಾನ ಅವಕಾಶ ನೀಡಿ. ಕೊಟ್ಟಿರುವ ಫ್ರೀಡಂನ್ನು ವಿದ್ಯಾರ್ಥಿಗಳು ಮಿಸ್ ಯೂಸ್ ಮಾಡಿಕೊಳ್ಳಬಾರದು. ಕೊಟ್ಟಿರುವ ಅವಕಾಶವನ್ನು ವ್ಯಕ್ತಿತ್ವ ಬೆಳವಣಿಗೆಗೆ ಬಳಸಿಕೊಳ್ಳಬೇಕು. ನಮ್ಮ ಮನೆಯಲ್ಲಿ ಸಮಾನತೆಯಿಂದ ಬೆಳೆಸಿದ್ದರಿಂದಲೇ ನಾನು ಈ ಸ್ಥಾನದಲ್ಲಿದ್ದೇನೆ ಎಂದು ಹೇಳಿದರು.
ಜಾಥಾ ಕೊಪ್ಪಳ ತಾಲೂಕು ಕ್ರೀಡಾಂಗಣದಿಂದ ಆರಂಭವಾಗಿ ಗವಿಮಠಕ್ಕೆ ಆಗಮಿಸಿತು. ಸಾವಿರಾರು ವಿದ್ಯಾರ್ಥಿಗಳು. ಸಂಘ ಸಂಸ್ಥೆಗಳು ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯಾ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.