ಬೆಂಗಳೂರು: ಕೆಎಎಸ್ ಆಕಾಂಕ್ಷಿಗಳ ಸಣ್ಣದೊಂದು ಗುಂಪು ಕೆಎಎಸ್ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯನ್ನು ಮುಂದಕ್ಕೆ ಹಾಕುವ ಲಾಬಿ ನಡೆಸುತ್ತಿದ್ದು, ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೆಎಎಸ್ ಆಕಾಂಕ್ಷಿಗಳ ಸಣ್ಣದೊಂದು ಗುಂಪು ಆ. 27ಕ್ಕೆ ನಿಗದಿಯಾಗಿರುವ ಕೆಎಎಸ್ ಪರೀಕ್ಷೆಯನ್ನು ಮುಂದೂಡಲು ಲಾಬಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಆ ಗುಂಪು ಎಲ್ಲಾ ತರದ ಒತ್ತಡ ತಂತ್ರ ಬಳಸುತ್ತಿದ್ದಾರೆ. ಆ ಗುಂಪು ಕೆಪಿಎಸ್ಸಿ, ಡಿಪಿಎಆರ್ ಮತ್ತು ಸಿಎಂ ಕಚೇರಿಯ ಅಧಿಕಾರಿಗಳಿಗೆ ಕರೆಗಳು ಹಾಗೂ ವಾಟ್ಸ್ ಆ್ಯಪ್ ಮೆಸೇಜ್ಗಳನ್ನು ಹರಿ ಬಿಡುತ್ತಿದ್ದಾರೆ. ಹೀಗಾಗಿ ನಾನು ಕೆಲವೊಮ್ಮೆ ನನ್ನ ಮೊಬೈಲನ್ನು ಎರೊಪ್ಲೇನ್ ಮೋಡ್ಗೆ ಇಡುವಂತಾಗಿದೆ ಎಂದು ತಿಳಿಸಿದ್ದಾರೆ.
ಕೆಪಿಸಿಎಸ್ ಸುತ್ತ ಅನುಮಾನದ ಹುತ್ತ ಎಂದು ಹೇಳುವ ಮೂಲಕ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಈ 1500 ಗುಂಪಿನ ವಿದ್ಯಾರ್ಥಿಗಳ ಗುಂಪಿನ ಒತ್ತಡಕ್ಕೆ ಮಣಿದರೆ 2.5 ಲಕ್ಷ ಪರೀಕ್ಷಾರ್ಥಿಗಳಿಗೆ ಅನ್ಯಾಯ ಮಾಡಿದಂತೆ ಆಗಲಿದೆ. ಅವರೆಲ್ಲರೂ ಪರೀಕ್ಷೆಗೆ ತಯಾರಿ ನಡೆಸಿದ್ದು, ಪರೀಕ್ಷಾ ಕೇಂದ್ರಗಳಿಗೆ ತಮ್ಮ ಪ್ರವೇಶ ಪತ್ರವನ್ನು ನೋಂದಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆಎಎಸ್ ಪರೀಕ್ಷೆ ಮಾರ್ಗಸೂಚಿ: ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಇತರ ಆಭರಣ ನಿಷೇಧ - KAS Exam Guidelines
ಮೊದಲಿಗೆ ಫೆ.26ಗೆ ಪರೀಕ್ಷೆಯ ಅಧಿಸೂಚನೆ ಹೊರಡಿಸಲಾಗಿತ್ತು. ಮೇ 5ಕ್ಕೆ ಪ್ರಿಲಿಮ್ಸ್ ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ ಮೇ 7ರ ಚುನಾವಣೆ ಹಿನ್ನೆಲೆ ಅದನ್ನು ಜು.21ಗೆ ಮುಂದೂಡಲಾಯಿತು. ಇತ್ತ ವಯೋಮಿತಿಯ ನಿರ್ಬಂಧ ಇದ್ದ 2017-18 ಅಭ್ಯರ್ಥಿಗಳಿಗೆ ಹೆಚ್ಚುವರಿ ಅವಕಾಶ ನೀಡಲು ಜೂ.21ರಂದು ಆದೇಶ ಹೊರಡಿಸಲಾಯಿತು. ಹೀಗಾಗಿ ಪರೀಕ್ಷೆ ದಿನಾಂಕವನ್ನು ಆ.25ಕ್ಕೆ ಬದಲಾವಣೆ ಮಾಡಲಾಯಿತು. ಜೂ. 26ರಂದು ಇದನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಿಲಾಯಿತು. 2017-18 ಬ್ಯಾಚ್ ಅಭ್ಯರ್ಥಿಗಳಿಂದ ಅರ್ಜಿ ಪಡೆಯಲು ಸುಲಭ ಆವೃತ್ತಿಯ ಸಾಫ್ಟ್‌ವೇರ್ ಜು.6ಕ್ಕೆ ಅಭಿವೃದ್ಧಿ ಪಡಿಸಲಾಯಿತು. ಜು.21 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಸುಮಾರು 1,560 ಅರ್ಜಿಗಳು ಸ್ವೀಕರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಜು.1ರಂದು ಐಬಿಪಿಎಸ್ ಪರೀಕ್ಷೆ (ಬ್ಯಾಂಕ್ ಉದ್ಯೋಗ ನೇಮಕಾತಿ ಪರೀಕ್ಷೆ) ವೇಳಾಪಟ್ಟಿಯ ಅಧಿಸೂಚನೆ ಹೊರಡಿಸಲಾಯಿತು. ಈ ಸಂಬಂಧ ಸಿಎಂ ಕಚೇರಿ ಜೊತೆ ಚರ್ಚಿಸಲಾಯಿತು. ಬಳಿಕ ನಿಗದಿಯಾಗಿದ್ದ ಆ.25ರ ದಿನಾಂಕವನ್ನು ಮುಂದೂಡಿರುವುದಾಗಿ ಸಿಎಂ ಟ್ವೀಟ್ ಮೂಲಕ ಪ್ರಕಟಿಸಿದರು. ಲೋಕಸೇವಾ ಆಯೋಗ ಆ.5ರಂದು ಸಭೆ ನಡೆಸಿ ಪರೀಕ್ಷೆಯನ್ನು ಆ.27ಕ್ಕೆ ಮುಂದೂಡಲು ತೀರ್ಮಾನಿಸಿತು. ಹೀಗಾಗಿ ಪರೀಕ್ಷಾರ್ಥಿಗಳಿಗೆ ವ್ಯಾಪಕ ಕಾಲಾವಕಾಶ ನೀಡಲಾಗಿದೆ. ಕೆಪಿಎಸ್ಸಿ ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಸುಮಾರು 2.5 ಲಕ್ಷ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ನಡೆಸಲು ಅಪಾರ ಪೂರ್ವ ಸಿದ್ಧತೆ ಮಾಡಲಾಗಿದೆ. ಪೇಪರ್ ಮುದ್ರಿಸಲು ಸುಮಾರು 4-5 ಕೋಟಿ ರೂ. ಖರ್ಚು ಮಾಡಲಾಗಿದೆ. ಎರಡು ತಿಂಗಳು ಪರೀಕ್ಷೆ ಮುಂದೂಡಿದರೆ ಮುದ್ರಿತ ಪ್ರಶ್ನೆ ಪತ್ರಿಕೆಯನ್ನು ನಾಶಗೊಳಿಸಿ ಹೊಸ ಪೇಪರ್ಗಳನ್ನು ಮುದ್ರಿಸಬೇಕು. ಸೋರಿಕೆ ಸಾಧ್ಯತೆ ಹಿನ್ನೆಲೆ ಪ್ರಶ್ನೆ ಪತ್ರಿಕೆಯನ್ನು ದೀರ್ಘಕಾಲ ಹಾಗೇ ಸಂಗ್ರಹಿಸಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಅತೀಕ್ ಸ್ಪಷ್ಟಪಡಿಸಿದ್ದಾರೆ.