ಶಿವಮೊಗ್ಗ: ಕರ್ನಾಟಕ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಒಟ್ಟು 27,412 ಮತದಾರರಿದ್ದಾರೆ. 38 ಮತಕೇಂದ್ರಗಳನ್ನು ತೆರೆಯಲಾಗಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 4,365 ಮತದಾರರಿದ್ದಾರೆ. ಇಲ್ಲಿ ಒಟ್ಟು 32 ಮತಕೇಂದ್ರಗಳನ್ನು ತೆರೆಯಲಾಗಿದೆ. ಮತದಾರರು ತಮ್ಮ ಮತ ಇರುವ ಕೇಂದ್ರದಲ್ಲಿ ಮತದಾನ ಮಾಡಬಹುದು. ಎಲ್ಲಾ ಮತಗಟ್ಟೆ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದರು.
ಜೂನ್ 1ರ ಸಂಜೆ 4 ಗಂಟೆಯಿಂದ ಜೂನ್ 3ರ ಸಂಜೆ 4ರವರೆಗೆ ಮದ್ಯ ಮಾರಾಟ ನಿಷೇಧಿಸಿ 'ಒಣ ದಿನ' ಘೋಷಿಸಿ ಆದೇಶಿಸಲಾಗಿದೆ ಎಂದು ಹೇಳಿದರು.
ಪದವೀದರ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್, ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಧನಂಜಯ್ ಸರ್ಜಿ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ವಕೀಲ ಷಹರಾಜ್ ಮುಜಾಹೀದ್ ಸಿದ್ದೀಕಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಎಸ್.ಪಿ.ದಿನೇಶ್ ಕಣದಲ್ಲಿದ್ದಾರೆ.
ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಡಾ.ಕೆ.ಕೆ.ಮಂಜುನಾಥ್, ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಭೋಜೇಗೌಡ, ಡಾ.ಅರುಣ್ ಹೊಸಕೊಪ್ಪ, ನಂಜೇಶ್ ಬಿ.ಆರ್ ಸೇರಿ ಇತರರು ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ 87 ಅತಿಸೂಕ್ಷ್ಮ ಮತಗಟ್ಟೆಗಳು; ಡಿಸಿ ಗುರುದತ್ತ ಹೆಗಡೆ - SHIVAMOGGA LOK SABHA CONSTIUENCY