ಬೆಂಗಳೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -2 ರ ಫಲಿತಾಂಶವನ್ನು ವೆಬ್ ಸೈಟ್ ಮೂಲಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪ್ರಕಟಿಸಿದ್ದು, ಶೇ.35.25 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪರೀಕ್ಷೆ ಎರಡರಲ್ಲಿಯೂ ವಿದ್ಯಾರ್ಥಿನಿಯರೇ ಮುಂದಿದ್ಧಾರೆ. https://karresults.nic.in ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶ ವೀಕ್ಷಿಸಬಹುದಾಗಿದೆ.
ಏಪ್ರಿಲ್ 29 ರಿಂದ ಮೇ 16 ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-2 ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷೆ ಮಂಜುಶ್ರೀ ವೆಬ್ ಸೈಟ್ ಮೂಲಕ ಪ್ರಕಟಿಸಿದ್ದಾರೆ. ಪರೀಕ್ಷೆ -2 ರಾಜ್ಯದ 301 ಕೇಂದ್ರಗಳಲ್ಲಿ ನಡೆದಿದ್ದು, ಮೇ 15 ರಿಂದ 18 ರವರೆಗೆ 28 ಕೇಂದ್ರಗಳಲ್ಲಿ 7875 ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲಾಗಿದೆ. ಪರೀಕ್ಷೆ-2 ರಲ್ಲಿ ಶೇ.35.25 ರಷ್ಟು ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ.
1,49,824 ವಿದ್ಯಾರ್ಥಿಗಳಲ್ಲಿ 1,48,942 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 52,505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 84,632 ವಿದ್ಯಾರ್ಥಿಗಳಲ್ಲಿ 26,496 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.31.31 ರಷ್ಟು ಫಲಿತಾಂಶ ಬಂದಿದೆ. 64,310 ವಿದ್ಯಾರ್ಥಿನಿಯರಲ್ಲಿ 26,009 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು ಶೇ.40.44 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ-2 ರಲ್ಲಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಫಸ್ಟ್ ಬಂದ ರೈತನ ಮಗಳು: IAS ಅಧಿಕಾರಿಯಾಗುವ ಕನಸು - SSLC Topper
ಕಲಾ ವಿಭಾಗದಲ್ಲಿ ಶೇ.22.24, ವಾಣಿಜ್ಯ ವಿಭಾಗದಲ್ಲಿ ಶೇ.22.06 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.55.16 ರಷ್ಟು ಫಲಿತಾಂಶ ಬಂದಿದ್ದು ಒಟ್ಟಾರೆ ಶೇ.35.25 ರಷ್ಟು ಫಲಿತಾಂಶ ದ್ವಿತೀಯ ಪಿಯುಸಿ ಪರೀಕ್ಷೆ-2 ರಲ್ಲಿ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 23 ಕಡೆಯ ದಿನವಾಗಿದ್ದು, ಶುಲ್ಕ ಪಾವತಿ ಮಾಡಿದವರು ಮೇ 22 ರಿಂದ 24 ರವರೆಗೆ ಉತ್ತರ ಪತ್ರಿಕೆ ಪ್ರತಿಗಳ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಸ್ಕ್ಯಾನ್ ಪ್ರತಿ ಪಡೆಯಲು 530 ರೂ. ಹಾಗೂ ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1670 ರೂ.ಗಳ ಶುಲ್ಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ-3 ಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಮೇ 23 ರಿಂದ 28 ರವರೆಗೆ ಅವಕಾಶ ನೀಡಿದ್ದು ದಂಡದೊಂದಿಗೆ ಶುಲ್ಕ ಪಾವತಿಗೆ ಮೇ 29 ರಿಂದ ಮೇ 30 ರವರೆಗೆ ಅವಕಾಶವಿದೆ. ಪರೀಕ್ಷೆ-3 ಕ್ಕೆ ಅರ್ಜಿ ಸಲ್ಲಿಕೆ ಮಾಡಲು ಮರು ಮೌಲ್ಯಮಾಪನದ ಫಲಿತಾಂಶಕ್ಕೆ ಕಾಯದೇ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷೆ ಮಂಜುಶ್ರೀ ತಿಳಿಸಿದ್ದಾರೆ.