ರಾಯಚೂರು: ರಾಜ್ಯದಲ್ಲಿ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರು ಮತಗಟ್ಟೆ ಕೇಂದ್ರಗಳಿಗೆ ಆಗಮಿಸಿ ಮತದಾನ ಮಾಡುತ್ತಿದ್ದರೂ, ಕೆಲವು ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಮಾಡಲು ಮಳೆ ಅಡ್ಡಿಯಾಗಿದೆ. ರಾಯಚೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರಾಯಚೂರು ಗ್ರಾಮೀಣ ಹಾಗೂ ನಗರದಲ್ಲಿ ಒಟ್ಟು 7 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ನಗರದ ಎಪಿಎಂಸಿಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಲು ಬೆಳಕಿನ ವ್ಯವಸ್ಥೆ ಇಲ್ಲದೇ, ಟಾರ್ಚ್ ಹಿಡಿದು ಮತದಾನ ಮಾಡಿರುವ ದೃಶ್ಯ ಕಂಡುಬಂತು. ಜಿಲ್ಲೆಯಲ್ಲಿ ರಾತ್ರಿಯಿಂದ ಮಳೆ ಸುರಿಯುತ್ತಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮತದಾನಕ್ಕೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಸುರೇಶ್ ವರ್ಮಾ ತಿಳಿಸಿದ್ದರು. ಆದರೂ ಬೆಳಕಿನ ವ್ಯವಸ್ಥೆ ಇಲ್ಲದೇ ಮತದಾರರು ಅಡಚಣೆ ಅನುಭವಿಸಬೇಕಾಯಿತು. ಇದಾದ ಬಳಿಕ ಬೆಳಕಿನ ವ್ಯವಸ್ಥೆ ಮಾಡಲಾಯಿತು.
ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮತಗಟ್ಟೆ ಕೇಂದ್ರಗಳಿಗೆ ಬರುತ್ತಿರುವ ಮತದಾರರ ಕಡಿಮೆ ಇರುವುದು ಕಂಡು ಬರುತ್ತಿದೆ. ಸದ್ಯ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ತುಂತುರು ಮಳೆ ಸುರಿಯುತ್ತಿದೆ.
ಅಭ್ಯರ್ಥಿಗಳು ಯಾರು?: ಈಶಾನ್ಯ ಪದವೀಧರ ಚುನಾವಣೆಯಲ್ಲಿ ಬಿಜೆಪಿಯಿಂದ ಅಮರನಾಥ ಪಾಟೀಲ್, ಕಾಂಗ್ರೆಸ್ನಿಂದ ಚಂದ್ರಶೇಖರ ಪಾಟೀಲ್, ಹಾಗೂ ಬಳ್ಳಾರಿ ಜಿಲ್ಲೆಯ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರತಾಪ್ ರೆಡ್ಡಿ ಸೇರಿದಂತೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಮಂಗಳೂರಿನಲ್ಲಿ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಮತದಾರರು: ನೈಋತ್ಯ ಪಧವೀದರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಇಂದು ಮಂಗಳೂರಿನಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ನಗರದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಮತಗಟ್ಟೆಯಲ್ಲಿ ಮುಂಜಾನೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮೊದಲಾದ ಗಣ್ಯರು ತಮ್ಮ ಹಕ್ಕು ಚಲಾಯಿಸಿದರು. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ದ.ಕ ಜಿಲ್ಲೆಯಲ್ಲಿ 8,189 ಮತದಾರರಿದ್ದು, ಇದರಲ್ಲಿ 2,656 ಪುರುಷರು 5,539 ಮಹಿಳೆಯರಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದಲ್ಲಿ 19,971 ಮತದಾರರಿದ್ದು, ಇದರಲ್ಲಿ 8,375 ಪುರುಷರು, 11,596 ಮಹಿಳೆಯರಿದ್ದಾರೆ.
ಮಳೆಯಿಂದಾಗಿ ಬಳ್ಳಾರಿಯಲ್ಲಿ ಪರಿಷತ್ ಚುನಾವಣೆಗೆ ಅಡಚಣೆ ಉಂಟಾಗಿತ್ತು. ತಡರಾತ್ರಿ ಸುರಿದ ಮಳೆಯಿಂದ ನಗರದ ಬಾಲಭಾರತಿ ಶಾಲೆ ಮತಗಟ್ಟೆಯ ಮುಂಭಾಗದಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಮತದಾರರು ಹೈರಾಣಾದರು. 10ಕ್ಕೂ ಹೆಚ್ಚು ಮಂದಿ ಪಾಲಿಕೆ ಸಿಬ್ಬಂದಿ ಯಂತ್ರಗಳ ಸಹಾಯದಿಂದ ನೀರು ಹೊರಹಾಕಿದರು.
ಚಾಮರಾಜನಗರದಲ್ಲಿ ಮತದಾನ: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಬೆಳಗ್ಗೆ 8ರಿಂದಲೇ ಆರಂಭವಾಗಿದ್ದು, ಸುಸೂತ್ರವಾಗಿ ನಡೆಯುತ್ತಿದೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಈ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿವೆ.
ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಹಾಗೂ ಹನೂರಿನಲ್ಲಿ ಒಟ್ಟು 5 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಒಟ್ಟು 1448 ಪುರುಷರು, 733 ಮಹಿಳೆಯರು ಸೇರಿದಂತೆ 2181 ಮತದಾರರಿದ್ದು, ಬ್ಯಾಲೆಟ್ ಪೇಪರ್ ನಲ್ಲಿ ಈ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಚಾಮರಾಜನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಭಾನುವಾರ ಮಸ್ಟರಿಂಗ್ ಕಾರ್ಯ ನಡೆದಿದ್ದು, ಇಂದು ಸಂಜೆ ಡಿ ಮಸ್ಟರಿಂಗ್ ಕಾರ್ಯ ಇರಲಿದೆ.