ಬೆಂಗಳೂರು: ಶಿಕ್ಷಕರು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪಾತ್ರದಾರರು ಎಂದು ಹೇಳುತ್ತೇವೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಖಂಡಿಸುವುದು ಆತ್ಮಹತ್ಯೆಗೆ ಪ್ರಚೋದನೆ ಎಂಬುದಾಗಿ ಹೇಳಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಶಾಲೆಯೊಂದರ ಶಿಕ್ಷಕಿಯರನ್ನು ಆರೋಪಮುಕ್ತಗೊಳಿಸಿ ಆದೇಶಿಸಿತು.
ಬೆಂಗಳೂರು ನಗರದ ಲಕ್ಕಸಂದ್ರದ ಮೇರಿ ಇಮ್ಮಾಕ್ಯುಲೇಟ್ ಹೈಸ್ಕೂಲ್ನ ಪ್ರಾಂಶುಪಾಲರಾದ ಎ.ಸಿ.ಮರಿಯಾ ಲೈಲಾ ಮತ್ತು ಶಿಕ್ಷಕಿ ಫಿಲೋಮಿನಾ ಇಮ್ಯಾನ್ಯುಯಲ್ ಎಂಬವರು ಸಲ್ಲಿಸಿದ್ದ ಕ್ರಿಮಿನಲ್ ಪುನರ್ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಬಸವರಾಜು ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಶಿಕ್ಷಣದ ಕುರಿತು ಗಮನ ಹರಿಸದಿರುವುದು, ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡದಿದ್ದಕ್ಕಾಗಿ ಅಥವಾ ಶಾಲೆ ಹಾಗೂ ತರಗತಿಗಳಿಗೆ ಹಾಜರಾಗುವುದಕ್ಕೆ ವಿದ್ಯಾರ್ಥಿನಿಯರನ್ನು ಶಿಕ್ಷಕರು ಖಂಡಿಸುವುದು ಸಾಮಾನ್ಯ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣ ಸಂಬಂಧ ಅರ್ಜಿದಾರರು/ಆರೋಪಿಗಳ ಸ್ವಯಂಪ್ರೇರಿತ ಹೇಳಿಕೆ ಸೇರಿದಂತೆ ತನಿಖಾಧಿಕಾರಿಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಪೀಠ, ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ಉತ್ತಮ ಭವಿಷ್ಯಕ್ಕಾಗಿ ಶಾಲೆಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಮೃತಪಟ್ಟ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿರಲಿಲ್ಲ. ಹಾಗಾಗಿ, ಅರ್ಜಿದಾರ ಶಿಕ್ಷಕರು ಅವರಿಗಾಗಿ ವಿಶೇಷ ತರಗತಿಗಳನ್ನು ಹಮ್ಮಿಕೊಂಡು ಬೋಧನೆ ಮಾಡಿದ್ದಾರೆ ಎಂಬುದು ತಿಳಿಯಲಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದಲ್ಲಿ ಶಿಕ್ಷಣ ನೀಡುವ ಮೂಲಕ ಶಿಕ್ಷಕರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಆಗಾಗ್ಗೆ ಹೇಳುತ್ತಿರುತ್ತೇವೆ. ಶಿಸ್ತು ವಿದ್ಯಾರ್ಥಿಗಳ ವಿಶ್ಲೇಷಣಾತ್ಮಕ ಪಾತ್ರ ಮತ್ತು ಕೌಶಲ್ಯವನ್ನು ಸುಧಾರಣೆ ಮಾಡಲಿದೆ. ಜತೆಗೆ, ಜೀವನದಲ್ಲಿ ಯಶಸ್ವಿಯಾಗಲು ಪ್ರಮುಖವಾಗಿರಲಿದೆ ಎಂದು ಪೀಠ ತಿಳಿಸಿತು.
ಅಲ್ಲದೆ, ಭಾರತೀಯ ದಂಡ ಸಂಹಿತೆ ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಬೇಕಾದರೆ, ಉದ್ದೇಶಪೂರ್ವಕವಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರಬೇಕು. ಪ್ರಚೋದನೆ ಮತ್ತು ಸಾವಿಗೆ ಅತ್ಯಂತ ಹತ್ತಿರ ದಿನಗಳಲ್ಲಾಗಿರಬೇಕು. ಆದರೆ, ಡೆತ್ನೋಟ್ ಮತ್ತು ಪ್ರಾಸಿಕ್ಯೂಷನ್ ವಾದವನ್ನು ಆಲಿಸಿದ ನ್ಯಾಯಪೀಠ, ವಿದ್ಯಾರ್ಥಿಗಳಿಗೆ ಅರ್ಜಿದಾರ ಆರೋಪಿಗಳು ಕಿರುಕುಳ ನೀಡಿರುವ ಅಂಶವನ್ನು ಸಾಬೀತುಪಡಿಸಲು ವಿಫಲವಾಗಿವೆ. ಜತೆಗೆ, ಅರ್ಜಿದಾರರು ಆತ್ಮಹತ್ಯೆಗೆ ಯಾವ ರೀತಿಯಲ್ಲಿ ಜವಾಬ್ದಾರರು ಎಂಬುದನ್ನು ತಿಳಿಯುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಮಾಡಿದ ಆರೋಪ ಸಾಬೀತಾಗುವುದಿಲ್ಲ. ಆರೋಪ ಸಾಬೀತುಪಡಿಸಲು ದೃಢವಾದ ಪುರಾವೆಗಳಿಲ್ಲ ಎಂದು ಪೀಠ ಹೇಳಿದೆ.
ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬುದನ್ನು ತಿಳಿಯಲು ಸಾಕ್ಷ್ಯಾಧಾರಗಳು ಲಭ್ಯವಿಲ್ಲದಿದ್ದಾಗ ಮೃತರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಸಾಕಾಗುವುದಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿದಾರರನ್ನು ಖುಲಾಸೆಗೊಳಿಸಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಅರ್ಜಿದಾರರಾಗಿರುವ ಇಬ್ಬರೂ ಶಿಕ್ಷಕರು ಮೃತ ವಿದ್ಯಾರ್ಥಿಗಳನ್ನು ಆಗಾಗ್ಗೆ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಇದರಿಂದ ಅವರು ತಾಳ್ಮೆ ಕಳೆದುಕೊಂಡು ಆತ್ಮಹತ್ಯೆಗೆ ಮುಂದಾಗುವಂತಾಗಿದೆ. ಇದೇ ಕಾರಣದಿಂದ ಇಬ್ಬರೂ ಶಿಕ್ಷಕರ ವಿರುದ್ಧ ಡೆತ್ನೋಟ್ ಬರೆದಿಟ್ಟು ಸ್ಯಾಂಕಿ ಟ್ಯಾಂಕ್ನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಅಲ್ಲದೆ, ಮೃತ ವಿದ್ಯಾರ್ಥಿನಿಯರು ವಿಶೇಷ ತರಗತಿಗಳ ಬಳಿಕ ಮನೆಗೆ ಹೋಗದೆ ಹೋಳಿ ಆಡುತ್ತಿದ್ದನ್ನು ಎರಡನೇ ಆರೋಪಿಯಾದ ಶಿಕ್ಷಕಿ ಗಮನಿಸಿದ್ದರು. ಬಳಿಕ ಇಬ್ಬರೂ ವಿದ್ಯಾರ್ಥಿನಿಯರ ಪೋಷಕರ ಮನೆಗೆ ಕರೆ ಮಾಡಿ ತಿಳಿಸಿದ್ದರು. ವಿದ್ಯಾರ್ಥಿನಿಯರಲ್ಲಿ ಒಬ್ಬರ ಪೋಷಕರು ಶಾಲೆಗೆ ಆಗಮಿಸಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಆಸಕ್ತಿ ಇಲ್ಲ. ಹೀಗಾಗಿ ವಿಶೇಷ ತರಗತಿಗಳಿಗೆ ಬಂದರೂ ಯಾವುದೇ ಪ್ರಯೋಜನವಿಲ್ಲ ಎಂದು ವಿವರಿಸಿದ್ದರು ಎಂದು ವಾದ ಮಂಡಿಸಿದ್ದರು.
ಪ್ರಕರಣ: 2014ರ ಮಾರ್ಚ್ 18ರಂದು ಇಬ್ಬರು ವಿದ್ಯಾರ್ಥಿನಿಯರು ನಗರದ ಸ್ಯಾಂಕಿ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಒಬ್ಬ ವಿದ್ಯಾರ್ಥಿನಿಯ ಬ್ಯಾಗ್ನಲ್ಲಿ ಲಭ್ಯವಾಗಿದ್ದ ಡೆತ್ನೋಟ್ನಲ್ಲಿ ಇಬ್ಬರು ಅರ್ಜಿದಾರ ಶಿಕ್ಷರ ಕಿರುಕುಳದ ಕುರಿತು ವಿವರಿಸಿ, ಅವರ ಕಿರುಕುಳದಿಂದ ಆತ್ಮಹತ್ಯೆಗೆ ಮುಂದಾಗಿರುವುದಾಗಿ ಉಲ್ಲೇಖಿಸಲಾಗಿತ್ತು. ಪೋಷಕರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ನಡುವೆ ಪ್ರಕರಣದಿಂದ ತಮ್ಮನ್ನು ಕೈ ಬಿಡಬೇಕು ಎಂದು ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ರಾಜಧಾನಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ತಡೆಯಲು ಮಾರ್ಗಸೂಚಿ ರಚಿಸಿದ ಹೈಕೋರ್ಟ್