ಬೆಂಗಳೂರು: ರಾಜ್ಯವನ್ನು ಪ್ರವಾಸೋದ್ಯಮ ನೆಚ್ಚಿನ ತಾಣವಾಗಿ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ರೋಪ್ ವೇ ಪ್ರವಾಸೋದ್ಯಮಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ 12 ತಾಣಗಳಲ್ಲಿ ರೋಪ್ ವೇ ನಿರ್ಮಾಣಕ್ಕೆ ಈಗಾಗಲೇ ಸಮೀಕ್ಷೆ ಆರಂಭಿಸಲಾಗಿದೆ.
'ಒಂದು ರಾಜ್ಯ ಹಲವು ಜಗತ್ತು' ಎಂಬ ಘೋಷ ವಾಕ್ಯದೊಂದಿಗೆ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿರುವ ಕರ್ನಾಟಕ ರಾಜ್ಯವನ್ನು ಅಗ್ರಗಣ್ಯ ಪ್ರವಾಸಿ ತಾಣವನ್ನಾಗಿ ಮಾಡಲು ಕಸರತ್ತು ನಡೆಯುತ್ತಿದೆ. ಈ ಸಂಬಂಧ ಈಗಾಗಲೇ ಪ್ರವಾಸೋದ್ಯಮ ನೀತಿಗಳನ್ನು ಜಾರಿ ಮಾಡಿದ್ದು, ಹೊಸ ಹೊಸ ಪ್ರಾಸಿಗಳ ತಾಣಗಳ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅದರ ಭಾಗವಾಗಿ ರಾಜ್ಯ ಸರ್ಕಾರ ಕರ್ನಾಟಕವನ್ನು ಮುಂಚೂಣಿ ರೋಪ್ ವೇ ಪ್ರವಾಸಿ ತಾಣವನ್ನಾಗಿ ಮಾಡಲು ಮುಂದಾಗಿದೆ. ಈ ಸಂಬಂಧ ರಾಜ್ಯದ ಜನಪ್ರಿಯ ಹಿಲ್ ಸ್ಟೇಷನ್, ಗುಡ್ಡದಲ್ಲಿನ ಧಾರ್ಮಿಕ ಕೇಂದ್ರಗಳಿಗೆ ರೋಪ್ ವೇ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.
ರೋಪ್ ವೇ ಮೂಲಕ ಪ್ರವಾಸಿಗರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಇದಕ್ಕಾಗಿ ಸರ್ಕಾರ ಕರ್ನಾಟಕ ಪ್ರವಾಸೋದ್ಯಮ ರೋಪ್ ವೇ ಮಸೂದೆ 2024ನ್ನು ವಿಧಾನಮಂಡಲದಲ್ಲಿ ಮಂಡಿಸಲು ತೀರ್ಮಾನಿಸಿದೆ. ಆ ಮೂಲಕ ರೋಪ್ ವೇ ಪ್ರವಾಸೋದ್ಯಮಕ್ಕೆ ರೂಪುರೇಷೆ ರೂಪಿಸಿದೆ. ರಾಜ್ಯದಲ್ಲಿ ಪಿಪಿಪಿ (ರ್ವಜನಿಕ ಖಾಸಗಿ ಸಹಭಾಗಿತ್ವ) ಮಾಡೆಲ್ನಲ್ಲಿ ರೋಪ್ ವೇ ನಿರ್ಮಾಣಕ್ಕೆ ಸರ್ಕಾರ ತೀರ್ಮಾನಿಸಿದೆ. ಸುಮಾರು 30 ವರ್ಷಗಳ ಅವಧಿಗೆ ರೋಪ್ ವೇ ಗುತ್ತಿಗೆದಾರರಿಗೆ ಲೀಸ್ ನೀಡಲು ಮುಂದಾಗಿದೆ.
ರಾಜ್ಯದ 12 ಕಡೆ ರೋಪ್ ವೇ ನಿರ್ಮಾಣಕ್ಕೆ ಸಮೀಕ್ಷೆ: ರಾಜ್ಯದ 12 ಕಡೆ ರೋಪ್ ವೇ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ. ಪಿಪಿಪಿ ಆಧಾರದಲ್ಲಿ ರೋಪ್ ವೇ ನಿರ್ಮಿಸಿ, 30 ವರ್ಷಗಳ ಅವಧಿಗೆ ಲೀಸ್ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಸುಮಾರು 12 ಕಡೆಗಳಲ್ಲಿ ರೋಪ್ ವೇ ನಿರ್ಮಾಣಕ್ಕಾಗಿ ಖಾಸಗಿ ಗುತ್ತಿಗೆ ಸಂಸ್ಥೆಗಳಿಂದ Expression Of Interest (EOI) ಆಹ್ವಾನಿಸಲಾಗಿದೆ. ಕಾರ್ಯಸಾಧು ವರದಿ, ತಾಂತ್ರಿಕ ಅಧ್ಯಯನದ ಬಳಿಕ ರೋಪ್ ವೇ ನಿರ್ಮಾಣದ ಅಂತಿಮ ವರದಿ ಸಿದ್ದವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಬೆಂಗಳೂರು ಹೊರವಲಯದಲ್ಲಿನ ನಂದಿ ಬೆಟ್ಟದಲ್ಲಿ ಈಗಾಗಲೇ ರೋಪ್ ವೇ ಕಾಮಗಾರಿ ಆರಂಭವಾಗಿದೆ. ಉಳಿದಂತೆ ಕೊಪ್ಪಳದ ಅಂಜನಾದ್ರಿ ಬೆಟ್ಟ, ಮಧುಗಿರಿ ಏಕಶಿಲಾ ಬೆಟ್ಟ, ಕೊಡಗಿನ ಮಲ್ಲಳ್ಳಿ ಫಾಲ್ಸ್, ಬೆಳಗಾವಿಯ ಸವದತ್ತಿ ಯಲ್ಲಮ್ಮ ಗುಡ್ಡ, ಹುಬ್ಬಳ್ಳಿಯ ನೃಪತುಂಗ ಭದ್ರ ಬೆಟ್ಟ, ಗದಗಿನ ಹೊಳಲಮ್ಮ ದೇವಸ್ಥಾನ, ಗದಗ ಜಿಲ್ಲೆ ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನ, ಹಾವೇರಿಯ ದೇವರಗುಡ್ಡ, ಬಳ್ಳಾರಿ ಕೋಟೆ, ಯಾದಗಿರಿ ಕೋಟೆ, ಯಾದಗಿರಿ ಮೈಲಾರ ಬೆಟ್ಟದಲ್ಲಿ ರೋಪ್ ವೇ ಮಾಡಲು ತೀರ್ಮಾನಿಸಲಾಗಿದೆ.
ರೋಪ್ ವೇ ನಿರ್ಮಾಣ ಕಾಮಗಾರಿಗೆ ಸುಮಾರು 80-110 ಕೋಟಿ ರೂ. ಅಂದಾಜಿಸಲಾಗಿದೆ. ಸವಸತ್ತಿ ಯಲ್ಲಮ್ಮ ಗುಡ್ಡ ಹಾಗೂ ಯಾದಗಿರಿ ಮೈಲಾರಲಿಂಗೇಶ್ವರ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ಸಮೀಕ್ಷೆ ಪ್ರಗತಿಯಲ್ಲಿದೆ. ಉಳಿದ ತಾಣಗಳಲ್ಲಿ ಸಮೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ಏಳೆಂಟು ತಿಂಗಳಲ್ಲಿ ಸಮೀಕ್ಷೆ, ಕಾರ್ಯಸಾಧ್ಯತಾ ವರದಿ ಸಿದ್ಧವಾಗಿ, ಕಾಮಗಾರಿಗಾಗಿ ಟೆಂಡರ್ ಆಹ್ವಾನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಸದ್ಯ ನಂದಿ ಬೆಟ್ಟ ರೋಪ್ ವೇ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ನಂದಿ ಬೆಟ್ಟದಲ್ಲು ರೋಪ್ ವೇಯ 2.93 ಕಿ.ಮೀ. ಉದ್ದದ ಮೇಲ್ಭಾಗದ ಟರ್ಮಿನಲ್ಗಾಗಿ ಎರಡು ಎಕರೆ ಜಮೀನು ಹಂಚಿಕೆ ಮಾಡಲಾಗಿದೆ. 2023ಕ್ಕೆ ಯೋಜನೆಗೆ ಶಂಕು ಸ್ಥಾಪನೆ ಮಾಡಲಾಗಿತ್ತು. ಆದರೆ, ತೋಟಗಾರಿಕೆ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ನಡುವೆ ಭೂಮಿ ಹಸ್ತಾಂತರ ಪ್ರಕ್ರಿಯೆ ತಡವಾದ ಕಾರಣ ಕಾಮಗಾರಿ ಆರಂಭ ವಿಳಂಬವಾಗಿದೆ. ನಂದಿ ಬೆಟ್ಟದಲ್ಲಿ ಸುಮಾರು 93 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ನಿರ್ಮಾಣ ಮಾಡಲಾಗುತ್ತಿದೆ.
ರೋಪ್ ವೇಗಾಗಿ ಪ್ರತ್ಯೇಕ ಕಾನೂನು: ರಾಜ್ಯ ಸರ್ಕಾರ ರೋಪ್ ವೇಗಳ ನಿರ್ವಹಣೆ, ಸುರಕ್ಷತೆ, ಪರವಾನಿಗೆ, ಮಾನದಂಡ ಸಂಬಂಧ ಪ್ರತ್ಯೇಕ ಕಾಯ್ದೆ ತರಲು ತೀರ್ಮಾನಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಪ್ರವಾಸೋದ್ಯಮ ರೋಪ್ ವೇ ಮಸೂದೆ 2024ನ್ನು ಮಂಡಿಸಲಿದೆ. ಈ ಮಸೂದೆ ಮೂಲಕ ರಾಜ್ಯದ ರೋಪ್ ವೇಗಾಗಿ ಕಾನೂನು ರೂಪಿಸಲಾಗುತ್ತದೆ. ಈ ಮಸೂದೆಯಡಿ ರೋಪ್ ವೇ ಗಾಗಿ ಸಲಹಾ ಪ್ರಾಧಿಕಾರವನ್ನು ರಚಿಸಲಾಗುವುದು. ಜೊತೆಗೆ ಪರವಾನಿಗೆ ಪ್ರಾಧಿಕಾರವನ್ನು ರಚಿಸಲಾಗುವುದು. ರೋಪ್ ವೇ ಪರಿಶೀಲನೆಗಳಿಗಾಗಿ ಮುಖ್ಯ ರೋಪ್ ವೇ ಇನ್ಸ್ಪೆಕ್ಟರ್ ಮತ್ತು ಜಿಲ್ಲಾ ರೋಪ್ ವೇ ಇನ್ಸ್ಪೆಕ್ಟರ್ ನೇಮಕ ಮಾಡಲಾಗುವುದು.
ರೋಪ್ ವೇ ಪರವಾನಿಗೆ ಪ್ರಾಧಿಕಾರವು ಸಲಹಾ ಪ್ರಧಿಕಾರ, ಜಿಲ್ಲಾ ಭೂ ವಿಜ್ಞಾನಿ, ಜಿಲ್ಲಾ ಪರಿಸರ ಅಧಿಕಾರಿ, ಅರಣ್ಯ ಅಧಿಕಾರಿ, ಇಂಧನ ಇಲಾಖೆಯ ಅನುಮೋದನೆ ಪಡೆದ ಬಳಿಕ ರೋಪ್ ವೇಗೆ ಪರವಾನಿಗೆ ನೀಡಬೇಕು. ಜೊತೆಗೆ ಪ್ರಾಧಿಕಾರ ರೋಪ್ ವೇ ನಿರ್ಮಾಣ ಹಾಗೂ ನಿರ್ವಹಣೆ ಗುತ್ತಿಗೆ ಸಂಸ್ಥೆಯಿಂದ ಪ್ರಯಾಣಿಕರು, ಸಾರ್ವಜನಿಕರು, ಸಿಬ್ಬಂದಿಗಳಿಗೆ ವಿಮೆ ಮಾಡಿಸುವ ಬಗ್ಗೆ ಮುಚ್ಚಳಿಕೆ ಪಡೆಯಬೇಕು. ಪರವಾನಿಗೆ ಪಡೆಯದೇ ರೋಪ್ ವೇ ನಿರ್ಮಾಣವನ್ನು ಅನಧಿಕೃತವಾಗಲಿದೆ. ರೋಪ್ ವೇ ನಿರ್ಮಿಸುವ ಸಂಸ್ಥೆಗಳು ಪ್ರಸ್ತಾಪಿತ ರೋಪ್ ವೇಯ ವಿವರಗಳನ್ನು ಎರಡು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಬೇಕು.
ರೋಪ್ ವೇ ಶುಲ್ಕ: ಪ್ರಾಧಿಕಾರದ ಅನುಮೋದನೆಯೊಂದಿಗೆ ರೋಪ್ ವೇ ಶುಲ್ಕವನ್ನು ನಿಗದಿ ಮಾಡುವ ಅಧಿಕಾರ ರೋಪ್ ವೇ ನಿರ್ಮಾಣ ಗುತ್ತಿಗೆ ಸಂಸ್ಥೆಗೆ ಇರಲಿದೆ. ಪ್ರಸ್ತಾಪಿತ ಮಸೂದೆ ಪ್ರಕಾರ ಗುತ್ತಿಗೆ ಸಂಸ್ಥೆಗಳು ಕಾಯ್ದೆಯ ನಿಯಮ ಉಲ್ಲಂಘಿಸಿದರೆ ಗರಿಷ್ಠ 1,000 ರೂ. ದಂಡ ವಿಧಿಸಲಾಗುತ್ತದೆ. ಪದೇ ಪದೆ ನಿಯಮ ಉಲ್ಲಂಘಿಸಿದರೆ ನಿತ್ಯ 250 ರೂ. ನಂತೆ ಹೆಚ್ಚುವರಿ ದಂಡ ವಿಧಿಸಲಾಗುವುದು.
ರೋಪ್ ವೇ ಯೋಜನೆ ಬಗ್ಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, "ಈಗ 12 ಕಡೆ ರೋಪ್ ವೇಗಳ ನಿರ್ಮಾಣಕ್ಕೆ ಸಮೀಕ್ಷೆಗೆ ಆದೇಶ ಮಾಡಿದ್ದೇವೆ. ನಂದಿ ಬೆಟ್ಟದಲ್ಲಿ ರೋಪ್ ವೇ ಕೆಲಸ ಈಗಾಗಲೇ ಆರಂಭವಾಗಿದೆ. ಪಿಪಿಪಿ ಮಾದರಿಯಲ್ಲಿ ರೋಪ್ ವೇ ನಿರ್ಮಾಣ ಕಾರ್ಯ ಮಾಡಲು ತೀರ್ಮಾನಿಸಿದ್ದೇವೆ. ಸವದತ್ತಿ, ಯಾದಗಿರಿಯಲ್ಲಿನ ರೋಪ್ ವೇ ಯೋಜನೆ ಸಂಬಂಧ ಸರ್ವೆ ಕೆಲಸ ಆರಂಭವಾಗಿದೆ. ಸುಮಾರು 12 ಕಡೆ ರೋಪ್ ವೇ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯಾದ್ಯಂತ ರೋಪ್ ವೇ ನಿರ್ಮಾಣ, ಸುರಕ್ಷತೆ, ಪರವಾನಗಿ, ಮಾನದಂಡ, ನಿರ್ವಹಣೆ ಸಂಬಂಧ ನಿಯಮ ರೂಪಿಸಲು ಕರ್ನಾಟಕ ಪ್ರವಾಸೋದ್ಯಮ ರೋಪ್ ವೇ ಮಸೂದೆ ಮಂಡನೆ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.