ಬೆಂಗಳೂರು: ಎಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಿರ್ಣಾಯಕವಾದ ಸಿಇಟಿ ಪರೀಕ್ಷೆ ರಾಜ್ಯಾದ್ಯಂತ ಇಂದಿನಿಂದ ಅಂದರೆ ಏ. 18ರ ಗುರುವಾರ ಮತ್ತು ಏ. 19ರ ಶುಕ್ರವಾರ ನಡೆಯಲಿದೆ. ಒಟ್ಟು 737 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಬಾರಿ 3,49,637 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಬಿಗಿಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಸಿಇಟಿ ಕರ್ತವ್ಯಕ್ಕೆ ಒಟ್ಟು 20,300 ಸಿಬ್ಬಂದಿ ನಿಯೋಜಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 167 ಪರೀಕ್ಷಾ ಕೇಂದ್ರಗಳಿದ್ದು, ಈ ಬಾರಿ 648 ವಿಶೇಷ ಚೇತನ ಅಭ್ಯರ್ಥಿಗಳು ಸಿಇಟಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ: ಕಳೆದ ವರ್ಷಕ್ಕಿಂತ ಈ ಬಾರಿ ಒಂದು ಲಕ್ಷದಷ್ಟು ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದಕ್ಕೆ ವ್ಯಾಪಕ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರುವಾರ ಜೀವಶಾಸ್ತ್ರ ಮತ್ತು ಗಣಿತ ಹಾಗೂ ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10.30ಕ್ಕೆ ಮತ್ತು ಮಧ್ಯಾಹ್ನ 2.30ಕ್ಕೆ ಆರಂಭವಾಗುವ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಸಾಕಷ್ಟು ಮುಂಚಿತವಾಗಿಯೇ ಹಾಜರಿರಬೇಕು. ಬೆಳಗ್ಗೆ 10.40 ಮತ್ತು ಮಧ್ಯಾಹ್ನ 2.40ಕ್ಕೆ ಮೂರನೇ ಬಾರಿಗೆ ಬೆಲ್ ಬಾರಿಸಿದ ಬಳಿಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಪ್ರಶ್ನೆಪತ್ರಿಕೆ ಇರಲಿದೆ. ಒಂದು ವೇಳೆ ಅಭ್ಯರ್ಥಿಗಳಿಗೆ ಏನಾದರೂ ಗೊಂದಲ ಉಂಟಾದಲ್ಲಿ ಇಂಗ್ಲಿಷ್ ಆವೃತ್ತಿಯನ್ನೇ ಅಂತಿಮವೆಂದು ಪರಿಗಣಿಸಬೇಕು. ಈ ವಿಚಾರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಪ್ರಶ್ನೆಗಳಿಗೆ ಅವಕಾಶ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳ ಗೊಂದಲ ಪರಿಹಾರ: ಕಲಬುರಗಿ ಮುಂತಾದ ಉತ್ತರ ಕರ್ನಾಟಕದ ಭಾಗಗಳ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಗೊಂದಲವನ್ನು ಬಗೆಹರಿಸಿದ್ದು, ಸಾಧ್ಯವಾದಷ್ಟು ವಿದ್ಯಾರ್ಥಿಗಳಿಗೆ ಅವರ ಸಮೀಪದ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯ ಝಳ ಇರುವುದರಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಕೆಡೆಟ್‌ಗಳು ಪರೀಕ್ಷೆಯು ಸುಗಮವಾಗಿ ನಡೆಯಲು ಸಹಕರಿಸಲಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ಅವರು ನಮೂದಿಸಿರುವ ಜಿಲ್ಲೆಗಳಿಗೆ ಪರೀಕ್ಷೆ ಬರೆಯುವ ರೀತಿ ಸ್ಥಳಗಳನ್ನು ಅಲಾಟ್ ಮಾಡಲಾಗಿದೆ.
ಒಂದು ಪರೀಕ್ಷಾ ಕೊಠಡಿಯಲ್ಲಿ 16 ಆವೃತ್ತಿಗಳ ಪ್ರಶ್ನೆ ಪತ್ರಿಕೆಗಳು ಇರಲಿದ್ದು, ನಕಲು ಮಾಡಲು ಅವಕಾಶ ಆಗದಂತೆ ಯೋಜನೆ ರೂಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ಕೂಡ ಇರಲಿದೆ ಎಂದು ಅವರು ತಿಳಿಸಿದರು.
ಏ.20ರಂದು ಹೊರನಾಡು ಕನ್ನಡಿಗರಿಗೆ ಪರೀಕ್ಷೆ: ಇದೇ 20ರಂದು ಬೆಳಗಾವಿ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಬೆಳಗ್ಗೆ 11.30ರಿಂದ ಮ. 12.30ರ ವರೆಗೆ ಕನ್ನಡ ಪರೀಕ್ಷೆ ನಡೆಯಲಿದೆ. ಈ ಸಲ ಒಟ್ಟು 1,545 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾರ್ಥಿಗಳಿಗೆ ಸೂಚನೆಗಳು:
- ಪ್ರವೇಶಪತ್ರ ಮತ್ತು ಗುರುತಿನ ಪತ್ರದೊಂದಿಗೆ ಬರುವುದು ಕಡ್ಡಾಯ.
- ನೀಲಿ ಅಥವಾ ಕಪ್ಪು ಬಣ್ಣದ ಪೆನ್ ಮಾತ್ರ ಬಳಕೆಗೆ ಅವಕಾಶ.
- ತುಂಬುದೋಳಿನ ಅಂಗಿ ಧರಿಸಿಕೊಂಡು ಬರುವಂತಿಲ್ಲ.
- ಮೊಬೈಲ್, ಬ್ಲೂಟೂತ್, ಟ್ಯಾಬ್ಲೆಟ್, ಕೈಗಡಿಯಾರ, ಕ್ಯಾಲಕ್ಯುಲೇಟರ್, ಆಭರಣ, ನೋಟ್ ಪ್ಯಾಡ್, ಐ-ಪಾಡ್, ಇಯರ್ ಫೋನ್ ಇತ್ಯಾದಿಗಳನ್ನು ತರುವಂತಿಲ್ಲ.
- ಒಮ್ಮೆ ಉತ್ತರವನ್ನು ಗುರುತು ಮಾಡಿದ ಬಳಿಕ ಅದನ್ನು ಅಳಿಸಲು ಅವಕಾಶವಿರುವುದಿಲ್ಲ.
- ಓಎಂಆರ್ ಶೀಟ್‌ನಲ್ಲಿ ಪ್ರವೇಶಪತ್ರ ಸಂಖ್ಯೆ, ಪ್ರಶ್ನೆಪತ್ರಿಕೆಯ ವರ್ಶನ್ ಕೋಡ್ ನಮೂದಿಸುವುದು ಕಡ್ಡಾಯ.
- ಓಎಂಆರ್ ಶೀಟ್‌ನ ಕೆಳಭಾಗದಲ್ಲಿ ಅಭ್ಯರ್ಥಿಗಳು ಮರೆಯದೆ ಸಹಿ ಮಾಡಬೇಕು.
- ಓಎಂಆರ್ ಶೀಟ್‌ನಲ್ಲಿರುವ ಟೈಮಿಂಗ್ ಮಾರ್ಕ್ ಮೇಲೆ ಏನನ್ನೂ ಬರೆಯುವುದಾಗಲಿ, ಗೀಚುವುದಾಗಲಿ ಮಾಡಬೇಡಿ.
- ಕೋವಿಡ್ ಇಲ್ಲದ ಕಾರಣ ಮಾಸ್ಕ್ಗೆ ಅವಕಾಶವಿಲ್ಲ
- ಕುಡಿಯುವ ನೀರನ್ನು ಪಾರದರ್ಶಕ ಬಾಟಲಿಯಲ್ಲಿ ತರಲು ಅವಕಾಶವಿದೆ.
ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್.. ನೀಟ್ ಪರೀಕ್ಷೆ ಕಟ್ ಆಫ್ ಅಂಕ ರದ್ದು, ಎಲ್ಲರಿಗೂ ಕೌನ್ಸೆಲಿಂಗ್ಗೆ ಅರ್ಹತೆ