ಬೆಂಗಳೂರು: ಅಧಿವೇಶನದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಪ್ರಕರಣದ ಬಗ್ಗೆ ಪ್ರತಿಪಕ್ಷಗಳ ಆರೋಪಕ್ಕೆ ರಕ್ಷಣಾತ್ಮಕವಾಗಿರುವ ಬದಲು ಪ್ರಬಲವಾಗಿ ಎದಿರೇಟು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರು ಮತ್ತು ಶಾಸಕರಿಗೆ ಸೂಚನೆ ನೀಡಿದ್ದಾರೆ.
ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ''ಸದನದಲ್ಲಿ ಪ್ರತಿಪಕ್ಷಗಳ ವಾಗ್ದಾಳಿಗೆ ಗಟ್ಟಿಯಾಗಿ ಪ್ರತ್ಯುತ್ತರ ನೀಡಬೇಕು. ನಾವು ಬಿಜೆಪಿ ಹೇಳಿದ್ದನ್ನು ಕೇಳಿಕೊಂಡು ಕೂತಿದ್ದೇವೆ. ಈ ವಾರ ಡಿಫೆನ್ಸಿವ್ ಆಗಿ ಮುಂದುವರೆದಿದ್ದು ಸಾಕು. ಇನ್ಮುಂದೆ ನೇರಾನೇರ ಬಿಜೆಪಿಗೆ ಟಕ್ಕರ್ ಕೊಡಬೇಕು. ಬಿಜೆಪಿಯವರು ಹೇಳಿದ್ದನ್ನು ಕೇಳಿಕೊಂಡು ಕೂರಲು ನಾವು ಸದನಕ್ಕೆ ಹೋಗುವುದಲ್ಲ. ಎಲ್ಲ ಶಾಸಕರು ಸಚಿವರ ಹಾಜರಾತಿ ಕಡ್ಡಾಯ. ಬಿಜೆಪಿಯ ಲೋಪದೋಷಗಳನ್ನು ಎತ್ತಿ ಹಿಡಿದು ತೋರಿಸಬೇಕು'' ಎಂದು ಸಲಹೆ ಕೊಟ್ಟಿದ್ದಾರೆ.
ಮುಡಾ ಪ್ರಕರಣ ಸಂಬಂಧ ಸಭೆಯಲ್ಲಿ ಸ್ಪಷ್ಟನೆ ನೀಡಿದ ಸಿಎಂ, ''ಬಿಜೆಪಿ ಮತ್ತು ಜೆಡಿಎಸ್ ನಾಯಕರು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಯಾವುದೇ ತೊಂದರೆ ಇಲ್ಲ. ಆದರೂ, ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಮುಡಾದಲ್ಲಿ ನಮ್ಮ ಕುಟುಂಬ ಯಾವುದೇ ಅಕ್ರಮ ಎಸಗಿಲ್ಲ. ಕಾನೂನು ವ್ಯಾಪ್ತಿ ಮೀರಿ ನಾವು ಎಲ್ಲೂ, ಏನೂ ಮಾಡಿಲ್ಲ" ಎಂದರು.
![ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ, ಡಿಸಿಎಂ ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.](https://etvbharatimages.akamaized.net/etvbharat/prod-images/19-07-2024/21989140_thum1.jpg)
ಇದೇ ವೇಳೆ, "ವಾಲ್ಮೀಕಿ ಪ್ರಕರಣದಲ್ಲೂ ಸರ್ಕಾರದಿಂದ ಯಾವುದೇ ತಪ್ಪಾಗಿಲ್ಲ. ಬಿಜೆಪಿ, ಜೆಡಿಎಸ್ ಮೈತ್ರಿ ನಾಯಕರು ಸರ್ಕಾರಕ್ಕೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಈ ವಿಚಾರದಲ್ಲಿ ಶಾಸಕರಿಗೆ ಯಾವುದೇ ಅನುಮಾನ ಬೇಡ'' ಎಂಬುದಾಗಿ ವಿವರಿಸಿದ್ಧಾರೆ ಎಂದು ಮೂಲಗಳು ತಿಳಿಸಿವೆ.
ಸಚಿವರ ವಿರುದ್ಧ ಮತ್ತೆ ಶಾಸಕರ ಆಕ್ರೋಶ: ಕೆಲವು ಸಚಿವರು ನಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿಲ್ಲ. ಕ್ಷೇತ್ರದ ಕೆಲಸಗಳ ಬಗ್ಗೆ ಮಾತನಾಡಲು ಭೇಟಿಗೆ ಅವಕಾಶವನ್ನೇ ಕೊಡುತ್ತಿಲ್ಲ. ಮುಖ ಕೊಟ್ಟು ಮಾತನಾಡುವ ಸೌಜನ್ಯವನ್ನೂ ತೋರುತ್ತಿಲ್ಲ. ವರ್ಗಾವಣೆ ವಿಚಾರವಾಗಿಯೂ ಸ್ಪಂದಿಸುತ್ತಿಲ್ಲ. ನಮಗೆ ಅನುದಾನ ಇಲ್ಲದೆ ಕ್ಷೇತ್ರದಲ್ಲಿ ಜನರಿಗೆ ಉತ್ತರ ಹೇಳೋದೇ ಕಷ್ಟ. ಕಳೆದ ಒಂದು ವರ್ಷದಿಂದಲೂ ಗ್ಯಾರಂಟಿ ಕಾರಣಕ್ಕೆ ಅನುದಾನ ಕೇಳಿರಲಿಲ್ಲ. ಆದರೆ, ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೊಡಬೇಕು. ಇಲ್ಲದಿದ್ದರೆ ಕ್ಷೇತ್ರದಲ್ಲಿ ಓಡಾಡುವುದು ಕಷ್ಟವಾಗುತ್ತದೆ ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.
ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡಲು ಶಾಸಕರ ಒತ್ತಾಯ: ಅಲ್ಲದೇ, ಏಳೆಂಟು ಸಚಿವರನ್ನು ಈಗಲೇ ಸಚಿವ ಸಂಪುಟದಿಂದ ಕೈಬಿಟ್ಟರೆ ಒಳ್ಳೆಯದು ಎಂದು ಶಾಸಕರು ಒತ್ತಾಯಿಸಿದ್ದಾರೆ. 136 ಶಾಸಕರ ಮೊಬೈಲ್ ನಂಬರ್ ಇಟ್ಟುಕೊಳ್ಳಲೂ ಕೂಡ ಸಚಿವರಿಗೆ ಕಷ್ಟವೇ?. ಕೆಲವು ಸಚಿವರ ಕಾರ್ಯವೈಖರಿ ಸರಿಪಡಿಸಿಕೊಳ್ಳಬೇಕು. ಎಷ್ಟೇ ಬಾರಿ ಹೇಳಿದರೂ ವರ್ತನೆ ಬದಲಾಗಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
ಅನುದಾನಕ್ಕೆ ಬಿಗಿ ಪಟ್ಟು: ಅನುದಾನ ಬಿಡುಗಡೆಗೆ ಸಚಿವರಿಗೆ ನೀವೇ ಖುದ್ದಾಗಿ ಹೇಳಿ ಎಂದು ಸಿಎಂಗೆ ಶಾಸಕರು ಒತ್ತಾಯಿಸಿದ್ದಾರೆ. ಅನುದಾನಕ್ಕಾಗಿ ಒಂದು ವರ್ಷದಿಂದ ಕಾದಿದ್ದೇವೆ. ಇನ್ನಷ್ಟು ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಅನುದಾನಕ್ಕಾಗಿ ಶಾಸಕರು ಬಿಗಿಪಟ್ಟು ಹಿಡಿದರು ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ, ಸಾರ್ವತ್ರಿಕ ವರ್ಗಾವಣೆಯಲ್ಲಿ ಸಚಿವರುಗಳು ತಮ್ಮ ವರ್ಗಾವಣೆ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಏಕಪಕ್ಷೀಯವಾಗಿ ವರ್ಗಾವಣೆ ಮಾಡುತ್ತಿದ್ದಾರೆ ಎಂದು ವಿರುದ್ಧ ಕೆಲ ಶಾಸಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ