ಬಳ್ಳಾರಿ: ಸಂಡೂರು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಇಂದು ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 2.30ಕ್ಕೆ ಚುನಾವಣಾಧಿಕಾರಿ ಕೊಠಡಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು, ಕೇಂದ್ರದ ಮಾಜಿ ಸಚಿವ ಭಗವಂತ ಖೂಬ ಹಾಗು ಎಂಎಲ್ಸಿ ನವೀನ್ ಸೇರಿ ಇತರರು ಇದ್ದರು.
ಇದಕ್ಕೂ ಮುನ್ನ ಬಂಗಾರು ಹನುಮಂತು ರೋಡ್ ಶೋ ಪ್ರದರ್ಶನ ನಡೆಸಿದರು. ಸಂಡೂರಿನ ಎಪಿಎಂಸಿ ಗೇಟ್‌ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಜಾನಪದ ಮೇಳ, ಡೊಳ್ಳು, ಭಾಜ-ಭಜಂತ್ರಿ ಗಮನ ಸೆಳೆಯಿತು.
ಸಂಡೂರು ಪಟ್ಟಣದಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿ, "ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ನೀವೆಲ್ಲರೂ ಸಂಕಲ್ಪ ಮಾಡಿ ಬಂದಿದ್ದೀರಿ. ಇದೇ ಉತ್ಸಾಹ ಮತದಾನದ ದಿನದವರೆಗೂ ಇರಲಿ. ದೊಡ್ಡ ಬಹುಮತದೊಂದಿಗೆ ಹನುಮಂತು ಅವರನ್ನು ಗೆಲ್ಲಿಸಿ. 13ರಂದು ನಡೆಯುವ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಸಂಡೂರಿನಲ್ಲಿ ಕಮಲ ಅರಳಿಸುವ ಸಂಕಲ್ಪ ಮಾಡಿ" ಎಂದು ಕರೆ ನೀಡಿದರು.
ಜನಾರ್ದನ ರೆಡ್ಡಿ ಮಾತನಾಡಿ, "44 ಬೂತ್ಗಳಲ್ಲಿ ಜನ ಸ್ವಯಂಪ್ರೇರಿತರಾಗಿ ಬಂದಿರೋದನ್ನು ನೋಡಿದ್ದೀರಿ. ಕಾಂಗ್ರೆಸ್ನ ಎಷ್ಟೋ ಹೇಳಿಕೆಗಳು ಹುಸಿಯಾಗಿವೆ. ಕರುಣಾಕರ ರೆಡ್ಡಿ ಪರ ಬಳ್ಳಾರಿಯಲ್ಲಿ ಪ್ರಚಾರ ಮಾಡಿದ್ದೇನೆ. 250 ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದೇವೆ. ಕಾಂಗ್ರೆಸ್‌ನವರು ಹಾಕಿದ ರಸ್ತೆ ಕಿತ್ತು ಹೋಗ್ತಿವೆ. ಡಿಎಂಎಫ್, ಸಿಎಸ್ಆರ್ ಫಂಡ್ ದುರುಪಯೋಗವಾಗಿದೆ ಅಂತ ಹೇಳ್ತಾರೆ. ನಾನು ನನ್ನ ಗೆಳೆಯ ಶ್ರೀರಾಮುಲು ಇಬ್ಬರೂ ಪ್ರಚಾರ ಮಾಡ್ತೀವಿ" ಎಂದರು.
ಇದನ್ನೂ ಓದಿ: ಕೋಟಿ ಒಡೆಯರಾದರೂ ಸಾಲಗಾರರು, ಅಫಿಡವಿಟ್‌ನಲ್ಲಿ ಬಹಿರಂಗ; ಸಂಡೂರಿನ ಕೈ ಅಭ್ಯರ್ಥಿಗಿಂತ ಕಮಲ ಅಭ್ಯರ್ಥಿ ಅತ್ಯಧಿಕ ಶ್ರೀಮಂತ!