ಬೆಳಗಾವಿ : ಮಂತ್ರ ಮಾಂಗಲ್ಯ, ಅದ್ಧೂರಿ ಮದುವೆ, ಪ್ರೇಮ ವಿವಾಹಗಳನ್ನು ನೀವೆಲ್ಲಾ ನೋಡಿದ್ದಿರಿ. ಆದರೆ, ಬೆಳಗಾವಿಯಲ್ಲಿ ಕನ್ನಡ ಮದುವೆಯೊಂದು ನಡೆದಿದೆ. ನವ ದಾಂಪತ್ಯಕ್ಕೆ ಕಾಲಿಟ್ಟ ಕನ್ನಡಿಗ, ಕನ್ನಡತಿಯ ಕನ್ನಡಾಭಿಮಾನಕ್ಕೆ ನೆರೆದಿದ್ದ ಜನರು ಸಂತಸಗೊಂಡಿದ್ದಾರೆ.
ಬೆಳಗಾವಿಯ ಕೆ. ಹೆಚ್ ಪಾಟೀಲ ಸಭಾಭವನದಲ್ಲಿ ಇಂಥದ್ದೊಂದು ಅಪರೂಪದ ಕನ್ನಡ ಮದುವೆಗೆ ಸಾಕ್ಷಿಯಾಗಿದ್ದು ಶಿಂಧೊಳ್ಳಿಯ ದೀಪಕ ಮುಂಗರವಾಡಿ, ಕಿತ್ತೂರು ತಾಲೂಕಿನ ದೇವಗಾಂವದ ರಾಜೇಶ್ವರಿ ವಾಂಗಿ ಅವರ ಜೋಡಿ. ಬೆಳಗಾವಿ ರಾಯಣ್ಣ ಫೇಸ್ಬುಕ್ ಪುಟದ ಅಡ್ಮಿನ್ ಆಗಿರುವ ದೀಪಕ ಬೆಳಗಾವಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈಗ ಕನ್ನಡ ಮದುವೆಗೆ ಮುನ್ನುಡಿ ಬರೆಯುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇಮ್ಮಡಿ ಪುಲಿಕೇಶಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೂರ್ತಿ, ವಿಶ್ವಗುರು ಬಸವಣ್ಣ, ಪುಟ್ಟರಾಜ ಗವಾಯಿ, ಪೂರ್ಣಚಂದ್ರ ತೇಜಸ್ವಿ, ಸಾಲು ಮರದ ತಿಮ್ಮಕ್ಕ ಅವರ ಭಾವಚಿತ್ರಗಳು ಇಲ್ಲಿ ರಾರಾಜಿಸಿದವು. ಎಲ್ಲೆಲ್ಲೂ ಕನ್ನಡ ಬಾವುಟಗಳು, ಹಳದಿ-ಕೆಂಪು ಪೇಟಾ ತೊಟ್ಟಿದ್ದ ಯುವಕರು ಗಮನ ಸೆಳೆದರು.
ಸಾಹಿತ್ಯ ಸಮ್ಮೇಳನ ನೆನಪಿಸಿದ ಮದುವೆ : "ಹೆಂಡತಿಯ ಪ್ರೇಮದಲ್ಲಿ ತಾಯಿಯನ್ನು ಮರಿಬೇಡ, ಒಕ್ಕೂಟದ ಪ್ರೇಮದಲ್ಲಿ ತಾಯ್ನಾಡನ್ನು ಮರಿಬೇಡ", "ಸಮುದ್ರದಲ್ಲಿರುವ ಉಪ್ಪು ಬೇಕಾದರೂ ಕಡಿಮೆ ಆಗಬಹುದು; ಆದರೆ ಕನ್ನಡದ ಮೇಲಿರುವ ನನ್ನ ಕನ್ನಡಾಭಿಮಾನ ಎಂದಿಗೂ ಕಡಿಮೆ ಆಗಲ್ಲ". "ನಕ್ ಸಾಯ್ರೋ..ನಕ್ ಸಾಯ್ರಿ..ನಕ್ ಸತ್ತರ ನಕ್ಷತ್ರ ಆಕಿರಿ. ದ.ರಾ ಬೇಂದ್ರೆ; ಕನ್ನಡಕ್ಕಾಗಿ ಬಾಳ್ರೋ..ಕನ್ನಡಕ್ಕಾಗಿ ಬಾಳ್ರಿ ಬದಕಿರ್ತನ ಉದ್ಧಾರ ಆಕಿರಿ" ಎನ್ನುವ ಸಾಹಿತಿಗಳ ಘೋಷವಾಕ್ಯಗಳು ಸೇರಿ ಅನೇಕ ಕನ್ನಡ ಜಾಗೃತಿ ಫಲಕಗಳು ಮದುವೆಗೆ ಬಂದಿದ್ದವರಲ್ಲಿ ಕನ್ನಡಾಭಿಮಾನ ಬಡಿದೆಚ್ಚರಿಸುವಂತಿದ್ದವು. ಹೀಗಾಗಿ ಇದು ಮದುವೆಯೋ? ಕನ್ನಡ ಸಾಹಿತ್ಯ ಸಮ್ಮೇಳನವೋ ಎಂಬಂತೆ ಭಾಸವಾಗುವಂತಿತ್ತು. ಅಲ್ಲದೇ ಮಹಿಳೆಯರು, ಮಕ್ಕಳು ಮಹಾಪುರುಷರ ಮೂರ್ತಿ, ಭಾವಚಿತ್ರದ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಕನ್ನಡ ಮಂತ್ರಗೋಷ್ಠಿ, ಸ್ವಾಮೀಜಿಗಳು, ಪೊಲೀಸ್ ಅಧಿಕಾರಿಗಳು, ಕನ್ನಡ ಹೋರಾಟಗಾರರು, ಸಾವಿರಾರು ಜನರ ನಡುವೆ ಕನ್ನಡಿಗ ದೀಪಕ, ಕನ್ನಡತಿ ರಾಜೇಶ್ವರಿ ನವ ದಾಂಪತ್ಯಕ್ಕೆ ಕಾಲಿಟ್ಟರು. ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ದೀಪಕ, ''ಮದುವೆ ಪತ್ರಿಕೆಯೂ ಕನ್ನಡಮಯವಾಗಿತ್ತು. ಮದುವೆಯಲ್ಲಿ ರಾಜ್ಯೋತ್ಸವ ನೆನಪಿಸಬೇಕೆಂದು ಈ ರೀತಿ ಮಾಡಿದ್ದೇನೆ. ಎಲ್ಲ ಕನ್ನಡಿಗರಿಗೆ ಈ ಮದುವೆ ಟ್ರೆಂಡ್ ಆಗಬೇಕು. ಮೊದಲು ಅರ್ಧ ಭಾರತ ಕನ್ನಡ ಆಗಿತ್ತು. ಈಗ ಕರ್ನಾಟಕ ರಾಜ್ಯಕ್ಕೆ ಬಂದು ನಿಂತಿದೆ. ಹಾಗಾಗಿ, ಎಲ್ಲರೂ ಕನ್ನಡವೇ ಧರ್ಮ, ಜಾತಿ ಎಂದು ತಿಳಿದು ಬಾಳಿರಿ. ಕನ್ನಡ ಹೆಚ್ಚೆಚ್ಚು ಬಳಸಿ'' ಎಂದು ಕೇಳಿಕೊಂಡರು.
ಮದುವೆ ಆಮಂತ್ರಣ ಪತ್ರಿಕೆಯನ್ನು ಪೂರ್ತಿ ಕನ್ನಡಮಯಗೊಳಿಸಿದ್ದ ದೀಪಕ ಬಸವಾದಿ ಶರಣರು, ಕನ್ನಡ ಸಂತರು, ದಾರ್ಶನಿಕರು, ಹೋರಾಟಗಾರರ ಭಾವಚಿತ್ರಗಳೊಂದಿಗೆ ಕನ್ನಡ ಅಭಿಮಾನ, ಇತಿಹಾಸದ ಸಂದೇಶ ಸಾರಿದರು. ಅಲ್ಲದೇ ಜೋಡಿಗಳ ಉಂಗುರದಲ್ಲೂ ಕನ್ನಡಿಗ, ಕನ್ನಡತಿ ಎಂದು ಬರೆಯಲಾಗಿತ್ತು. ಅಲ್ಲದೇ ಮದುವೆಗೆ ಬಂದಿದ್ದ ಜನ ಕನ್ನಡ ಗ್ರಂಥಗಳು, ಕನ್ನಡ ಮಹಾಪುರುಷರ ಮೂರ್ತಿ ಮತ್ತು ಭಾವಚಿತ್ರಗಳು, ಹಂಪಿ ಕಲ್ಲಿನ ರಥ ಸೇರಿ ಕನ್ನಡ ಸಂಸ್ಕೃತಿ ಬಿಂಬಿಸುವ ಕಾಣಿಕೆ ನೀಡಿದ್ದು ವಿಶೇಷವಾಗಿತ್ತು.
ನವ ಜೋಡಿಗೆ ಆಶೀರ್ವದಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಹುಕ್ಕೇರಿ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ''ನಾನು ಒಬ್ಬ ಕನ್ನಡ ಸ್ವಾಮೀಜಿಯಾಗಿ ಮದುವೆಗೆ ಬಂದಿದ್ದೇನೆ. ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದೆನೇನೋ ಎನಿಸುತ್ತಿದೆ. ದೀಪಕನ ಕನ್ನಡದ ಪ್ರೀತಿ ಕಂಡು ಮನಸ್ಸು ಸಂತೃಪ್ತಿಗೊಂಡಿದೆ. ಎಲ್ಲರೂ ಕನ್ನಡ ನೋಡಿ ಕಲಿಯಬೇಕು. ಕನ್ನಡ ದಂಪತಿಗೆ ಶುಭವಾಗಲಿ, ನೂರ್ಕಾಲ ಆದರ್ಶ ದಂಪತಿಗಳಾಗಿ ಬಾಳಿ, ಇದೇ ರೀತಿ ಕನ್ನಡ ಕಾಯಕ ಮುಂದುವರೆಸಿ'' ಎಂದು ಶುಭ ಹಾರೈಸಿದರು.
ಯುವಕರಿಗೆ ದೀಪಕ ಮಾದರಿಯಾಗಿದ್ದಾರೆ : ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, ಕರ್ನಾಟಕ ಇತಿಹಾಸದಲ್ಲಿ ಕನ್ನಡ ಮದುವೆ ಇದೇ ಮೊದಲು. ಕನ್ನಡ ಉಳಿಬೇಕು ಎಂದರೆ ಕನ್ನಡ ಬಳಸಬೇಕು. ಹೋರಾಟ ಮತ್ತು ಕಾರ್ಯಕ್ರಮ ಅಷ್ಟೇ ಅಲ್ಲದೆ ಮದುವೆ ಕೂಡ ಕನ್ನಡದಲ್ಲಿ ಮಾಡಿಕೊಂಡು ಇಂದಿನ ಯುವಕರಿಗೆ ದೀಪಕ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಒಟ್ಟಿನಲ್ಲಿ "ನನ್ನ ಮದುವೆ ರಕ್ತಸಂಬಂಧಿಕರ ಸಮಾಗಮವಲ್ಲ, ಕನ್ನಡ ನಾಡ ಸಂಬಂಧಿಕರ ಸಮಾಗಮ" ಎಂದು ಕನ್ನಡ ಡಿಂಡಿಮವ ಸಾರಿದ ಈ ನಿಜ ಕನ್ನಡಿಗನ ಕಾರ್ಯ ನಿಜಕ್ಕೂ ಶ್ಲಾಘನೀಯ.
ಇದನ್ನೂ ಓದಿ : ಅನಾಥೆಯ ಬಾಳಲ್ಲಿ ಬೆಳಕಾಗಿ ಬಂದ ಯುವಕ : ಮಂತ್ರ ಮಾಂಗಲ್ಯದಡಿ ಮದುವೆ ಮಾಡಿಸಿದ ಜಿಲ್ಲಾಡಳಿತ