ಕಾರವಾರ: ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20ರಿಂದ 22ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ಕನ್ನಡ ಜ್ಯೋತಿ ರಥಯಾತ್ರೆ'ಗೆ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ರಾಜ್ಯದ ಏಕೈಕ ಕನ್ನಡಾಂಬೆ ಭುವನೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಚಾಲನೆ ಸಿಕ್ಕಿತು.
ಜಿಲ್ಲಾಡಳಿತ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾದ ಕನ್ನಡ ಜ್ಯೋತಿ ರಥಯಾತ್ರೆಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿಧ್ಯುಕ್ತ ಚಾಲನೆ ಕೊಟ್ಟರು.
ಬಳಿಕ ಮಾತನಾಡಿದ ಸಚಿವರು, "ರಥಯಾತ್ರೆಯು ರಾಜ್ಯದ 31 ಜಿಲ್ಲೆಗಳೂ ಸೇರಿದಂತೆ 6 ಬೇರೆ ಬೇರೆ ರಾಜ್ಯದ ಗಡಿ ಪ್ರದೇಶದಲ್ಲಿ ಸಂಚರಿಸಿ ಸಾಹಿತ್ಯ ಸಮ್ಮೇಳನ ನಡೆಯುವ ಸಕ್ಕರೆ ನಾಡು ಮಂಡ್ಯ ತಲುಪಲಿದೆ" ಎಂದರು.
"ಕರ್ನಾಟಕ ಎಂದು ನಾಮಕರಣವಾಗಿ 50ರ ಸಂಭ್ರಮವನ್ನು ರಾಜ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿದೆ. ಅದೇ ರೀತಿ, ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸರ್ಕಾರ 30 ಕೋಟಿ ರೂ ಅನುದಾನ ಬಿಡುಗಡೆ ಮಾಡಲಿದೆ" ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ, "ಐತಿಹಾಸಿಕ ಸ್ಥಳವಾಗಿರುವ ಭುವನಗಿರಿಯ ಭುವನೇಶ್ವರಿ ದೇವಿ ದೇವಾಲಯದಲ್ಲಿ ಎರಡನೇ ಬಾರಿಗೆ ಕನ್ನಡ ಜ್ಯೋತಿ ರಥ ಉದ್ಘಾಟಿಸಲಾಗಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ.ಬೇಂದ್ರೆ, ಡಿ.ವಿ.ಗುಂಡಪ್ಪ, ರೆವರೆಂಡ್ ಫರ್ಡಿನಂಡ್ ಕಿಟ್ಟೆಲ್ ಹೀಗೆ ಹಲವು ಖ್ಯಾತ ಸಾಹಿತಿಗಳ ಮಾತೃಭಾಷೆ ಬೇರೆಯಾದರೂ ಅವರು ಕರುನಾಡಿಗೆ ನೀಡಿದ ಕೊಡುಗೆ ಅಪಾರ" ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, "ಜಿಲ್ಲೆಯಲ್ಲಿ 4 ದಿನಗಳ ಕಾಲ ನಡೆಯುವ ರಥಯಾತ್ರೆಯನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತದ ವತಿಯಿಂದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಸಿದ್ದಾಪುರದಿಂದ ಪ್ರಾರಂಭವಾದ ರತಯಾತ್ರೆ ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಕಾಣಕೋಣ(ಗೋವಾ), ಜೋಯಿಡಾ, ದಾಂಡೇಲಿ, ಹಳಿಯಾಳ, ಯಲ್ಲಾಪುರ, ಶಿರಸಿ ಮೂಲಕ ಹಾವೇರಿ ಜಿಲ್ಲೆಗೆ ಬೀಳ್ಕೊಡಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: ವಾರದಿಂದ ತಗ್ಗಿದ್ದ ಮಳೆ ಮತ್ತೆ ಚುರುಕು: ರಾಜ್ಯದ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - Karnataka Rain Forecast