ಶಿವಮೊಗ್ಗ: ನಾನು ಪಕ್ಷೇತರ ಅಭ್ಯರ್ಥಿ ಆಗಬೇಕು ಎಂದು ನನ್ನ ಬೆಂಬಲಿಗರು ಬಯಸುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ಬರಪ್ಪ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹಾಗಾಂತ ನಾನು ಎಲ್ಲೂ ಹೇಳಿಲ್ಲ. ಪಕ್ಷೇತರ ಅಭ್ಯರ್ಥಿಯಾಗಬೇಕು ಎಂದು ನನ್ನ ಬೆಂಬಲಿಗರು ಒತ್ತಾಯ ಮಾಡ್ತಾ ಇದ್ದಾರೆ ಅಷ್ಟೇ. ಬೆಂಬಲಿಗರು ಈ ಬಗ್ಗೆ ಶುಕ್ರವಾರ ಸಭೆ ಕೂಡ ಸೇರಲಿದ್ದಾರೆ. ನಿಮಗೆ ಇರುವ ಕುತೂಹಲ ಇರಲಿ. ಇದು ನನ್ನ ರಾಜಕೀಯ ಭವಿಷ್ಯವಾಗಿದೆ. ಹಿಂದುಳಿದ ವರ್ಗದ ಜನರು ನನಗೆ ಫೋನ್ ಮಾಡುತ್ತಿದ್ದಾರೆ. ಕಾದು ನೋಡುತ್ತೇನೆ, ಹಿರಿಯರ ಜೊತೆ ಮಾತಾನಾಡುತ್ತೇನೆ ಎಂದರು.
ಸಂಸದ ಆಗಬೇಕಬೇಕೆಂದೇನಿಲ್ಲ: ನಾನು ಸಂಸದನಾಗಬೇಕೆಂದೇನೂ ಇಲ್ಲ. ಇದನ್ನು ಹಿರಿಯರ ಜೊತೆ ಚರ್ಚೆ ಮಾಡುತ್ತೇನೆ. ಎಲ್ಲ ಹಿತೈಷಿಗಳು ನೋವಿನಿಂದ ಕರೆ ಮಾಡ್ತಾ ಇದ್ದಾರೆ. ನನ್ನ ಉದ್ದೇಶ ಎಂಪಿ ಆಗುವುದಲ್ಲ. ಈ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುವೆ ಎಂದರು. ಸುದ್ದಿಗೋಷ್ಠಿ ಕರೆಯುತ್ತಿದಂತೆ ವರಿಷ್ಠರಿಗೂ ಕುತೂಹಲ ಆಗಿದೆ. ನಾನು ಏನಾದರೂ ಹೇಳಿ ಬಿಡಬಹುದು ಅಂತ. ನನ್ನ ಅಭಿಮಾನಿ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂದಿದ್ದಾರೆ. ಇಡಿ ಜಿಲ್ಲೆಯ ಹಿತೈಷಿಗಳ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನದ ಬಗ್ಗೆ ಹೇಳುವೆ ಎಂದಿದ್ದಾರೆ. ಇತ್ತೀಚೆಗೆ ಈಶ್ವರಪ್ಪ ಪುತ್ರ ಕಾಂತೇಶ್ ಅವರಿಗೆ ಹಾವೇರಿ - ಗದಗ ಲೋಕಸಭಾ ಟಿಕೆಟ್ ನೀಡಬೇಕು ಎಂದು ಹಾವೇರಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೂ ಮನವಿ ಮಾಡಿದ್ದರು.
ಸದ್ಯ ಬಿಜೆಪಿ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಟಿಕೆಟ್ ಪ್ರಕಟಿಸಲಾಗಿದೆ. ಈಶ್ವರಪ್ಪ ಬಯಸಿದ್ದ ಹಾವೇರಿ - ಗದಗ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ: ಮೈಸೂರಿನಿಂದ ಯದುವೀರ್ ಒಡೆಯರ್ ಕಣಕ್ಕೆ