ಮೈಸೂರು: ''ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಡಾ ಹಗರಣದಿಂದ ಪಾರಾಗಲು ನಿವೃತ್ತ ನ್ಯಾಯಾಧೀಶರಾದ ದೇಸಾಯಿ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದ್ದಾರೆ'' ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ದೂರಿದರು.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ''ಮುಡಾ ಪ್ರಕರಣದಿಂದ ಬಚಾವ್ ಆಗುವ ಸಲುವಾಗಿಯೇ ದೇಸಾಯಿ ನೇತೃತ್ವದ ಆಯೋಗ ರಚನೆ ಮಾಡಿದ್ದಾರೆ. ದೇಸಾಯಿ ಆಯೋಗದ ವರದಿಯನ್ನು ತಗೊಂಡು ನೆಕ್ಕಲು ಆಗುತ್ತದೆಯಾ? ವರದಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುತ್ತಾರಾ?'' ಎಂದು ಪ್ರಶ್ನಿಸಿದರು.
''ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ 50 ಅಲ್ಲ 100 ನಿವೇಶನ ಬೇಕಾದರೂ ಪಡೆದುಕೊಳ್ಳಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ, ಕಾನೂನುಬದ್ಧವಾಗಿ ಪಡೆದುಕೊಳ್ಳಲಿ ಎಂಬುದು ನಮ್ಮ ಆಶಯ. ಆದರೆ, ಸಿದ್ದರಾಮಯ್ಯ ಪತ್ನಿಗೆ ನೀಡಿರುವ ನಿವೇಶನಗಳನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರಿಯಬಾರದು'' ಎಂದು ಹೇಳಿದರು.
''ನಿವೇಶನ ಖರೀದಿಯಿಂದ ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನಸ್ವಾಮಿ ಖರೀದಿ ಮಾಡಿದಾಗ ಡಿಸಿ ಕೃಷಿ ಭೂಮಿ ಎಂದು ವರದಿ ಕೊಟ್ಟಿದ್ದಾರೆ. ಆಗ ಡಿಸಿ ಏನು ಮಣ್ಣು ತಿನ್ನುತ್ತಿದ್ದರಾ? ಸ್ಪಾಟ್ಗೆ ಹೋಗಿ ನೋಡಿದ್ರಾ'' ಎಂದು ಕಿಡಿಕಾರಿದರು.
ನನ್ನ ವಿರುದ್ಧ ಕಾಂಗ್ರೆಸ್ನವರಿಂದ ಅಪಪ್ರಚಾರ: ''ಮುಡಾದಲ್ಲಿ ಸಿಎಂ ಪತ್ನಿಗೆ ನಿವೇಶನ ಕೊಟ್ಟಿರುವುದರಿಂದ ಪರಿಶಿಷ್ಟ ಕುಟುಂಬಕ್ಕೆ ಅನ್ಯಾಯವಾಗಿದ್ದು, ಅದನ್ನು ಸರಪಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಮುಡಾ ಹಗರಣದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ'' ಎಂದು ಕುಮಾರಸ್ವಾಮಿ ಹೇಳಿದರು. ''ನಾನು ಮುಡಾದಿಂದ ಯಾವುದೇ ನಿವೇಶನ ಪಡೆದಿಲ್ಲ. 1984ರಲ್ಲಿ ನಿವೇಶನ ಕೋರಿ ಮುಡಾಗೆ ಅರ್ಜಿ ಸಲ್ಲಿಸಿ, 37 ಸಾವಿರ ರೂ. ಹಣವನ್ನು ಕಟ್ಟಿದ್ದೇನೆ. 2006ರಲ್ಲಿ ನಾನು ಸಿಎಂ ಆಗಿದ್ದಾಗ ಯಾರಿಗಾದರೂ ಹೇಳಿದ್ದರೆ ಮನೆಗೆ ಫೈಲ್ ತಂದು ಕೊಡುತ್ತಿದ್ದರು. ಆದರೆ, ಆಗಲೂ ಪ್ರಭಾವ ಬಳಸಿ ನಿವೇಶನ ಪಡೆಯಲಿಲ್ಲ. ಒಂದು ವೇಳೆ ನಿವೇಶನ ಮಂಜೂರಾಗಿದ್ದರೆ, ಅದನ್ನೇ ದೊಡ್ಡದು ಮಾಡುತ್ತಿದ್ದರು. ಆದರೂ ಕಾಂಗ್ರೆಸ್ನವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ'' ಎಂದು ಕಿಡಿಕಾರಿದರು.
ಮೇಕೆದಾಟು ಯೋಜನೆ: ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಒಂದೇ ರಾತ್ರಿಯಲ್ಲಿ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ನಡೆಸುವುದನ್ನು ಬಿಟ್ಟು ತಮಿಳುನಾಡಿಗೆ ನಿಯೋಗದೊಂದಿಗೆ ತೆರಳಿ ಸಿಎಂ ಸ್ಟಾಲಿನ್ ಅವರೊಂದಿಗೆ ಚರ್ಚಿಸಬೇಕು. ಚುನಾವಣೆ ಮುನ್ನ ಹೋಗಿ ಚರ್ಚಿಸಿದ್ದರು. ಈಗಲೂ ಹೋಗಿ ಮೇಕೆದಾಟು ವಿಚಾರವಾಗಿ ಮಾತನಾಡಿಕೊಂಡು ಬರಲಿ'' ಎಂದು ಸಲಹೆ ನೀಡಿದರು.
''ತಮಿಳುನಾಡು ಕೇಳಿದ್ದಕ್ಕಿಂತ ಹೆಚ್ಚಿನ ನೀರು ಸೇರಿದೆ. ಮೇಕೆದಾಟು ಯೋಜನೆ ಸಂಬಂಧ ಎರಡು ರಾಜ್ಯದ ಮುಖ್ಯಮಂತ್ರಿಗಳು ತಾಂತ್ರಿಕವಾಗಿ ಚರ್ಚೆ ಮಾಡಿದರೆ ಒಳ್ಳೆಯದು. ಕಾವೇರಿ ನದಿ ವಿಚಾರವಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಧ್ವನಿ ಎತ್ತುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಿದ್ದಾರೆ. ಈ ಬಗ್ಗೆ ರಾಜ್ಯದ ಸಂಸದರು ಧ್ವನಿ ಎತ್ತುವ ಕೆಲಸ ಮಾಡಲಿ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಇದುವರೆಗೂ ಕಾವೇರಿ ವಿಚಾರವಾಗಿ ಮಾತನಾಡಿಲ್ಲ'' ಎಂದರು.
ಸಣ್ಣತನ ಬಿಡಿ, ನಡವಳಿಕೆ ತಿದ್ದಿಕೊಳ್ಳಿ- ಸಿಎಂಗೆ ಹೆಚ್ ಡಿಕೆ ಸಲಹೆ: ''ಸಣ್ಣತನ ಬಿಡಿ, ನಡವಳಿಕೆ ತಿದ್ದಿಕೊಳ್ಳಿ. ಹೀಗೆ ಬೈದಾಡಿಕೊಂಡಿದ್ದರೆ ನಿಮ್ಮ ಕೆಲಸ ಏನು ಆಗಲ್ಲ. ಕೇಂದ್ರ ಹಾಗೂ ರಾಜ್ಯದ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ'' ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದರು.
ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸಹಕಾರ ಸಹಕಾರ ನೀಡುತ್ತಿಲ್ಲ. ಅನುದಾನ ಹಂಚಿಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ''ಮೊದಲು ತಮಟೆ ಹೊಡೆಯೋದನ್ನು ನಿಲ್ಲಿಸಿ, ರಾಜ್ಯದ ಅಭಿವೃದ್ಧಿ ಕೆಲಸ ಮಾಡಲು ಬನ್ನಿ, ಎಲ್ಲರನ್ನು ವಿಶ್ವಾಸದಲ್ಲಿ ಕಾಣಿ'' ಎಂದು ಹೇಳಿದರು.
''ನಾನು ಈ ಹಿಂದೆ ಸಿಎಂ ಆಗಿ, ಇದೀಗ ಕೇಂದ್ರ ಸಚಿವನಾಗಿ ಸ್ವಲ್ಪ ಅನುಭವ ಪಡೆದಿದ್ದೇನೆ. ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಭೀಕರ ಪ್ರವಾಹ ಬಂದಿತ್ತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿತು. ಸ್ವತಃ ಪ್ರಧಾನಿಯವರೇ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದರು. ಎಲ್ಲಾ ರೀತಿಯ ನೆರವು ಕೊಡುವ ಭರವಸೆ ನೀಡಿದ್ದರು. ಅಂತಹ ವಾತಾವರಣವನ್ನು ನೀವೇಕೆ (ಸಿಎಂ ಸಿದ್ದರಾಮಯ್ಯ) ಸೃಷ್ಟಿಸಿಕೊಂಡಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಏಕೆ ದೂರುತ್ತೀರಿ? ರಾಜ್ಯದ ಸಂಸದರ ಮೇಲೆ ಏಕೆ ಆರೋಪಗಳನ್ನು ಮಾಡುತ್ತೀರಿ? ಹಾಗಾದರೆ ರಾಜ್ಯ ಸರ್ಕಾರದ ಕೆಲಸವಾದರೂ ಏನು?'' ಎಂದು ಕುಟುಕಿದರು.