ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯೊಂದಿಗೆ ಹಲವು ಆಚರಣೆಗಳು ಗರಿಗೆದರುತ್ತವೆ. ಅಂತಹ ಆಚರಣೆಗಳಲ್ಲಿ ಒಂದು ಜೋಕುಮಾರಸ್ವಾಮಿಯ ಪೂಜೆ. ಗಣೇಶನ ನಿಮಜ್ಜನ ಬಳಿಕ ಹುಟ್ಟುವ ಜೋಕುಮಾರ ಸ್ವಾಮಿ ಮಳೆ ಮಳೆ ತರುವುದರ ಜೊತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಸಮೃದ್ಧಿಯನ್ನು ನೀಡುತ್ತಾನೆ ಎಂಬುದು ಈ ಭಾಗದ ಜನರ ನಂಬಿಕೆ.
ಜೋಕುಮಾರ ಎಂದರೆ ಶಿವ ಪುತ್ರ ಕುಮಾರಸ್ವಾಮಿ. ನಾಡ ಜನಪದರು ತಮ್ಮ ಪ್ರೀತಿಯ ದೈವವಾದ್ದರಿಂದ ಆತನನ್ನು ಜೋಕುಮಾರ ಎಂದು ಕರೆಯುತ್ತಾರೆ. ಜೋಕುಮಾರ ಕುರಿತು ಜನಪದದಲ್ಲಿ ಅನೇಕ ಕಥೆಗಳು ಹಾಸುಹೊಕ್ಕಾಗಿವೆ.
ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥನೆ; ಬೆನಕನ ಅಮಾವಾಸ್ಯೆಯ ಬಳಿಕ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಆರನೇ ದಿನಕ್ಕೆ ಜೋಕುಮಾರನ ಜನನ ಆಗುತ್ತದೆ ಎಂಬುದು ಭಕ್ತರ ನಂಬಿಕೆ. ಗ್ರಾಮೀಣ ಮತ್ತು ನಗರಗಳಲ್ಲಿ ಮಹಿಳೆಯರು ಜೋಕುಮಾರನನ್ನು ಬುಟ್ಟಿಯಲ್ಲಿ ಹೊತ್ತು ಸುತ್ತುತ್ತಾರೆ. ಹೀಗೆ ಜೋಕುಮಾರ ಹುಣ್ಣಿಮೆ ಬರುವವರೆಗೆ 7 ದಿನಗಳ ಕಾಲ ಸಂಚರಿಸುತ್ತಾರೆ. ಅಲ್ಲದೆ, ಉತ್ತಮ ಮಳೆ, ಬೆಳೆ ಆಗಲಿ ಎಂದು ಇಲ್ಲಿನ ಜನರು ಜೋಕುಮಾರನಿಗೆ ಪೂಜಿಸುತ್ತಾರೆ.
ಜಾನಪದದ ಸೊಗಡು; ಹೊಸ ಬಿದಿರಿನ ಬುಟ್ಟಿಯಲ್ಲಿ ಮಣ್ಣಿನಿಂದಲೇ ಜೋಕುಮಾರನ ಮೂರ್ತಿ ಮಾಡಿ ಪ್ರತಿಷ್ಠಾಪಿಸುತ್ತಾರೆ. ಬೇವಿನ ಎಲೆಗಳಿಂದ ವಿವಿಧ ಹೂಗಳು, ಮೆಣಸಿನಕಾಯಿಂದಲೇ ಅಲಂಕಾರ ಮಾಡುತ್ತಾರೆ. ನಂತರ ಮಹಿಳೆಯರು ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಊರಿನ ಪ್ರಮುಖ ಗಲ್ಲಿಗಳಿಗೆ ಹೊತ್ತುಕೊಂಡು ಹೋಗುತ್ತಾರೆ. ಮನೆಯ ಕಟ್ಟೆಯ ಮೇಲಿಟ್ಟು ಜೋಕುಮಾರನ ಹಾಡುಗಳನ್ನು ಹಾಡುತ್ತಾರೆ. ಇಲ್ಲಿ ಜೋಕುಮಾರನ ಹಾಡುಗಳು ಜಾನಪದ ಶೈಲಿಯಲ್ಲಿವೆ. ಈ ಎಲ್ಲ ಹಾಡುಗಳನ್ನು ಓದಲು, ಬರೆಯಲು ಬಾರದ ಮಹಿಳೆಯರು ಹಾಡುತ್ತಾರೆ.
ಜೋಕುಮಾರನ ತುಟಿಗೆ ಬೆಣ್ಣೆ; ಜೋಕುಮಾರನಿಗೆ ಅಕ್ಕಿ, ಜೋಳ, ಸಜ್ಜಿ, ಗೋಧಿ ಸೇರಿದಂತೆ ಆಹಾರ ಸಾಮಗ್ರಿಗಳನ್ನು ನೈವೇದ್ಯ ರೂಪದಲ್ಲಿ ನೀಡುತ್ತಾರೆ. ಜೋಕುಮಾರನ ತುಟಿಗೆ ಹಚ್ಚಲಾದ ಬೆಣ್ಣೆಯನ್ನು ಬೇವಿನ ಎಲೆಗೆ ಕಪ್ಪು ಕಾಡಿಗೆ ಹಚ್ಚಿ ನುಚ್ಚು ಪ್ರಸಾದ ಇಟ್ಟುಕೊಡುತ್ತಾರೆ.
ಜೋಕುಮಾರಸ್ವಾಮಿ ಹೊತ್ತು ತಿರುಗುವ ಕಸ್ತೂರಿ ಬಾಯಿ ಮಾತನಾಡಿ, ಗಣೇಶ ಚತುರ್ಥಿ ಆದ ಬಳಿಕ ಅಷ್ಟಮಿ ದಿನದಂದು ಜೋಕುಮಾರ ಜನಿಸುತ್ತಾನೆ. ಗಣೇಶಮೂರ್ತಿ ಮಾಡುವ ಸ್ಥಳದಲ್ಲಿಯೇ ಮಣ್ಣಿನಿಂದ ಜೋಕುಮಾರನ ಮೂರ್ತಿಯನ್ನು ಸಹ ಮಾಡಿಕೊಂಡು ಬರುತ್ತೇವೆ. ನಂತರ ಬಿದಿರನ ಬುಟ್ಟಿಯಲ್ಲಿ ಇಟ್ಟುಕೊಂಡು ಗ್ರಾಮೀಣ ಹಾಗೂ ನಗರಗಳಲ್ಲಿ ಸಂಚಾರ ಮಾಡುತ್ತೇವೆ ಎಂದರು.
ಈ ವೇಳೆ ಗ್ರಾಮದ ಪ್ರಮುಖರಾದ ಕುಲಕರ್ಣಿ, ದೇಸಾಯಿ, ಒಕ್ಕಲಿಗರ ಮನೆಗಳಿಗೆ ಭೇಟಿ ನೀಡುತ್ತೇವೆ. ಜೋಕುಮಾರ ಜನಿಸಿದ ಏಳು ದಿನ ಏಳು ಪಟ್ಟಣದಲ್ಲಿ ಆಳಿದ್ದಾನೆ. ಜೋಕುಮಾರನ ತಾಯಿ ಕಡಬು ಮಾಡುವ ವಸ್ತು ತೆಗೆದುಕೊಂಡು ಕಣ್ಣಿಗೆ ತಿವಿದಿದ್ದಾಳೆ. ಹೀಗಾಗಿ ಜೋಕುಮಾರನ ಒಂದು ಕಣ್ಣು ಕಾಣುವುದಿಲ್ಲ. ಜೋಕುಮಾರನಿಗೆ ಬೆಣ್ಣೆ ಎಂದರೆ ಹೆಚ್ಚು ಪ್ರೀತಿ. ಹೀಗಾಗಿ ಬೆಣ್ಣೆ, ಮೆಣಸಿನಕಾಯಿ, ಎಣ್ಣೆ, ಉಪ್ಪು ಸೇರಿದಂತೆ ವಿವಿಧ ವಸ್ತುಗಳ ಮೂಲಕ ಪೂಜೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.