ಮೈಸೂರು: ''ರಾಜಕಾರಣಿಗಳು ಯಾರೂ ಕೂಡ ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಹಾಗೆ ಮಾಡುವುದಿದ್ದರೆ, ಎಲ್ಲರೂ ರಾಜೀನಾಮೆ ಕೊಡಿ ಎಂದು ನಾನು ಹೇಳಿದ್ದೇನೆ. ಇಲ್ಲದಿದ್ದರೆ, ನ್ಯಾಯಾಲಯ ತೀರ್ಮಾನ ಮಾಡುವವರೆಗೂ ಕಾಯಬೇಕು'' ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ದಸರಾ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರವನ್ನು ಬೆಂಬಲಿಸಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದ ಜಿಟಿಡಿ, ಬಳಿಕ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ''ಯಾರ್ಯಾರು ಅಕ್ರಮ ಸೈಟ್ ಪಡೆದಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗುತ್ತದೆ. ಮುಖ್ಯಮಂತ್ರಿಗಳ ಪತ್ನಿಯೇ, ಸರ್ಕಾರವೇ ಮುಡಾ ಸೈಟ್ಗಳನ್ನು ವಾಪಸ್ ನೀಡಿರುವಾಗ ಬೇರೆಯವರದ್ದೆಲ್ಲ ಯಾವ ಲೆಕ್ಕ. ಅದರಂತೆ, ಎಲ್ಲರೂ ಅಕ್ರಮವಾಗಿ ಪಡೆದಿರುವುದೆಲ್ಲವನ್ನೂ ವಾಪಸ್ ನೀಡಬೇಕಾಗುತ್ತದೆ'' ಎಂದರು.
''ಬದಲಿ ನಿವೇಶನಗಳಿಗಾಗಿ ಯಾರೆಲ್ಲಾ ಮನವಿ ಮಾಡಿದ್ದಾರೆ ಎಂಬ ಬಗ್ಗೆ ಮುಡಾದವರು ಪರಿಶೀಲಿಸಿ, ಕಾನೂನುಬದ್ಧವಾಗಿ ಇರುವುದನ್ನು ಉಳಿಸಿ, ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿದರು.
''50:50 ಅನುಪಾತದ ಸೈಟ್ ಅಕ್ರಮ ಅಲ್ಲ. ಕೆಲ ಭ್ರಷ್ಟರನ್ನು ಮುಂದಿಟ್ಟುಕೊಂಡು ರೈತರಿಗೆ ಮೋಸ ಮಾಡುವುದಕ್ಕೆ ಆಗಲ್ಲ. ರೈತರಿಗೆ ನಾಲ್ಕು ಪಟ್ಟು ದುಡ್ಡು ಕೊಡಲು ಪ್ರಾಧಿಕಾರದಲ್ಲಿ ಹಣ ಇಲ್ಲ? ಹೀಗಾಗಿಯೇ 50:50 ಅನುಪಾತದ ಸೈಟ್ ಜಾರಿ ಮಾಡಿರುವುದು. ಮುಡಾದಲ್ಲಿ ತಪ್ಪೇ ಆಗಿಲ್ಲ ಅಂತ ಏನಿಲ್ಲ. ತಪ್ಪುಗಳು ಆಗಿದೆ, ಅದನ್ನು ತನಿಖೆ ಮಾಡಲಿ'' ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರನ್ನು ನೀವು ಓಲೈಸುತ್ತಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಟಿಡಿ, ''ನನ್ನ ಜೀವನಲ್ಲಿ ನಾನು ಮುಖ್ಯಮಂತ್ರಿ ಅವರಿಗೆ ಒಂದೂ ಪತ್ರ ಕೊಟ್ಟಿಲ್ಲ. ಇದನ್ನು ನಾನು ಚಾಮುಂಡೇಶ್ವರಿ ಎದುರಿಗೇ ಹೇಳಿದ್ದೇನೆ. ಮುಖ್ಯಮಂತ್ರಿಗೆ ಪತ್ರವನ್ನೂ ಕೊಡದೇ, ಅವರ ಹತ್ತಿರವೂ ಹೋಗದೇ ಇರುವವನು ಈ ಜಿ.ಟಿ.ದೇವೇಗೌಡ'' ಎಂದು ಹೇಳಿದರು.
''ಬಿಜೆಪಿ, ಜೆಡಿಎಸ್ ಅಂತ ಏನಿಲ್ಲ. ಎಲ್ಲರೂ ಸೈಟ್ ತೆಗೆದುಕೊಂಡಿದ್ದಾರೆ. ನಾನೇ ಇರಲಿ, ನನ್ನ ಮೇಲೆಯೂ ಬೇಕಿದ್ದರೆ ತನಿಖೆ ಮಾಡಲಿ'' ಎಂದು ಅವರು ಆಗ್ರಹಿಸಿದರು.