ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ದೇವೇಗೌಡರ ಕುಟುಂಬದಿಂದ ಇಬ್ಬರು ಅಭ್ಯರ್ಥಿಗಳಿದ್ದಾರೆ. ಮಂಡ್ಯಕ್ಕೆ ಕುಮಾರಸ್ವಾಮಿ ಅಥವಾ ಪ್ರಜ್ವಲ್ ಇಬ್ಬರೂ ಅಭ್ಯರ್ಥಿಗಳಾಗಬಹುದು ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಜೊತೆಗೂಡಿ 28 ಲೋಕಸಭೆ ಕ್ಷೇತ್ರ ಗೆಲ್ತೀವಿ. ಪಕ್ಷದ ಕಾರ್ಯಕರ್ತರು, ನಾವು ಆರು ಕ್ಷೇತ್ರಗಳನ್ನು ಕೇಳಲು ಹೇಳಿದ್ದೇವೆ. 28ರಲ್ಲಿ ನಮಗೆ ಆರು ಕ್ಷೇತ್ರಕ್ಕೆ ಬೇಡಿಕೆ ಇದೆ. ತುಮಕೂರು, ಹಾಸನ, ಮಂಡ್ಯ, ಮೈಸೂರು, ಕೋಲಾರ ಸೇರಿ ಆರು ಕ್ಷೇತ್ರಗಳನ್ನು ಕೇಳಿದ್ದೇವೆ ಎಂದರು.
ಇದೇ ವೇಳೆ, ಮಂಡ್ಯಕ್ಕೆ ಸುಮಲತಾ ನಿಂತರೆ ಸ್ವಾಗತ. ಆದರೆ ಅವರು ಕಾಂಗ್ರೆಸ್‌ಗೆ ಹೋಗಬಹುದು ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ, ರಾಜ್ಯದಲ್ಲಿ ಕಾಂಗ್ರೆಸ್ ದೌರ್ಜನ್ಯ, ದಬ್ಬಾಳಿಕೆ ಜಾಸ್ತಿಯಾಗಿದೆ. ಐದು ಗ್ಯಾರಂಟಿಗಳು ವಿಫಲವಾಗಿವೆ. ಮೋದಿ ಹಣ ಮಾತ್ರ ಸಲೀಸಾಗಿ ಹೋಗ್ತಿದೆ ಎಂದು ಹೇಳಿದರು. ಮೈತ್ರಿ ಕುರಿತು ಮಾತನಾಡುತ್ತಾ, ಲೋಕಸಭೆ ಅಷ್ಟೇ ಅಲ್ಲ. ಮುಂದಿನ ವಿಧಾನಸಭೆ ಚುನಾವಣೆಗೂ ಹೊಂದಾಣಿಕೆ ಆಗಬೇಕು ಎಂದರು.
ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ. ಇದೇ ಸಿದ್ದರಾಮಯ್ಯ ಶಾಸಕರಿಗೆ ಏನ್ ಕೊಟ್ಟಿದ್ದಾರೆ?. 224 ಶಾಸಕರಿಗೆ ಕೇವಲ 50 ಲಕ್ಷ ರೂ ಕೊಟ್ಟಿದ್ದಾರೆ ಎಂದು ತಿಳಿಸಿದರು.
ನಾವು ಯಾರೂ ಈ ಸರ್ಕಾರವನ್ನು ತೆಗೆಯಲ್ಲ. ಅವರ ಭಾರದಿಂದಲೇ ಅದು ಕುಸಿಯಬೇಕು. ಕುಮಾರಸ್ವಾಮಿ ಸರ್ಕಾರವನ್ನು ಯಾರು ತೆಗೆದರೋ ಹಾಗೆಯೇ ಆಗಬಹುದು. ಸರ್ಕಾರ ಬೀಳುತ್ತೆ ಅಂತಾ ಹೇಳೋಕೆ ಆಗಲ್ಲ. ಐದು ವರ್ಷ ಉಳಿಯತ್ತೆ ಅಂತಾನೂ ಹೇಳಲಾಗದು ಎಂದು ಜಿಟಿಡಿ ಹೇಳಿದರು.
ಇದನ್ನೂ ಓದಿ: ನಮ್ಮ ಪಕ್ಷದ ತತ್ವ ಸಿದ್ಧಾಂತವೇ ಬೇರೆ, ಬಿಜೆಪಿ ತತ್ವ ಸಿದ್ಧಾಂತವೇ ಬೇರೆ: ಜಿ ಟಿ ದೇವೇಗೌಡ