ಬೆಂಗಳೂರು: ಲೋಕಸಭೆ ಚುನಾವಣೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ಆರಂಭವಾಗಿದೆ. ಜೆಪಿ ನಗರದ ಹೆಚ್ಡಿಕೆ ನಿವಾಸದಲ್ಲಿ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ. ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದಾರೆ. ಲೋಕಸಭೆ ಚುನಾವಣೆ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ.
ಬಿಜೆಪಿ ಜತೆ ಹೊಂದಾಣಿಕೆ ವಿಷಯ, ಪರಸ್ಪರ ಸಹಕಾರ, ಸಮನ್ವಯತೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಂಡ್ಯ ಲೋಕಸಭೆ ಕ್ಷೇತ್ರದಿಂದ ಹೆಚ್.ಡಿ. ಕುಮಾರಸ್ವಾಮಿ ಅವರ ಸ್ಪರ್ಧೆಗೆ ಒತ್ತಾಯ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಕೋರ್ ಕಮಿಟಿ ಸಭೆ ಇದೆ ಎಂದು ಹೇಳಿದರು.
ಈಗಾಗಲೇ ಮಂಡ್ಯದಲ್ಲಿ ಸಭೆ ಮಾಡಿದ್ದೇವೆ. ಹೆಚ್ಡಿಕೆ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಮಂಡ್ಯ ನಾಯಕರು ಒತ್ತಾಯಿಸಿದ್ದಾರೆ. ಇಂದು ಮಂಡ್ಯ ಕಾರ್ಯಕರ್ತರ ಜೊತೆಗೆ ಸಭೆ ಇದೆ. ಮಂಡ್ಯ ನಾಯಕರ ಸಭೆ ಬಳಿಕ ಅಂತಿಮ ತೀರ್ಮಾನ ಮಾಡುತ್ತೇವೆ. ಕೋಲಾರ ಅಭ್ಯರ್ಥಿ ವಿಚಾರದಲ್ಲಿ ಗೊಂದಲವಿಲ್ಲ ಎಂದರು.
ಇದನ್ನೂ ಓದಿ: ಮೋದಿ ವಿರುದ್ಧ ಪ್ರಚೋದನಾಕಾರಿ ಹೇಳಿಕೆ: ಸಚಿವ ಶಿವರಾಜ್ ತಂಗಡಗಿ ವಿರುದ್ಧ ದೂರು ದಾಖಲು - COMPLAINT AGAINST THANGADAGI